ಬುಧವಾರ, ಜನವರಿ 19, 2022
27 °C
ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಲೇವಡಿ

ಕಾಂಗ್ರೆಸ್‌ ಮುಖಂಡರ ಬಳಿ ವಿಷಯಗಳೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

 

ಬೀದರ್‌: ‘ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮಾತನಾಡಲು ವಿಷಯಗಳೇ ಇಲ್ಲ. ಹೀಗಾಗಿ ನನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಬೆನ್ನು ಬಿದ್ದಿದ್ದಾರೆ. ನಮ್ಮಿಬ್ಬರ ವಿರುದ್ಧ ಅನಗತ್ಯವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಚುನಾವಣೆ ನಂತರ ಈ ವಿಷಯವೂ ಮುಗಿಯಲಿದೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಲೇವಡಿ ಮಾಡಿದರು.

‘ನಾನು ಗರಿ ಗರಿ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದೇನೆ ಎಂದು ಈಶ್ವರ ಖಂಡ್ರೆ ಟೀಕಿಸಿದ್ದಾರೆ. ಹೌದು, ಮೈ ಮುಚ್ಚಿಕೊಳ್ಳಲು ಬಟ್ಟೆ ಬೇಕು, ಹಾಕಿಕೊಂಡಿದ್ದೇನೆ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ರಾಜಶೇಖರ ಪಾಟೀಲ ಅವರು ₹ 5 ಲಕ್ಷ ಬೆಲೆಯ ರೇಬನ್‌ ಚಸ್ಮಾ ಹಾಕಿಕೊಂಡು ತಿರುಗಾಡುತ್ತಿಲ್ಲವೆ?’ ಎಂದು ತಿರುಗೇಟು ನೀಡಿದರು.

‘ಕೇಂದ್ರ ಸಚಿವರು ನಮ್ಮ ಕುಟುಂಬ ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ರಾಜಶೇಖರ ಪಾಟೀಲ ಆರೋಪ ಮಾಡಿದ್ದಾರೆ. ಆದರೆ, ಅಂಥ ಕೆಲಸ ನಾನು ಮಾಡಿಲ್ಲ. ಪ್ರಕಾಶ ಖಂಡ್ರೆ ಹೆಸರು ಘೋಷಣೆ ಮಾಡಿದ ಮೇಲೆ ಬೆಳಿಗ್ಗೆ 6 ಗಂಟೆಗೆ ಭೀಮರಾವ್‌ ಪಾಟೀಲ ಹೆಸರನ್ನು ಈಶ್ವರ ಖಂಡ್ರೆ ಅವರು ಘೋಷಣೆ ಮಾಡಿದ್ದಾರೆ. ಮನೆ ಒಡೆಯುವ ಕೆಲಸ ನಿಮ್ಮ ಪಕ್ಕದಲ್ಲಿ ಕುಳಿತವರು ಮಾಡುತ್ತಿದ್ದಾರೆ ಹೊರತು ನಾನಲ್ಲ’ ಎಂದು ಪ್ರತ್ಯುತ್ತರ ಕೊಟ್ಟರು.

‘ಕಾಂಗ್ರೆಸ್‌ನಲ್ಲಿ ನಾಮಕೆವಾಸ್ತೆ ಕೈಕಮಾಂಡ್‌ ಇರುವಂತೆ ಬಿಜೆಪಿಯಲ್ಲಿ ಇಲ್ಲ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಅಂತೆಯೇ ಪಕ್ಷದ ಆಯ್ಕೆ ಸಮಿತಿಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. 3,004 ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಬಿಜೆಪಿಯ ಅತ್ಯಧಿಕ ಸದಸ್ಯರು ಇದ್ದಾರೆ. ಪ್ರಚಾರದ ಸಂದರ್ಭದಲ್ಲಿ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿವೆ. ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೃಷಿ ಕಾಯ್ದೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. ಕೃಷಿ ಕಾಯ್ದೆಗಳು ಅನುಷ್ಠಾನಗೊಂಡಿದ್ದರೆ ಬಹಳಷ್ಟು ರೈತರಿಗೆ ಅದರ ಪ್ರಯೋಜನವಾಗುತ್ತಿತ್ತು . ಆದರೆ ಕೆಲ ರೈತ ಮುಖಂಡರಿಗೆ ಅದು ಬೇಕಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಿಜೆಪಿ ರೈತರ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ಅನೇಕ ರಾಜ್ಯಗಳ ಚುನಾವಣೆಗಳು ಸಮೀಪಿಸುತ್ತಿವೆ ಎನ್ನುವ ಕಾರಣಕ್ಕೆ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿಲ್ಲ’ ಎಂದರು.

ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಬಿಜೆಪಿ ಅಭ್ಯರ್ಥಿಗೆ ಮತ ಕೊಡುವಂತೆ ಮತದಾರರಲ್ಲಿ ಮನವಿ ಮಾಡಿದ್ದೇವೆ. ಮತದಾರರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ್, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಯಕುಮಾರ ಕಾಂಗೆ, ಅಶೋಕ ಹೊಕ್ರಾಣೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು