ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಜ್ಞಾನ ದೇಗುಲದಲ್ಲಿ ಮೂಲಸೌಲಭ್ಯ ಕೊರತೆ

2007ರಲ್ಲಿ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: 500 ವಿದ್ಯಾರ್ಥಿಗಳಿಗೆ ಪಾಠ
Last Updated 28 ಡಿಸೆಂಬರ್ 2021, 6:12 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣದಿಂದ 2 ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಧ್ಯಾಪಕರು ಯಶಸ್ಸು ಕಂಡಿದ್ದಾರೆ. ಆದರೆ ಮೂಲ ಸೌಕರ್ಯ ಕೊರತೆಯಿಂದ ಈ ಕಾಲೇಜು ಸೊರಗಿದೆ.

ಈ ಕಾಲೇಜು 2007ರಲ್ಲಿ ಆರಂಭವಾಗಿದೆ. ಆಗ 30 ವಿದ್ಯಾರ್ಥಿಗಳಿದ್ದರು. ಇದಕ್ಕೆ ಶಾಸಕರು ಅಧ್ಯಕ್ಷರಾಗಿದ್ದಾರೆ. ಸದ್ಯ ಬಿಎ, ಬಿ.ಕಾಂ ಹಾಗೂ ಬಿಎಸ್ಸಿ ವಿಭಾಗದಲ್ಲಿ ಒಟ್ಟು 500 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಬೋಧಕ ಸಿಬ್ಬಂದಿ ಕೊರತೆ ಇಲ್ಲ. 2016 ರಲ್ಲಿ ಕಾಲೇಜಿಗೆ ‘ಬಿ’ ಗ್ರೇಡ್‌ ಮಾನ್ಯತೆ ದೊರಕಿದೆ. ಎರಡಂತಸ್ತಿನ ಕಟ್ಟಡವಿದೆ. ಆದರೆ, ಪೀಠೋಪಕರಣ ಇಲ್ಲ. ನೆಲ ಹಾಸಿನ ಮೇಲೆ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ.

ಕಾಯಂ ಪ್ರಾಧ್ಯಾಪಕರ ಜತೆಗೆ 28 ಜನ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಕಾರಣ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಬೆಳಕೇರಾ, ಕಂದಗೂಳ, ಕುಡಂಬಲ್‌, ಇಟಗಾ, ವಳಖಿಂಡಿ ಸೇರಿದಂತೆ ಇತರ ಪ್ರದೇಶಗಳ ಅನೇಕ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ.

‘ಪಟ್ಟಣದಿಂದ ಕಾಲೇಜು ಎರಡು ಕಿ.ಮೀ ದೂರದಲ್ಲಿದೆ. ಪಟ್ಟಣದ ಬಸ್‌ ನಿಲ್ದಾಣದಿಂದ ಬೆಳಿಗ್ಗೆ ಹಾಗೂ ಮಧ್ಯಾಹ್ನ ಬಸ್‌ ಸಂಚಾರ ಆರಂಭಿಸಬೇಕು ಎಂದು ಹಲವು ವರ್ಷಗಳಿಂದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ವಿದ್ಯಾರ್ಥಿನಿಯರಿಗೆ ಸಮಸ್ಯೆ ಆಗುತ್ತಿದೆ’ ಎಂದು ಪ್ರಾಚಾರ್ಯ ಸುರೇಂದ್ರ ಸಿಂಗ್‌ ತಿಳಿಸಿದ್ದಾರೆ.

ಕಾಲೇಜು ಆವರಣದಲ್ಲಿಯೇ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸುವುದಕ್ಕೆ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಎರಡು ವರ್ಷಗಳಿಂದ ಕೆಲಸ ನಡೆಯುತ್ತಿದೆ. ಎಲ್ಲ ವರ್ಗ ಕೋಣೆಗಳಲ್ಲಿ ಪ್ರೊಜೆಕ್ಟರ್‌ ಅಳವಡಿಸಲಾಗಿದೆ. ಗಣಿತ, ಗಣಕಯಂತ್ರ ಪ್ರಯೋಗಾಲಯಕ್ಕೆ ರೋಟರಿ ಕ್ಲಬ್‌ ಸಹಯೋಗದಲ್ಲಿ 30 ಕಂಪ್ಯೂಟರ್ ಒದಗಿಸಲಾಗಿದೆ. ಅವು ಸಾಲುತ್ತಿಲ್ಲ. 50 ಕಂಪ್ಯೂಟರ್‌ಗಳು ಬೇಕಾಗುತ್ತವೆ ಎಂದು ಪ್ರಾಧ್ಯಾಪಕರು ತಿಳಿಸುತ್ತಾರೆ.

ಎಲ್ಲ ತರಗತಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ವೈಫೈ ಕ್ಯಾಂಪಸ್‌ ಆಗಿ ಪರಿವರ್ತನೆಯಾಗಲಿದೆ. ಆಗ ಎಲ್ಲ ವಿದ್ಯಾರ್ಥಿಗಳು ಕಾಲೇಜು ಸಮಯದಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಂಡು ಅಭ್ಯಾಸ ಮಾಡಬಹುದಾಗಿದೆ ಎಂದು ಹಿರಿಯ ಉಪನ್ಯಾಸಕ ವೀರಶೆಟ್ಟಿ ಮೈಲೂರಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT