ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನಕನಳ್ಳಿಗೆ ನಿತ್ಯ ಟ್ಯಾಂಕರ್ ನೀರು

ಬೆನಕನಳ್ಳಿ ಗ್ರಾಮದಲ್ಲಿ ಬತ್ತಿದ ತೆರೆದ ಬಾವಿ, ಕೊಳವೆಬಾವಿಗಳು
Last Updated 9 ಮೇ 2020, 19:45 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಬೆನಕನಳ್ಳಿ ಗ್ರಾಮಕ್ಕೆ ಈಗ ಟ್ಯಾಂಕರ್ ನೀರೇ ಆಸರೆಯಾಗಿದೆ.

ಗ್ರಾಮದಲ್ಲಿ ಇರುವ ಜಲಮೂಲಗಳು ಬತ್ತಿ ಹೋಗಿರುವ ಕಾರಣ 12 ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

348 ಮನೆಗಳಿರುವ ಗ್ರಾಮದಲ್ಲಿ ಸುಮಾರು 2,200 ಜನಸಂಖ್ಯೆ ಇದೆ. ಎರಡು ಸಾರ್ವಜನಿಕ ತೆರೆದ ಬಾವಿಗಳು ಹಾಗೂ 6 ಕೊಳವೆಬಾವಿಗಳು ಇವೆ. ತೆರೆದ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಆರರಲ್ಲಿ ಒಂದು ಕೊಳವೆಬಾವಿಯಲ್ಲಿ ಮಾತ್ರ ಅಲ್ಪಸ್ವಲ್ಪ ನೀರಿದೆ.

ನೀರಿನ ಸಮಸ್ಯೆ ಉಲ್ಬಣವಾದಾಗ ಮೊದಲಿಗೆ ಪೈಪ್‍ಲೈನ್ ಮೂಲಕ ಕೊಳವೆಬಾವಿ ನೀರು ತೆರೆದ ಬಾವಿಯೊಳಗೆ ಬಿಟ್ಟು ಅದರ ಮೂಲಕ ನಲ್ಲಿಗೆ ಪೂರೈಕೆ ಮಾಡಲಾಗುತ್ತಿತ್ತು. ಕೊಳವೆಬಾವಿಯಲ್ಲೂ ನೀರು ಕಡಿಮೆಯಾದ ಕಾರಣ ನಲ್ಲಿಗೆ ಎರಡು-ಮೂರು ದಿನಗಳಿಗೆ ಒಮ್ಮೆ ನೀರು ಬಿಡಲಾಯಿತು. ಪಂಚಾಯಿತಿ ಅವರು ಕುಡಿಯುವ ನೀರಿನ ವ್ಯವಸ್ಥೆಗೆ ಇದೀಗ ಟ್ಯಾಂಕರ್ ಮೊರೆ ಹೋಗಿದ್ದಾರೆ.

ಎರಡು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಿತ್ಯ ನೀರಿಗಾಗಿ ಪರದಾಟ ನಡೆಸಬೇಕಾಗಿದೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಜನ ಕುಡಿಯುವ ನೀರಿಗಾಗಿ ಸಂಕಟ ಅನುಭವಿಸಬೇಕಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಕೆಲಸ ಈವರೆಗೆ ಆಗಿಲ್ಲ ಎಂದು ದೂರುತ್ತಾರೆ.

‘ಸದ್ಯ ಪಂಚಾಯಿತಿಯವರ ಟ್ಯಾಂಕರ್‌ ನೀರಿಗೆ ಕಾದು ಕುಳಿತುಕೊಳ್ಳಬೇಕಾಗಿದೆ. ಟ್ಯಾಂಕರ್ ನೀರು ಬರುತ್ತಲೇ ಜನ ಮುಗಿ ಬೀಳುತ್ತಿದ್ದಾರೆ. ಕೆಲವೊಮ್ಮೆ ಜಗಳಗಳು ನಡೆಯುತ್ತಿವೆ’ ಎಂದು ಬೇಸರದಿಂದ ನುಡಿಯುತ್ತಾರೆ.

ಟ್ಯಾಂಕರ್ ನೀರು ಪೂರೈಸುವುದು ತಾತ್ಕಾಲಿಕ ಆಗಲಿದೆ. ಹೀಗಾಗಿ ಹೊಸದಾಗಿ ಕೊಳವೆಬಾವಿ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಬೇಡಿಕೆ ಮಂಡಿಸುತ್ತಾರೆ.

ಗ್ರಾಮದ ಜನರ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 12 ದಿನಗಳಿಂದ ಖಾಸಗಿ ಟ್ಯಾಂಕರ್ ಮೂಲಕ ನಿತ್ಯ ನಾಲ್ಕರಿಂದ 6 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ.

ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಟ್ಯಾಂಕರ್ ಮೂಲಕ ಗ್ರಾಮದ ಓಣಿ ಓಣಿಗೆ ತಲುಪಿಸಲಾಗುತ್ತಿದೆ. ಜನರ ಅಗತ್ಯಕ್ಕೆ ಅನುಗುಣವಾಗಿ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸುತ್ತಾರೆ.

ಗ್ರಾಮದಲ್ಲಿ ಜಲಮೂಲಗಳು ಇಲ್ಲ. ಕೊಳವೆಬಾವಿ ಕೊರೆಸಿದರೂ ನೀರು ಲಭಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಬೇಸಿಗೆ ಮುಗಿಯುವವರೆಗೂ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಮಳೆಗಾಲ ಆರಂಭವಾದ ನಂತರ ಸಮಸ್ಯೆ ತಾನಾಗಿಯೇ ಬಗೆಹರಿಯಲಿದೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT