ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತವಾಣಿ: ದೇವನ ಹಂಬಲ

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು
Last Updated 22 ಮಾರ್ಚ್ 2021, 15:25 IST
ಅಕ್ಷರ ಗಾತ್ರ

ಬೀದರ್‌: ದೈವಿ ಒಲುಮೆಗಾಗಿ ನಮ್ಮ ಅಂತರಂಗದಲ್ಲಿ ಹಂಬಲ ಇರಬೇಕು. ಉತ್ಕಟವಾದ ಇಚ್ಛೆ ಇರದಿದ್ದರೆ ಸತ್ಯದ ಸಾಕ್ಷಾತ್ಕಾರವಾಗದು. ಸಮುದ್ರದಿಂದ ಆವಿಯಾದ ನೀರು ಮೊಡವಾಗಿ ತಂಪು ಗಾಳಿಯಿಂದ ಮತ್ತೆ ಮಳೆಯಾಗಿ ಭೂಮಿಗೆ ಬೀಳುತ್ತದೆ. ಭೂಮಿಗೆ ಬಿದ್ದ ನೀರು ತಗ್ಗು, ದಿನ್ನೆ, ಮುಳ್ಳುಕಂಟಿ ಲೆಕ್ಕಿಸದೆ ಹರಿದು ಸಮುದ್ರಕ್ಕೆ ಸೇರಿದಾಗಲೇ ವಿಶ್ರಾಂತಿ.

ನಾವು ಪರಮಾತ್ಮನು ಎಂಬ ಮಹಾಸಾಗರದಿಂದ ಬಂದ ಜೀವಾತ್ಮರುಗಳು. ಪರಮಾತ್ಮನ ಅಂಶವೇ ಆಗಿರುತ್ತೇವೆ. ಏನೇ ಕಷ್ಟ ಬರಲಿ, ಸಂಸಾರ ಬಂಧನ ದಾಟಿ ಅಂತರಂಗದ ತುಂಬಾ ದೇವನ ಹಂಬಲ ತುಂಬಿಕೊಂಡಾಗ ಮಾತ್ರ ದೈವಿ ಮಹಾಸಾಗರ ಸೇರಲು ಸಾಧ್ಯ. ಬಸವತಂದೆಯವರು “ಅಡವಿಯೊಳಗೆ ಹಲಬುಗೆಟ್ಟ ಶಿಶುವಿನಂತೆ ಅಂಬಾ ಅಂಬಾ ಎಂದು ಕರೆಯುತ್ತಲಿದ್ದೇನೆ, ಅಂಬಾ ಅಂಬಾ ಎಂದು ಒರಲುತ್ತಿದ್ದೇನೆ” ಎಂದು ಹಂಬಲಿಸಿದ್ದಾರೆ. ಅಕ್ಕಮಹಾದೇವಿಯವರು ಚನ್ನಮಲ್ಲಿಕಾರ್ಜುನ ಒಲುಮೆಯಾಗದಿದ್ದಾಗ “ಬೆಳದಿಂಗಳು ಬಿಸಿಲಾಯಿತ್ತವ್ವಾ” ಎಂದಿದ್ದಾರೆ. ರಾಮಕೃಷ್ಣ ಪರಮಹಂಸರು ಸೂರ್ಯ ಮುಳಗಿದಾಗ ದೇವನ ದರ್ಶನವಾಗಲಿಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ನಾವು ದೇವನ ಹಂಬಲ ತುಂಬಿಕೊಂಡಿರಬೇಕು. ತಾಯಿ ಬೇಕು ಎಂದು ಮಗು ಅಳುತ್ತಿದ್ದಾಗ ತಿಂಡಿ ಪದಾರ್ಥಗಳು, ಆಟದ ಸಾಮಾನುಗಳು ಕೊಡುತ್ತಾರೆ. ಕೆಲವು ಮಕ್ಕಳು ಅದನ್ನು ತೆಗೆದುಕೊಂಡು ಅದರಲ್ಲಿ ಮಗ್ನರಾಗಿ ತಾಯಿಯನ್ನು ಮರೆಯುತ್ತವೆ. ಇನ್ನೂ ಕೆಲವು ಮಕ್ಕಳು ಆಟದ ಸಾಮಾನು ತೆಗೆದುಕೊಂಡು ತಿಂಡಿಯನ್ನು ತಿನ್ನುತ್ತ ತಾಯಿ ಬೇಕೆ ಬೇಕು ಎಂದು ಅಳುತ್ತವೆ. ಇನ್ನೂ ಕೆಲವು ಮಕ್ಕಳು ತಿಂಡಿ ಕೊಟ್ಟರು ಎಸೆಯುತ್ತವೆ. ಆಟದ ಸಾಮಾನು ಕೊಟ್ಟರೂ ಎಸೆಯುತ್ತವೆ. ತಾಯಿಯೇ ಬೇಕು ಎಂದು ಅಳುತ್ತಾ ಹಠ ಹಿಡಿಯುತ್ತವೆ. ಅದೇ ರೀತಿ ಪರಮಾತ್ಮನೆಂಬ ತಾಯಿ ಬೇಕು ಎಂದು ಹಂಬಲಿಸುತ್ತೇವೆ.

ದೇವನು ಹೆಣ್ಣು, ಹೊನ್ನು ಎಂಬ ಸಂಸಾರ ಬಂಧನ ಎಂಬ ಆಟದ ಸಾಮಾನು ತಿಂಡಿ ಎಸೆಯುತ್ತಾನೆ. ಅದರಲ್ಲಿ ಮಗ್ನರಾಗಿ ಶಿವನನ್ನು ಮರೆಯುತ್ತಾರೆ. ಇವರು ಪೂರ್ಣ ಲೌಕಿಕರು. ಇನ್ನೂ ಕೆಲವು ಹೆಣ್ಣು, ಹೊನ್ನು, ಮಣ್ಣು ಸಂಸಾರದಲ್ಲಿದ್ದುರೂ ಶಿವನು ಬೇಕು ಎಂದು ಹಂಬಲಿಸುತ್ತಾರೆ. ಇವರು ಸದ್ಭಕ್ತರು. ಇನ್ನೂ ಕೆಲವರು ಸಂಸಾರ ಬೇಡ ಹೆಣ್ಣು, ಹೊನ್ನು ಬೇಡ ಕೇವಲ ದೇವನ ಹಂಬಲದಲ್ಲಿರುತ್ತಾರೆ. ಅವರೆ ಮಹಾತ್ಮರು ಸಂತರು ತ್ಯಾಗಿಗಳು. ನಾವು ಕೊನೆಗೆ ಮೊದಲನೆಯವರು ಆಗದೆ ಎರಡನೇ ಮೂರನೆವರಾಗಿ ದೇವನ ಹಂಬಲ ತುಂಬಿಕೊಂಡು ನಮ್ಮ ಗುರಿಮುಟ್ಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT