ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು

ನ್ಯಾಯಾಧೀಶ ಸತ್ಯನಾರಾಯಣಾಚಾರ್ಯ ಹೇಳಿಕೆ
Last Updated 21 ಅಕ್ಟೋಬರ್ 2020, 14:02 IST
ಅಕ್ಷರ ಗಾತ್ರ

ಬೀದರ್: ‘ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಮಹತ್ವದ ಪಾತ್ರ ವಹಿಸಿದ್ದಾರೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಾಡಲೂರ ಸತ್ಯನಾರಾಯಣಾಚಾರ್ಯ ಹೇಳಿದರು.

ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್‌ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೊಲೀಸರ ಕಾರ್ಯ ಇತರೆ ಸರ್ಕಾರಿ ಕೆಲಸದಂತಿಲ್ಲ. ಒಂದೊಮ್ಮೆ ಅವಧಿ ಮೀರಿಯೂ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಮಾಜ ಅವರಿಗೆ ನೈತಿಕ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಕರ್ತವ್ಯದ ಮೇಲೆ ಇರುವ ಯಾವುದೇ ವ್ಯಕ್ತಿ ಸಾವಿಗೀಡಾದರೆ ಅವರ ಕುಟುಂಬ ಹೆಚ್ಚು ಸಂಕಷ್ಟಗಳಿಗೆ ಸಿಲುಕುತ್ತದೆ. ಪೊಲೀಸ್‌ ಹುತಾತ್ಮರ ಕುಟುಂಬಗಳ ಸಮಸ್ಯೆಗೂ ಸ್ಪಂದಿಸಬೇಕಾಗಿದೆ’ ಎಂದು ಹೇಳಿದರು.

‘ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯ ಪೊಲೀಸ್‌ ಕಾನ್‌ಸ್ಟೆಬಲ್‌ ರವೀಂದ್ರ ಅವರು ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಸೇವೆಯಲ್ಲಿರುವ ವ್ಯಕ್ತಿ ಸಾವಿಗೀಡಾದರೆ ಅವರ ಕುಟುಂಬಕ್ಕೆ ಸಮಾಜದಿಂದ ದೂರವಾದಂತೆ ಭಾಸವಾಗುತ್ತದೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ಅವರು, ದೇಶದಲ್ಲಿ ಪ್ರಸಕ್ತ ವರ್ಷದಲ್ಲಿ ಹುತಾತ್ಮರಾದ ಪೊಲೀಸ್‌ ಸಿಬ್ಬಂದಿಯ ಹೆಸರು ಓದಿದರು.

‘ದೇಶದ ಲಡಾಕ್‌ ಗಡಿಯಲ್ಲಿ ವೀರ ಮರಣ ಹೊಂದಿದ ಪೊಲೀಸರ ಪೊಲೀಸ್ ಸ್ಮಾರಕ ನಿರ್ಮಿಸಲಾಗಿದೆ. ದೇಶದಲ್ಲಿ ಒಂದು ವರ್ಷದಲ್ಲಿ 264 ಪೊಲೀಸರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಹಿಂಭಾಗದ ಮೈದಾನ ಪಕ್ಕದಲ್ಲಿರುವ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬಿ. ಬೀದರ್‌ ಡಿವೈಎಸ್‌ಪಿ ಬಸವೇಶ್ವರ ಹೀರಾ, ಭಾಲ್ಕಿ ಡಿವೈಎಸ್‌ಪಿ ದೇವರಾಜ್, ಹುಮನಾಬಾದ್ ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಹಾಗೂ ಪೊಲೀಸ್‌ ಅಧಿಕಾರಿಗಳು ಇದ್ದರು.
ಪೊಲೀಸ್‌ ಕುಟುಂಬದವರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಹೆಡ್‌ಕಾನ್‌ಸ್ಟೆಬಲ್‌ ವರದರಾಜ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT