ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ –ಭಗವಂತ ಖೂಬಾ

ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಹೇಳಿಕೆ
Last Updated 9 ಜೂನ್ 2022, 15:45 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕಾರಣ, ರೈತರು ಆತಂಕ ಪಡಬೇಕಿಲ್ಲ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ಸರ್ಕಾರ ಜಿಲ್ಲೆಗೆ ಅವಶ್ಯಕ ರಸಗೊಬ್ಬರ ಪೂರೈಸುತ್ತಿದೆ. ರೈತರು ಅನಗತ್ಯವಾಗಿ ಹೆದರಿ, ದಲ್ಲಾಳಿಗಳಿಂದ ಮೋಸ ಹೋಗಬಾರದು ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗೆ (ಸೆಪ್ಟೆಂಬರ್ ವರೆಗೆ) ಜಿಲ್ಲೆಗೆ 14,298 ಮೆಟ್ರಿಕ್ ಟನ್ ಡಿಎಪಿ ಅಗತ್ಯವಿದೆ. ಈಗಾಗಲೇ ಈ ಪೈಕಿ ಶೇ 70 ರಷ್ಟು ಅಂದರೆ 9,898 ಮೆಟ್ರಿಕ್ ಟನ್ ಬಂದಿದೆ. ಮುಂದಿನ ತಿಂಗಳಲ್ಲಿ ಸರಬರಾಜು ಮಾಡಬೇಕಿದ್ದ ರಸಗೊಬ್ಬರವನ್ನೂ ಜಿಲ್ಲೆಗೆ ಮುಂಗಡವಾಗಿ ಪೂರೈಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ಜಿಲ್ಲೆಗೆ 1,262.61 ಮೆಟ್ರಿಕ್ ಟನ್ ಯುರಿಯಾ, 3,994.8 ಮೆಟ್ರಿಕ್ ಟನ್ ಎನ್.ಪಿ.ಕೆ.ಎಸ್. ರಸಗೊಬ್ಬರ ಜಿಲ್ಲೆಗೆ ತಲುಪಿದೆ. ಪ್ರತಿ ವರ್ಷ ರಸಗೊಬ್ಬರದ ರೈಲಿನ ರೇಕ್ ಕಲಬುರಗಿಗೆ ಬರುತ್ತಿತ್ತು. ಸಮಯದ ಉಳಿತಾಯ ಮಾಡುವ ಉದ್ದೇಶದಿಂದ ಈ ವರ್ಷ ನೇರವಾಗಿ ಬೀದರ್‍ಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

60 ವರ್ಷಗಳಿಂದ ದಲ್ಲಾಳಿಗಳ ಪರ ಕೆಲಸ ಮಾಡುತ್ತ ಬಂದಿರುವ ಪಕ್ಷವೊಂದರ ಜನಪ್ರತಿನಿಧಿಗಳು ರಸಗೊಬ್ಬರ ಕೊರತೆ ಇದೆ ಎಂದು ಹೇಳಿಕೆ ನೀಡಿ, ರೈತರಲ್ಲಿ ಆತಂಕ ಸೃಷ್ಟಿಸಿ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ. ರೈತರು ಇವರ ಹೇಳಿಕೆಗೆ ಕಿವಿಗೊಡದೆ, ಸರ್ಕಾರ ಪೂರೈಸಿದ ರಸಗೊಬ್ಬರ ಖರೀದಿಸಬೇಕು. ತಮ್ಮ ಬೆಳೆಗಳ ಕಡೆಯೇ ಲಕ್ಷ್ಯ ಕೊಡಬೇಕು ಎಂದು ತಿಳಿಸಿದ್ದಾರೆ.

ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ
ಬೀದರ್:
ಕೇಂದ್ರ ಸರ್ಕಾರವು 2022-23ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆಗೆ ವ್ಯಯಿಸಿದ ಖರ್ಚಿಗಿಂತ 2 ಪಟ್ಟು ಹೆಚ್ಚು ಬೆಂಬಲ ಬೆಲೆ ಘೋಷಿಸಿ ರೈತರಿಗೆ ಸಿಹಿ ಸುದ್ದಿ ನೀಡಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ತೊಗರಿಗೆ ಪ್ರತಿ ಕ್ವಿಂಟಲ್‍ಗೆ ರೂ. 6,600 (ಹಿಂದಿಗಿಂತ ರೂ. 300 ಹೆಚ್ಚು), ಹೆಸರಿಗೆ ರೂ. 7,755 (ರೂ. 480 ಅಧಿಕ), ಉದ್ದಿಗೆ ರೂ. 6,600 (ರೂ. 300 ಹೆಚ್ಚು), ಸೋಯಾಗೆ ರೂ. 4,300 (ರೂ. 350 ಅಧಿಕ) ನಿಗದಿಪಡಿಸಿದೆ. ಎಲ್ಲ ಬೆಳೆಗಳಿಗೂ ಒಳ್ಳೆಯ ಬೆಲೆ ನಿಗದಿ ಮಾಡಿದೆ, ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ರೈತರ ಆದಾಯ ದ್ವಿಗುಣಗೊಳಿಸುವತ್ತ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದ್ದಾರೆ.

ಪ್ರಸಾದ್ ಯೋಜನೆ: ಅಧಿಕಾರಿಗಳ ಜತೆ ಚರ್ಚೆ
ಬೀದರ್:
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಜಿಲ್ಲೆಯ ಝರಣಿ ನರಸಿಂಹ, ಪಾಪನಾಶ ದೇವಾಲಯ, ಜಲಸಂಗ್ವಿಯ ಮಹಾದೇವ ದೇವಸ್ಥಾನಗಳ ಅಭಿವೃದ್ಧಿ ಕುರಿತು ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಪ್ರಸಾದ್ ಯೋಜನೆಯಡಿ ಈಗಾಗಲೇ ಅಧಿಕಾರಿಗಳ ತಂಡ ಜಿಲ್ಲೆಯ ದೇವಸ್ಥಾನಗಳ ಸಮೀಕ್ಷೆ ನಡೆಸಿದ ಪ್ರಯುಕ್ತ ಸಮೀಕ್ಷೆ ವರದಿ ಪಡೆದು, ಯೋಜನೆಗೆ ಸಂಬಂಧಿಸಿದಂತೆ ಸಮಾಲೋಚಿಸಿದರು.

ದೇವಸ್ಥಾನಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಲು ಸಿದ್ಧ ಇದೆ. ಅದಕ್ಕೆ ತಕ್ಕಂತೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಮತ್ತು ಸಂಪರ್ಕ ಅವಶ್ಯಕವಾಗಿದೆ. ಮುತುವರ್ಜಿಯಿಂದ ಯೋಜನೆಯ ಕೆಲಸ ಮಾಡಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT