ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸರ್ವಶ್ರೇಷ್ಠ ಗ್ರಂಥ ಸಂವಿಧಾನ

ಜಾಗೃತಿ ಅಭಿಯಾನದ ಸಮಾರೋಪದಲ್ಲಿ ಮಹೇಶ ಗೋರನಾಳಕರ್ ಬಣ್ಣನೆ
Last Updated 28 ಜನವರಿ 2021, 14:13 IST
ಅಕ್ಷರ ಗಾತ್ರ

ಬೀದರ್‌: ‘ಸಂವಿಧಾನವು ದೇಶದ ಸರ್ವ ಧರ್ಮಗ್ರಂಥಗಳಿಗಿಂತಲೂ ಶ್ರೇಷ್ಠ ಹಾಗೂ ಪವಿತ್ರ ಗ್ರಂಥವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನ ಪಾಲಿಗೆ ರಕ್ಷಾ ಕವಚವಾಗಿದೆ’ ಎಂದು ಬುದ್ಧ, ಬಸವ, ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್‌ ಬಣ್ಣಿಸಿದರು.

ಇಲ್ಲಿಯ ಛಲವಾದಿ ಭವನದಲ್ಲಿ ಗುರುವಾರ ಆಯೋಜಿಸಿದ್ದ 21 ದಿನಗಳ ವರೆಗೆ ನಡೆದ ಮನೆ ಮನೆಗೆ ಸಂವಿಧಾನ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದ ಮೂಲಾಧಾರವೇ ದೇಶದ ಸಂವಿಧಾನ. 1949ರ ನವೆಂಬರ್‌ 26ರಂದು ದೇಶಕ್ಕೆ ಸಂವಿಧಾನ ಅಳವಡಿಸಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ಮರೆಯಲಾಗದ ದಿನ ಅದು’ ಎಂದು ಹೇಳಿದರು.

‘ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳಿವೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಡಾ.ಬಾಬಾಸಾಹೇಬ ಅಂಬೇಡ್ಕರ್‌ ನೇತೃತ್ವದಲ್ಲಿ ಅನೇಕ ತಜ್ಞರು ಶ್ರಮ ವಹಿಸಿದ ಫಲವಾಗಿ 1949ರ ನವೆಂಬರ್‌ 26ರಂದು ಸಂವಿಧಾನ ಪೂರ್ಣಗೊಂಡಿತ್ತು. ಈ ನೆನಪಿಗಾಗಿಯೇ ನವೆಂಬರ್‌ 26ನ್ನು 'ರಾಷ್ಟ್ರೀಯ ಸಂವಿಧಾನ ದಿನ'ವಾಗಿ ಆಚರಿಸಲಾಗುತ್ತಿದೆ’ ಎಂದರು.

‘ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಿದರೂ 1950ರ ಜನವರಿ 26ರಂದು ಜಾರಿಗೆ ಬಂದಿತು. ಸಂವಿಧಾನ ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ. ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ’ ಎಂದು ತಿಳಿಸಿದರು.

‘ದೇಶದ 130 ಕೋಟಿ ಜನರು ಸಂವಿಧಾನ ಬದ್ಧವಾಗಿ ಮತದಾನ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಅಭಿವ್ಯಕ್ತಿ, ಸಮಾನತೆ ಹಾಗೂ ಜೀವಿಸುವ ಹಕ್ಕು ಪಡೆದುಕೊಂಡಿದ್ದಾರೆ. ಸಂವಿಧಾನದ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

‘ಸಂವಿಧಾನ ಜಾರಿಯಾಗಿ 71 ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ 2021ರ ಜನವರಿ 5ರಿಂದ 26 ರ ವರೆಗೆ ಒಟ್ಟು 21 ದಿನ ಬೀದರ್‌ ತಾಲ್ಲೂಕಿನ 78 ಹಳ್ಳಿಗಳಲ್ಲಿ ಕಾಲ್ನಡಿಗೆಯ ಮೂಲಕ ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ, ಯುವಕರಿಗೆ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಂವಿಧಾನದ ಮಹತ್ವ ತಿಳಿಸುವ ಕಾರ್ಯವನ್ನು ಮಾಡಲಾಗಿದೆ’ ಎಂದು ತಿಳಿಸಿದರು.

ಸಂವಿಧಾನದ ಪೀಠಿಕೆಯನ್ನು ಓದಿ ಹೇಳುವ ಮೂಲಕ ಸಂವಿಧಾನದ ಮೂಲ ಆಶಯಗಳು ಎಲ್ಲರಿಗೂ ತಿಳಿಯುವಂತೆ ಮಾಡಲಾಗಿದೆ. 25 ಸಾವಿರ ಜನರಿಗೆ ಸಂದೇಶ ತಲುಪಿಸಲಾಗಿದೆ. ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೂ ದೊರಕಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ, ಪ್ರಮುಖರಾದ ಕಿಶೋರ ನವಲಸಪೂರ, ಗೌತಮ ಬಗದಲ್‌ಕರ್, ಪ್ರಕಾಶ ರಾವಣ, ಚೆನ್ನಬಸವ ಶಾಖೆ, ರೋಹಿತ್ ಲಾಮ್ಲೆ, ಧರ್ಮಪಾಲ ಜ್ಯೋತಿ, ಜಗನಾಥ ಭೋಸ್ಲೆ, ವಿಶ್ವಜೀತ ದಂಡಿನ್, ಉತ್ತಮ ಕೆಂಪೆ, ಗೌತಮ ಕೆಂಪೆ, ಆಕಾಶ ಹಾರೂರಗೇರಿಕರ್, ಸುನೀಲ ಡೋಳೆ, ಮಹಾದೇವ ಕಾಂಬಳೆ, ರಾಹುಲ್ ಜಮಿಸ್ತಾನಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT