ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಲೆ ದುಪ್ಪಟ್ಟು

ಬಹುತೇಕ ತರಕಾರಿಗಳ ಬೆಲೆ ಹೆಚ್ಚಳ
Last Updated 14 ಮೇ 2022, 15:37 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಮದುವೆ, ಮುಂಜಿವೆಗಳು ಮುಂದುವರಿದಿರುವ ಕಾರಣ ತರಕಾರಿ ಬೆಲೆ ಇಳಿದಿಲ್ಲ. ಟೊಮೆಟೊ ಬೆಲೆ ದುಪ್ಪಟ್ಟಾಗಿದೆ.

ಬೀನ್ಸ್‌ ಬೆಲೆಯಲ್ಲಿ ಮತ್ತೆ ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರ ಹೆಚ್ಚಳವಾಗಿದೆ. ಸಬ್ಬಸಗಿ, ತೊಂಡೆಕಾಯಿ, ಹೂಕೋಸು ₹ 2 ಸಾವಿರ, ನುಗ್ಗೆಕಾಯಿ ₹ 3 ಸಾವಿರ ಹಾಗೂ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿಕೆಯಾಗಿದೆ. ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರ ಇದ್ದ ಟೊಮೆಟೊ ಬೆಲೆ ₹ 8 ಸಾವಿರಕ್ಕೆ ಜಿಗಿದಿದೆ.

ಮೂರು ವಾರಗಳಿಂದ ಈರುಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿಲ್ಲ. ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವುದು ಈರುಳ್ಳಿ ಮಾತ್ರ. ಈರುಳ್ಳಿ ಬೆಳೆದ ರೈತರು ಸಂಕಷ್ಟದಲ್ಲಿ ಇದ್ದರೆ, ತರಕಾರಿ ಏಜೆಂಟರು ಮಾತ್ರ ಈರುಳ್ಳಿ ಮಾರಾಟದಲ್ಲಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಬೆಲೆ ಕಡಿಮೆ ಇರುವ ಕಾರಣ ಹೋಟೆಲ್‌, ಖಾನಾವಳಿ, ರೆಸ್ಟೋರಂಟ್‌ ಹಾಗೂ ಕೇಟರಿಂಗ್‌ನವರು ಈರುಳ್ಳಿ ಖರೀದಿಸಿ ಇಟ್ಟು ಕೊಳ್ಳುತ್ತಿದ್ದಾರೆ.

ಆಲೂಗಡ್ಡೆ, ಬೀಟ್‌ರೂಟ್‌, ಎಲೆಕೋಸು, ಗಜ್ಜರಿ, ಬದನೆಕಾಯಿ, ಬೆಂಡೆಕಾಯಿ, ಪಾಲಕ್‌, ಹಿರೇಕಾಯಿ, ಡೊಣ ಮೆಣಸಿನಕಾಯಿ, ಚವಳೆಕಾಯಿ, ಕರಿಬೇವು ಹಾಗೂ ಮೆಂತೆ ಸೊಪ್ಪಿನ ಬೆಲೆ ಸ್ಥಿರವಾಗಿದೆ.

ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರ ಕಡಿಮೆಯಾಗಿದೆ. ಆದರೆ, ಒಣ ಮೆಣಸಿನಕಾಯಿ ಬೆಲೆಯಲ್ಲಿ ಇಳಿಕೆಯಾಗಿಲ್ಲ. ಕೊತಂಬರಿ ₹ 2 ಸಾವಿರ ಕಡಿಮೆಯಾಗಿದೆ.

ಇನ್ನೂ 20 ದಿನಗಳಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇದೆ. ರೈತರು ಭೂಮಿ ಹದ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಹೊಸ ತರಕಾರಿ ಸಸಿಗಳನ್ನು ನಾಟಿ ಮಾಡಿಲ್ಲ. ಕಾರಣ ಮುಂದಿನ ಮೂರು ವಾರ ತರಕಾರಿ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ನೆರೆಯ ಹೈದರಾಬಾದ್‌ನಿಂದ ಟೊಮೆಟೊ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ಗಜ್ಜರಿ, ಬೀಟ್‌ರೂಟ್‌, ತೊಂಡೆಕಾಯಿ, ಚವಳೆಕಾಯಿ ಬೀದರ್‌ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಬದನೆಕಾಯಿ, ಎಲೆಕೋಸು, ಹಿರೇಕಾಯಿ, ಸಬ್ಬಸಗಿ ಹಾಗೂ ಕರಿಬೇವು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT