ಶನಿವಾರ, ನವೆಂಬರ್ 27, 2021
21 °C
ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು

dnp ಷಟ್‍ಸ್ಥಲ ಮಾರ್ಗ

ಅಮೃತವಾಣಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಬಸವಾದಿ ಶರಣರ ಅಂತರಂಗದ ವಿಕಾಸಕ್ಕೆ ಷಟ್‍ಸ್ಥಲ ಮಾರ್ಗ ಬೋಧಿಸಿದರು. ಅವುಗಳೆಂದರೆ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಇವು ಆರು ಸ್ಥಳಗಳು. ಹಂತ ಹಂತವಾಗಿ ನಮ್ಮ ಅಂತರಂಗ ವಿಕಾಸ ಮಾಡಿಕೊಳ್ಳುವುದು. ತನ್ನ ತಾನು ಅರಿಯುವುದು. ಎಲ್ಲರಲ್ಲಿಯೂ ದೇವಸ್ವರೂಪ ಕಾಣುವುದು. ಎಲ್ಲರನ್ನು ಪ್ರೀತಿಸುವುದೇ ಷಟ್‍ಸ್ಥಲ ಮಾರ್ಗವಾಗಿದೆ.
ಭಕ್ತಸ್ಥಲದಲ್ಲಿ ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಮಾಡುತ್ತ ದೇವರ (ಲಿಂಗದ) ಮೇಲೆ ಶ್ರದ್ಧೆವಿಟ್ಟು ಕಿಂಕರಭಾವದಿಂದ ನಡೆದುಕೊಳ್ಳಬೇಕು. ಶರಣ ಸಂಗದಲ್ಲಿ ಭಾಗಿಯಾಗಿರಬೇಕು. ಬಸವಾದಿ ಶರಣರ ವಚನಗಳು ಆಚಾರದಲ್ಲಿ ಅಳವಡಿಸಿಕೊಳ್ಳುವ ಹಂಬಲವಿರಬೇಕು. ಮಹೇಶಸ್ಥಲದಲ್ಲಿ ಏಕದೇವೋಪಸಕನಾಗಿ ನಿಷ್ಠಾಭಕ್ತಿಯಿಂದ ಸಾಧನೆ ಮುಂದುವರಿಸುವುದು. ಜಾತಿಭೇದ, ವರ್ಣಾಶ್ರಮ ಪಾಲಿಸುವುದಿಲ್ಲ. ವಾರ-ತಿಥಿ, ಶುಭ-ಅಶುಭ, ಪಂಚಾಂಗ, ಜ್ಯೋತಿಷ್ಯ, ಸೂತಕಗಳು ನಂಬುವುದಿಲ್ಲ. ಭವಿಷ್ಯ ಅಂಗೈಯಲ್ಲಿ ಇಲ್ಲ ಮುಂಗೈಯಲ್ಲಿ ಇದೆ ಪ್ರಯತ್ನಶೀಲನಾಗುವುದು. ಪ್ರಸಾದಿಸ್ಥಲದಲ್ಲಿ ಅವಧಾನ ಭಕ್ತಿಯಿಂದ ಸಾಧಕನು ಪ್ರಸನ್ನಚಿತ್ತದಿಂದ ಇರುತ್ತಾನೆ. ಸುಖ-ದುಃಖ, ನೋವು-ನಲಿವು ಎಲ್ಲವೂ ದೇವನ ಪ್ರಸಾದವೆಂದು ಸದಾ ತೃಪ್ತಿಯಿಂದ ಇರುತ್ತಾನೆ. ಕೇವಲ ಆಹಾರ ಪದಾರ್ಥವಷ್ಟೇ ಪ್ರಸಾದವೆಂದು ಭಾವಿಸದೇ ಸಮಸ್ತ ವಿಶ್ವವೇ ದೇವನ ಪ್ರಸಾದವೆಂದು ಭಾವಿಸುವ ಸ್ಥಿತಿಯೇ ಪ್ರಸಾದಿ ಸ್ಥಲ.
ಪ್ರಾಣಲಿಂಗಿ ಸ್ಥಲದಲ್ಲಿ ಅನುಭಾವ ಭಕ್ತಿಯಿಂದ ಅಂತರಂಗ ಪೂಜೆಯಲ್ಲಿ ತನ್ಮಯವಾಗುತ್ತ ಕಾಯಕ ದಾಸೋಹ ಮರೆಯದೆ ಎಲ್ಲರಲ್ಲಿಯೂ ದೈವಿ ಸ್ವರೂಪ ಕಾಣುವ ಸ್ಥಿತಿಯೇ ಪ್ರಾಣಲಿಂಗಿ ಸ್ಥಲ. ಶರಣಸ್ಥಲದಲ್ಲಿ ಆನಂದ ಭಕ್ತಿಯಿಂದ ತಾನೇ ತಾನಾಗಿರುತ್ತಾನೆ. ತಾನುಂಡ ಆನಂದ ಲೋಕಕ್ಕೆ ಉಣಬಡಿಸುತ್ತಾನೆ. ಅವನ ಬದುಕೆ ಲೋಕಕ್ಕೆ ಪಾಠವಾಗಿರುತ್ತದೆ. ಐಕ್ಯಸ್ಥಲವೆಂದರೆ, `ನಾ’ `ನೀ’ ಎಂಬ ಭಾವ ಅಡಗಿ ದೇವಸ್ವರೂಪಿಯಾಗಿರುತ್ತಾನೆ. ನಡೆದಾಡುವ ದೇವರೆ ಆಗಿರುತ್ತಾನೆ. ಆದರೆ ನಾನು ನಡೆದಾಡುವ ದೇವರು ಎಂಬ ಭಾವ ಇರುವುದಿಲ್ಲ. ಇದುವೆ ಐಕ್ಯಸ್ಥಿತಿ. ಈ ಷಟ್‍ಸ್ಥಲ ಮಾರ್ಗದಿಂದ ಮುನ್ನಡೆದು ನಾವು ಲಿಂಗಾಂಗ ಸಾಮರಸ್ಯದ ಸುಖಾನುಭವವನ್ನು ಪಡೆಯೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.