ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಮಾಂಸದ ಬೆಲೆ ಕೆ.ಜಿಗೆ ₹ 800

ಕೋಳಿ ಮಾಂಸದ ಬೆಲೆಯಲ್ಲಿ ಅರ್ಧದಷ್ಟು ಕುಸಿತ
Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೀದರ್‌: ಎಲ್ಲೆಡೆ ಕೋವಿಡ್ 19 ಸೋಂಕಿನ ಭೀತಿ ಆವರಿಸಿಕೊಂಡರೂ ಕೋಳಿ ಹಾಗೂ ಕುರಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಜಿಲ್ಲೆಯ ನಗರ ಪ್ರದೇಶದಲ್ಲಿ ಮಾಂಸದ ಅಂಗಡಿಗಳನ್ನು ಬಂದ್‌ ಮಾಡಿದ್ದರೆ, ಕೆಲ ಪಟ್ಟಣ ಹಾಗೂ ಹೋಬಳಿಗಳಲ್ಲಿ ಮಾರಾಟ ಮುಂದುವರಿದಿದೆ. ಕೋಳಿ ಮಾಂಸದ ಬೆಲೆ ಪ್ರತಿ ಕೆ.ಜಿಗೆ ₹ 100ಗೆ ಕುಸಿದರೆ, ಕುರಿ ಮಾಂಸದ ಬೆಲೆ ₹800ಗೆ ಏರಿದೆ.

ಕೋವಿಡ್ 19 ಸೋಂಕು ಕಾಣಿಸಿಕೊಳ್ಳುವ ಮೊದಲು ಜಿಲ್ಲೆಯಲ್ಲಿ ಕೋಳಿ ಮಾಂಸ ಕೆ.ಜಿಗೆ ₹ 180ರಂತೆ ಮಾರಾಟವಾಗಿತ್ತು. ಆದರೆ ಇದೀಗ ₹ 100ಗೆ ಕುಸಿದಿದೆ. ಕೋಳಿ ಸಾಕಾಣಿಕೆಯ ನಿರ್ವಹಣೆ ವೆಚ್ಚವೇ ಅಧಿಕವಾಗುತ್ತಿರುವ ಕಾರಣ ಕೆಲವರು ಇನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕೋಳಿ ಮೊಟ್ಟೆ ವ್ಯಾಪಾರದಲ್ಲೂ ಭಾರಿ ಕುಸಿತ ಉಂಟಾಗಿದೆ. ಹೋಲ್‌ಸೇಲ್‌ನಲ್ಲಿ ₹ 4 ರೂಪಾಯಿಗೆ ಮಾರಾಟವಾಗುತ್ತಿದ್ದ ಮೊಟ್ಟೆ ಈಗ ₹ 2ಗೆ ಮಾರಾಟವಾಗುತ್ತಿದೆ. ಫಾರ್ಮ್‌ಗಳಿಗೆ ಸಾಗಣೆ ವೆಚ್ಚ ಸಹ ಭರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಕಡಿಮೆಯಾಗಿಲ್ಲ. ಜನ ಆಮ್ಲೆಟ್‌ ಮಾಡಲು ಹಾಗೂ ಕುದಿಸಿ ತಿನ್ನಲು ಮೊಟ್ಟೆ ಒಯ್ಯುತ್ತಿದ್ದಾರೆ.

ದೇಶದೆಲ್ಲೆಡೆ ಕೋವಿಡ್‌ 19 ಸೋಂಕು ಸಮಸ್ಯೆ ಎದುರಾಗಿದೆ. ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ತಜ್ಞರು ಹಾಗೂ ಪಶು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕೋವಿಡ್‌ 19 ಅಳಿದು ಒಳ್ಳೆಯ ದಿನಗಳು ಬರುವ ನಿರೀಕ್ಷೆ ಇದೆ ಎಂದು ಹುಮನಾಬಾದ್‌ ತಾಲ್ಲೂಕಿನ ಕೋಳಿ ಫಾರ್ಮ್‌ಗಳ ಮಾಲೀಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಔರಾದ್‌ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ನಿತ್ಯ 500 ರಿಂದ 600 ಕೋಳಿಗಳು ಮಾರಾಟವಾಗುತ್ತಿವೆ. ಹುಮನಾಬಾದ್‌ನ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮುಂದುವರಿದಿದೆ. ಬಿಸಿಲು ಇರುವ ಕಾರಣ ಕೆಲ ಕಡೆ ಸಹಜವಾಗಿಯೇ ಕೋಳಿ ಮಾರಾಟ ಕಡಿಮೆಯಾಗಿದೆ.

ಬೀದರ್‌ ಜಿಲ್ಲೆಯಲ್ಲಿ ನಿತ್ಯ ಸಾಮಾನ್ಯವಾಗಿ 10 ಟನ್‌ ಕೋಳಿ ಮಾಂಸ ಮಾರಾಟವಾಗುತ್ತದೆ. 10 ದಿನಗಳಿಂದ ಬೀದರ್ ನಗರ ಸೇರಿದಂತೆ ಬಹುತೇಕ ಕಡೆ ಅಂಗಡಿಗಳು ಬಂದ್‌ ಆಗಿವೆ. ಹೀಗಾಗಿ ಕೋಳಿ ಫಾರ್ಮ್ ಮಾಲೀಕರು ಹಾಗೂ ಮಾರಾಟಗಾರರು ಹಾನಿ ಅನುಭವಿಸುತ್ತಿದ್ದಾರೆ ಎಂದು ಚಿಕನ್‌ ಡೀಲರ್‌ ಅಸೋಸಿಯೇಷನ್ ಅಧ್ಯಕ್ಷ ಶೇಖ ಖಲೀಲ್ ಹೇಳುತ್ತಾರೆ.

ಕೋಳಿ ಮಾಂಸದ ಅಂಗಡಿಗಳನ್ನು ಮುಚ್ಚಿರುವ ಕಾರಣ ಮೊಟ್ಟೆಗಳ ಬೇಡಿಕೆ ಹೆಚ್ಚಾಗಿದ್ದು, ಜನ ಕಿರಾಣಿ ಅಂಗಡಿಗಳಿಂದ ಖರೀದಿಸುತ್ತಿದ್ದಾರೆ.

ಕುರಿ, ಮೇಕೆ ಮಾಂಸ ಮಾರಾಟ ಜಿಲ್ಲೆಯಾದ್ಯಂತ ಬಂದ್‌ ಮಾಡಲಾಗಿದೆ. ಒಂದು ವಾರದ ಅವಧಿಯಲ್ಲಿ ಕುರಿ ಮಾಂಸದ ಬೆಲೆ ಪ್ರತಿ ಕೆ.ಜಿಗೆ ₹ 500ರಿಂದ ₹800ಗೆ ಹೆಚ್ಚಾಗಿದೆ. ಕುರಿ ಮಾಂಸ ಬೇಕಾದವರು ಮೊದಲೇ ತಿಳಿಸಬೇಕಾಗುತ್ತದೆ. ಬೇಡಿಕೆಯನ್ನು ಆಧರಿಸಿ ಕೆಲವರು ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಕಮಲನಗರ ತಾಲ್ಲೂಕಿನ ಗ್ರಾಮಸ್ಥರೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT