ಹುಲಸೂರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿಯಿಡಿ ಮಳೆ ಸುರಿದಿದೆ.
ಸಮೀಪದ ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದಲ್ಲಿ ಸೋಮವಾರ ರಾತ್ರಿಯಿಡಿ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಸಿಡಿಲು ಬಡಿದು ಗ್ರಾಮದ ಅಂಬಾಭವಾನಿ ದೇವಾಲಯದ ಗೋಪುರಕ್ಕೆ ಹಾನಿಯಾಗಿದೆ. ಕಳಸ ಕಿತ್ತು ಬಂದಿದೆ. ಗೋಪುರದ ಕೆಲ ಭಾಗ ಕಳಚಿದೆ. ದೇವಾಲಯದ ಗೋಡೆಗಳು ಬಿರುಕು ಬಿಟ್ಟಿದ್ದು, ಗೋಡೆ ಹಾಗೂ ನೆಲಹಾಸುಗಳಿಗೆ ಅಳವಡಿಸಿದ್ದ ಟೈಲ್ಸ್‌ಗಳು ಕಿತ್ತು ಬಂದಿವೆ.
ಕಟಾವಿಗೆ ಬಂದ ಸೋಯಾ ಬೆಳೆ ಹಾಳಾಗಿದೆ. ವಿದ್ಯುತ್ ಕಂಬಗಳು ಬಾಗಿದ್ದರಿಂದ ಕೆಲ ಕಡೆ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಹೊಲಗಳ ಒಡ್ಡುಗಳು ಕೊಚ್ಚಿಕೊಂಡು ಹೋಗಿವೆ. ಹೊಲಗಳಿಂದ ಮಳೆ ನೀರು ಹೊರ ಬಂದ ಪರಿಣಾಮ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.
ನೆರೆ ರಾಜ್ಯದಿಂದಲೂ ಮಾಂಜ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಮಂಗಳವಾರ ನದಿ ತನ್ನ ಒಡಲು ತುಂಬಿಕೊಂಡು ಹರಿಯಲಾರಂಭಿಸಿದೆ.
ನೆರೆ ರಾಜ್ಯದ ಲಾತೂರ್, ಉಸ್ಮಾನಾಬಾದ್, ಬಿಡ, ಸೋಲಾಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ತಾಲ್ಲೂಕಿನ ಅಳವಾಯಿ, ಬೇಲೂರ, ಮಿರಖಲ, ಗಡಿಗೌಡಗಾಂವ್, ಅಟ್ಟರಗಾ, ಮೆಹಕರ, ಹಲಸಿ ತುಗಾಂವ, ಸಾಯಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ.
ಮಾಂಜ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹೆಚ್ಚಿನ ಮಳೆ ಸುರಿದರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಾಂಜ್ರಾ ನದಿ ಪಾತ್ರದ ಗ್ರಾಮಗಳ ರೈತರು, ಜಾನುವಾರುಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ‘ಪ್ರಜಾವಾಣಿ’ಗೆ ತಿಳಿಸಿದರು.