ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಸಂಕಲ್ಪ ಯಾತ್ರೆ: ಬಿಜೆಪಿಯಲ್ಲಿ ಟಿಕೆಟ್‌ ಗೊಂದಲ ಇಲ್ಲ -ಭಗವಂತ ಖೂಬಾ

Last Updated 28 ಫೆಬ್ರುವರಿ 2021, 5:15 IST
ಅಕ್ಷರ ಗಾತ್ರ

ನಾರಾಯಣಪುರ (ಬಸವಕಲ್ಯಾಣ): ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶೀಘ್ರ ಘೋಷಣೆಯಾಗುವ ಸಾಧ್ಯತೆಯಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತವಾಗಿದೆ’ ಎಂದು ಸಂಸದ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾರಾಯಣಪುರದಲ್ಲಿ ಉಪ ಚುನಾವಣೆ ಅಂಗವಾಗಿ ಬಿಜೆಪಿಯಿಂದ ಶನಿವಾರ ನಡೆದ ವಿಜಯಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಕ್ಷದ ಪ್ರಭಾವ ಹೆಚ್ಚಿರುವ ಕಾರಣ ಆಕಾಂಕ್ಷಿಗಳ ಸಂಖ್ಯೆಯೂ ಅಧಿಕವಾಗಿದೆ. ಈಚೆಗೆ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸಚಿವ ವಿ.ಸೋಮಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ 18 ಆಕಾಂಕ್ಷಿಗಳು ಕೂಡ ಯಾರಿಗೆ ಟಿಕೆಟ್ ದೊರೆತರೂ ಅವರ ಜಯಕ್ಕಾಗಿ ಒಗ್ಗಟ್ಟಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಪಕ್ಷದಲ್ಲಿ ಯಾವುದೇ ಗೊಂದಲ, ಗುಂಪುಗಾರಿಕೆ ಇಲ್ಲ. ಈ ಕಾರಣ ಟಿಕೆಟ್ ಘೋಷಣೆಯಾದ ಬಳಿಕ ಕೆಲವರು ಪಕ್ಷ ತೊರೆಯುವರು ಎಂಬ ಭಯ ಬೇಡ’ ಎಂದು ತಿಳಿಸಿದರು.

‘ಐದು ತಿಂಗಳಿಂದಲೇ ಪಕ್ಷದ ಚಟುವಟಿಕೆಗಳು ತೀವ್ರಗೊಂಡಿವೆ. ಈಗಾಗಲೇ ಕೊಹಿನೂರ, ಮುಡಬಿ, ಮಂಠಾಳ, ಹುಲಸೂರ, ಪ್ರತಾಪುರ ಹೋಬಳಿಗಳಲ್ಲಿ ವಿಜಯ ಸಂಕಲ್ಪಯಾತ್ರೆ ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಕಾರ್ಯ ಕೈಗೊಂಡಿರುವುದರಿಂದ ಮತದಾರರ ಒಲವು ಹೆಚ್ಚಿದ್ದು ಈ ಚುನಾವಣೆಯಲ್ಲಿ 25 ಸಾವಿರ ಅಧಿಕ ಮತಗಳಿಂದ ಅಭ್ಯರ್ಥಿ ಜಯ ಗಳಿಸಲಿದ್ದಾರೆ’ ಎಂದು ಹೇಳಿದರು.

ಚುನಾವಣಾ ಉಸ್ತುವಾರಿ ಈಶ್ವರಸಿಂಗ್ ಠಾಕೂರ ಮಾತನಾಡಿ, ‘ದೇಶದ ಬಗ್ಗೆ ಅಭಿಮಾನವಿರಬೇಕು. ಬಿಜೆಪಿಯನ್ನು ಬೆಂಬಲಿಸುವ ಮೂಲಕ ರಾಷ್ಟ್ರವನ್ನು ಬಲಿಷ್ಠಗೊಳಿಸಬೇಕು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಧಾನ ಮಲ್ಲಿಕಾರ್ಜುನ ಕುಂಬಾರ, ಪೀರಪ್ಪ ಔರಾದೆ ಮಾತನಾಡಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಶರಣು ಸಲಗರ, ಸಂಜಯ ಪಟವಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುಂಡುರೆಡ್ಡಿ, ಸುಧೀರ ಕಾಡಾದಿ, ವೀರಣ್ಣ ಹಲಗೆ, ದೀಪಕ ಗಾಯಕವಾಡ, ಸೂರ್ಯಕಾಂತ ಚಿಲ್ಲಾಬಟ್ಟೆ, ಅರವಿಂದ ಮುತ್ತೆ, ಅಶೋಕ ವಕಾರೆ, ಕೃಷ್ಣಾ ಗೋಣೆ ಪಾಲ್ಗೊಂಡಿದ್ದರು. ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT