ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ದೇಶದ ಅರ್ಥ ವ್ಯವಸ್ಥೆಗೆ ಬಲ ತುಂಬಿದ ಎಸ್‍ಎಚ್‍ಜಿ -ತೇಜಸ್ವಿನಿ ಅನಂತಕುಮಾರ

ಸ್ವಸಹಾಯ ಗುಂಪುಗಳ ದಿನಾಚರಣೆ
Last Updated 11 ನವೆಂಬರ್ 2021, 13:21 IST
ಅಕ್ಷರ ಗಾತ್ರ

ಬೀದರ್‌: ‘ಮಹಿಳಾ ಸ್ವಸಹಾಯ ಗುಂಪುಗಳು ಕುಟುಂಬಗಳ ಅರ್ಥ ವ್ಯವಸ್ಥೆಗಷ್ಟೇ ಅಲ್ಲ; ದೇಶದ ಅರ್ಥ ವ್ಯವಸ್ಥೆಗೂ ಬಲ ತುಂಬಿವೆ’ ಎಂದು ಬೆಂಗಳೂರಿನ ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ ಅಭಿಪ್ರಾಯಪಟ್ಟರು.

ಇಲ್ಲಿಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನದ ನಿಮಿತ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಜಿಲ್ಲೆಯ ಸ್ವಸಹಾಯ ಗುಂಪುಗಳ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ರಚಿಸಿದ ಸ್ವಸಹಾಯ ಗುಂಪುಗಳು ನಿಜ ಅರ್ಥದಲ್ಲಿ ಮಹಿಳಾ ಸಬಲೀಕರಣ ಸಾಕಾರಗೊಳಿಸಿವೆ. ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸಿವೆ. ಇಡೀ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿವೆ ಎಂದು ತಿಳಿಸಿದರು.

ಸ್ವಸಹಾಯ ಗುಂಪುಗಳ ಮಹಿಳೆಯರು ಉಳಿತಾಯ ಖಾತೆ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಭದ್ರಪಡಿಸಿಕೊಂಡಿದ್ದಾರೆ. ಇತರರಿಗೂ ನೆರವಾಗಿದ್ದಾರೆ. ಅನೇಕ ಶ್ರೀಮಂತರು ಬ್ಯಾಂಕ್‍ಗಳಿಂದ ನೂರಾರು ಕೋಟಿ ರೂಪಾಯಿ ಸಾಲ ಪಡೆದು ಮೋಸ ಮಾಡಿ, ದೇಶದ ಬಿಟ್ಟು ಓಡಿ ಹೋಗಿದ್ದಾರೆ. ಆದರೆ, ಸ್ವಸಹಾಯ ಗುಂಪುಗಳ ಮಹಿಳೆಯರು ಸಾಲ ಉಳಿಸಿಕೊಂಡ ಉದಾಹರಣೆಗಳು ಇಲ್ಲ ಎಂದು ಹೇಳಿದರು.

ಸ್ವಸಹಾಯ ಗುಂಪುಗಳ ಪರಿಕಲ್ಪನೆ ವಿಶ್ವವ್ಯಾಪಿಯಾಗಬೇಕಿದೆ. ಸ್ವಸಹಾಯ ಗುಂಪುಗಳ ಮೂಲಕ ಸಬಲರಾದವರು ಇನ್ನಷ್ಟು ಗುಂಪುಗಳನ್ನು ರಚಿಸುವ ಹಾಗೂ ಸಮಾಜದ ಏಳಿಗೆಗೆ ಶ್ರಮಿಸುವ ಮೂಲಕ ನಾಗಮಾರಪಳ್ಳಿ ಅವರ ಋಣ ತೀರಬೇಕಿದೆ ಎಂದು ತಿಳಿಸಿದರು.

ನಾಗಮಾರಪಳ್ಳಿ ಅವರ ಪುತ್ರರಾದ ಉಮಾಕಾಂತ ನಾಗಮಾರಪಳ್ಳಿ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಅವರು ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತಿದ್ದಾರೆ. ಸಮಾಜ ಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಗುರುಪಾದಪ್ಪ ನಾಗಮಾರಪಳ್ಳಿ ಅವರು ಡಿಸಿಸಿ ಬ್ಯಾಂಕ್‍ನ್ನು ಬೃಹದಾಕಾರವಾಗಿ ಬೆಳೆಸಿದ್ದಾರೆ. ಅವರು ಅಧ್ಯಕ್ಷರಾಗುವ ಮುನ್ನ ಬ್ಯಾಂಕ್ ಬಂಡವಾಳ ₹ 8 ಕೋಟಿ, ಠೇವಣಿ ₹ 1.5 ಕೋಟಿ ಇತ್ತು. ಈಗ ಬ್ಯಾಂಕ್ ₹ 4,500 ಕೋಟಿ ವಹಿವಾಟು ನಡೆಸುತ್ತಿದೆ. ಠೇವಣಿ ಮೊತ್ತ ₹ 2,000 ಕೋಟಿ ಇದೆ ಎಂದು ತಿಳಿಸಿದರು.

ಬ್ಯಾಂಕ್‍ನಿಂದ ಜಿಲ್ಲೆಯ 1.54 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ 184 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ವಿತರಿಸಲಾಗುತ್ತಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ 2016 ರಿಂದಲೂ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿದರು.

ನಾಗಮಾರಪಳ್ಳಿ ಅವರು ಸ್ಥಾಪಿಸಿದ ಸ್ವಸಹಾಯ ಗುಂಪುಗಳ ಪರಿಕಲ್ಪನೆ ಅಧ್ಯಯನಕ್ಕೆ 80 ದೇಶಗಳ ಪ್ರತಿನಿಧಿಗಳು ಬೀದರ್‌ಗೆ ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗ 30,330 ಸ್ವಸಹಾಯ ಗುಂಪುಗಳು ಇದ್ದು, ಅದರಲ್ಲಿ 4.56 ಲಕ್ಷ ಸದಸ್ಯರು ಇದ್ದಾರೆ ಎಂದು ತಿಳಿಸಿದರು.

ಶಾಸಕ ರಹೀಂಖಾನ್ ಮಾತನಾಡಿ, ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ವಿವಿಧ ಸಂಸ್ಥೆಗಳನ್ನು ಸ್ಥಾಪಿಸಿ ಗುರುಪಾದಪ್ಪ ನಾಗಮಾರಪಳ್ಳಿ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಅವರು ಪರಿಚಯಿಸಿದ ಸ್ವಸಹಾಯ ಗುಂಪುಗಳು ಮಹಿಳಾ ಸ್ವಾವಲಂಬನೆಯಲ್ಲಿ ಅತಿದೊಡ್ಡ ಪಾತ್ರ ವಹಿಸಿವೆ ಎಂದು ಹೇಳಿದರು.

ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಗುರುಪಾದಪ್ಪ ನಾಗಮಾರಪಳ್ಳಿ ಅವರು ವಿಶ್ವಕ್ಕೆ ಮಾದರಿಯಾದ ಸ್ವಸಹಾಯ ಗುಂಪುಗಳನ್ನು ರಚಿಸಿ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆಗೆ ಶ್ರಮಿಸಿದ್ದರು. ಪರಿಣಾಮವಾಗಿ, ಇಂದು ಗ್ರಾಮೀಣ ಭಾಗದಲ್ಲಿ ಎಸ್‍ಎಚ್‍ಜಿ ಸದಸ್ಯರೇ ಎಟಿಎಂಗಳಂತಾಗಿದ್ದಾರೆ. ನಾಗಮಾರಪಳ್ಳಿ ಅವರು ಸ್ಥಾಪಿಸಿದ ಸಹಕಾರ ಆಸ್ಪತ್ರೆ ಅವರ ಆಶಯದಂತೆ ಕಡಿಮೆ ದರದಲ್ಲಿ ಜಿಲ್ಲೆಯ ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.

ಸ್ವಸಹಾಯ ಗುಂಪುಗಳ ಸದಸ್ಯೆಯರು ಎಸ್‍ಎಚ್‍ಜಿಯಿಂದ ತಮ್ಮ ಕುಟುಂಬದಲ್ಲಿ ಆದ ಬದಲಾವಣೆ, ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಕೊಡುಗೆ ಕುರಿತು ಗಾಯನ, ನೃತ್ಯ ರೂಪಕ ಪ್ರಸ್ತುತಪಡಿಸಿದರು.

ಅದಮ್ಯ ಚೇತನದ ಸ್ವಯಂ ಸೇವಕಿ ಮೀನಾ ಶಾಸ್ತ್ರಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ ಇದ್ದರು. ಉಮಾದೇವಿ ಚಿಲ್ಲರ್ಗೆ ನಿರೂಪಿಸಿದರು. ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಅನಿಲಕುಮಾರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT