ಮಂಗಳವಾರ, ಜೂನ್ 28, 2022
28 °C
ಸಂತಪುರ-–ಸಂಗಮ ಮುಖ್ಯರಸ್ತೆಗೆ ಹೊಂದಿಕೊಂಡ ಸೇತುವೆ; ಅಂತರರಾಜ್ಯ ಪ್ರಯಾಣಿಕರಲ್ಲಿ ಭೀತಿ

ಮೊದಲ ಮಳೆಗೆ ಕಿತ್ತು ಹೋದ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನ ಸಂತಪುರ-ಸಂಗಮ ಮುಖ್ಯ ರಸ್ತೆಗೆ ಹೊಂದಿಕೊಂಡು ನಾಗೂರ ಬಳಿ ನಿರ್ಮಿಸಲಾದ ಬದಲಿ ರಸ್ತೆ ಬುಧವಾರ ಸುರಿದ ಮಳೆಯಿಂದ ಕಿತ್ತು ಹೋಗಿದೆ.

ಅಂತರರಾಜ್ಯ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆ ಮೇಲಿನ ಸೇತುವೆ ಶಿಥಿಲಗೊಂಡಿದೆ. ಒಂದು ವರ್ಷದ ಹಿಂದೆಯೇ ಸೇತುವೆ ಮೇಲಿಂದ ವಾಹನ ಸಂಚಾರ ಸ್ಥಗಿತ ಮಾಡಿ, ಬದಲಿ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಬುಧವಾರ ಸುರಿದ ಮಳೆಗೆ ಈ ರಸ್ತೆಯ ಒಂದು ಭಾಗ ಕಿತ್ತು ಹೋಗಿ ಪ್ರಯಾಣಿಕರಲ್ಲಿ ಭೀತಿ ಆವರಿಸಿದೆ.

‘ತೆಲಂಗಾಣ, ಮಹಾರಾಷ್ಟ್ರ ಹಾಗೂ ಜಿಲ್ಲೆಯ ಅನ್ಯ ತಾಲ್ಲೂಕುಗಳಿಗೆ ಸಂಪರ್ಕಿಸುವ ಈ ರಸ್ತೆ ಮೇಲಿನ ಸೇತುವೆ ಶಿಥಿಲವಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬದಲಿ ರಸ್ತೆ ಸರಿಯಿಲ್ಲ. ಸ್ವಲ್ಪ ಮಳೆಯಾದರೂ ಮೇಲಿಂದ ನೀರು ಹರಿಯುತ್ತದೆ. ಹೀಗಾಗಿ ಈ ಭಾಗದ ಹತ್ತಾರು ಹಳ್ಳಿ ಜನ ನಗರ ಪ್ರದೇಶಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ ತಿಳಿಸಿದ್ದಾರೆ.

‘ರೈತರಿಗೂ ಹಾಳಾದ ಈ ಸೇತುವೆ ಸಮಸ್ಯೆಯಾಗಿ ಪರಿಣಮಿಸಿದೆ. ತಮ್ಮ ಹೊಲಗಳಿಗೆ ಹೋಗಲು ನಾಲ್ಕೈದು ಕಿ.ಮೀ. ಸುತ್ತು ಹಾಕಬೇಕಿದೆ. ಕೂಡಲೇ ಇಲ್ಲಿ ಹೊಸದಾಗಿ ಸೇತುವೆ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ತಾಲ್ಲೂಕಿನಲ್ಲಿ ಹಲವು ರಸ್ತೆಗಳು ಹಾಳಾಗಿವೆ. ಸಂತಪುರನಿಂದ ಜಮಗಿ ವರೆಗಿನ ರಸ್ತೆ ಕೆಟ್ಟು ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಖಾನಾಪುರ-ಸೊರಳ್ಳಿ ನಡುವಿನ ರಸ್ತೆ ಕೆಟ್ಟು ನಿಂತು ನಿತ್ಯ ಅವಘಡ ಸಂಭವಿಸುತ್ತಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಹಾಳಾದ ರಸ್ತೆ ದುರಸ್ತಿ ಮಾಡಿಸಬೇಕು’ ಎಂದು ಸಂತಪುರನ ಸಾಮಾಜಿಕ ಕಾರ್ಯಕರ್ತ ಸಾಯಿಕುಮಾರ ಘೋಡ್ಕೆ ಹಾಗೂ ಕಿಸಾನ ಸಭಾ ತಾಲ್ಲೂಕು ಅಧ್ಯಕ್ಷ ಅಹಮ್ಮದ್ ಜಮಗಿ ಆಗ್ರಹಿಸಿದ್ದಾರೆ.

‘ಸಂಗಮ ರಸ್ತೆಯಲ್ಲಿರುವ ನಾಗೂರ ಬಳಿ ಸೇತುವೆ ಶಿಥಿಲಗೊಂಡಿದೆ. ಹೀಗಾಗಿ ಅದರ ಮೇಲಿನ ಸಂಚಾರ ಸ್ಥಗಿತ ಮಾಡಿ ಬದಲಿ ರಸ್ತೆ ನಿರ್ಮಿಸಲಾಗಿದೆ. ಅದೂ ಹಾಳಾಗಿರುವ ಮಾಹಿತಿ ಬಂದಿದೆ. ದುರಸ್ತಿ ಮಾಡಿ ಅನುಕೂಲ ಕಲ್ಪಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವೀರಶೆಟ್ಟಿ ರಾಠೋಡ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.