ದಶಲಕ್ಷ ಸುರಿದರೂ ದಕ್ಕದ ಗುಟುಕು ನೀರು

7
ಸಂತಪುರ ಜನರಿಗೆ ತಪ್ಪದ ಬವಣೆ, ಶುದ್ಧ ನೀರಿನ ಘಟಕ ಮೂಲೆಗುಂಪು

ದಶಲಕ್ಷ ಸುರಿದರೂ ದಕ್ಕದ ಗುಟುಕು ನೀರು

Published:
Updated:
Deccan Herald

ಔರಾದ್: ತಾಲ್ಲೂಕಿನ ಸಂತಪುರ ನಾಗರಿಕರಿಗೆ ಇನ್ನೂ ನೀರಿನ ಬವಣೆ ತಪ್ಪಿಲ್ಲ. ಜಲ ನಿರ್ಮಲ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಕೋಟ್ಯಂತರ ರೂಪಾಯಿ ಖರ್ಚಾದರೂ ನೀರು ಮಾತ್ರ ಸಿಗುತ್ತಿಲ್ಲ.

ಈ ಊರಿನಲ್ಲಿ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಸುಮಾರು ₹ 10 ಲಕ್ಷ ವೆಚ್ಚ ಮಾಡಿ ಶುದ್ಧ ನೀರಿನ ಘಟಕ ಅಳವಡಿಸಿದೆ. ಆದರೆ, ಈ ಘಟಕದಿಂದ ಹನಿ ನೀರೂ ಯಾರಿಗೂ ಸಿಕ್ಕಿಲ್ಲ.

‘ವಾರ್ಡ್‌ 1ರಲ್ಲಿ ಒಂದೂವರೆ ವರ್ಷದ ಹಿಂದೆ ಶುದ್ಧ ನೀರಿನ ಯಂತ್ರ ಅಳವಡಿಸ ಹೋದವರು ಇಲ್ಲಿಯ ತನಕ ಯಾರೂ ಬಂದಿಲ್ಲ. ಘಟಕದ ಬಾಗಿಲು ಮುರಿದು ಒಳಗೆ ನಾಯಿ, ಹಂದಿಗಳು ಹೋಗುತ್ತಿವೆ. ಗ್ಲಾಸ್ ಒಡೆದು ಹೋಗಿವೆ. ಇದರಿಂದ ಜನರಿಗೆ ಯಾವುದೇ ಉಪಯೋಗವಾಗಿಲ್ಲ' ಎಂಬುದು ಬಡಾವಣೆ ನಿವಾಸಿಗಳ ಬವಣೆ.

‘ಸುಮಾರು 15,000 ಜನಸಂಖ್ಯೆ ಇರುವ ಸಂತಪುರ ಜನರಿಗೆ ಶಾಶ್ವತ ಕುಡಿಯವ ನೀರಿನ ಯೋಜನೆ ಮರಿಚೀಕೆಯಾಗಿದೆ. ಹಿಂದೆ ಜಲನಿರ್ಮಲ ಯೋಜನೆ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿಕೊಂಡು ವಂಚಿಸಲಾಗಿದೆ. ಈಗ ಶುದ್ಧ ನೀರಿನ ಘಟಕದ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವ ಕೆಲಸ ನಡೆದಿದೆ' ಎಂದು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ದೂರುತ್ತಾರೆ.

ಪರಿಶಿಷ್ಟ ಜಾತಿ ಜನರ ಕಾಲೊನಿ ಮತ್ತು ನವನಗರ ಗಲ್ಲಿಯಲ್ಲಿ ನೀರಿನ ಸಮಸ್ಯೆ ಇದೆ. ಚರಂಡಿ ಹೂಳು ತೆಗೆಯದೇ ಗಬ್ಬು ನಾರುತ್ತಿವೆ. ರಸ್ತೆ ವಿಸ್ತರಣೆ ನೆಪ ಮಾಡಿ ಮುಖ್ಯ ರಸ್ತೆ ಬದಿಯ ಅಂಗಡಿ ತೆರವು ಮಾಡಲಾಗಿದೆ. ಆದರೆ, ರಸ್ತೆ ಮೇಲೆ ಬಿದ್ದ ಕಲ್ಲು ಮಣ್ಣು ಇನ್ನೂ ತೆಗೆದಿಲ್ಲ. ಇದರಿಂದ ಪಾದಾಚರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಲೋಕೋಪಯೋಗಿ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಗ್ರಾಮ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರ. ಸುತ್ತಲಿನ 30 ಹಳ್ಳಿ ಜನ ಇಲ್ಲಿಗೆ ಬರುತ್ತಾರೆ. ಇಲ್ಲಿ ಸರ್ಕಾರಿ ಕಾಲೇಜು ಇಲ್ಲದೆ ವಿದ್ಯಾರ್ಥಿಗಳು ಔರಾದ್ ಇಲ್ಲವೇ ಬೀದರ್‌ಗೆ ಹೋಗಬೇಕು. ಆದರೆ, ಸರಿಯಾದ ಬಸ್‌ ವ್ಯವಸ್ಥೆ ಇಲ್ಲ. ಗ್ರಾಮದಲ್ಲೇ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಐಟಿಐ ಕಾಲೇಜು ಕಟ್ಟಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆ.

ತಾಲ್ಲೂಕು ಮಟ್ಟದ ಕೆಲವು ಸರ್ಕಾರಿ ಕಚೇರಿಗಳೂ ಇಲ್ಲಿವೆ. ಆದರೆ,ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಅವುಗಳು ಒತ್ತುವರಿ ಆಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಗ್ರಾಮಸ್ಥರು.

ಸಂತಪುರನಲ್ಲಿ ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದೇವೆ. ಅಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಅದೂ ಉಪಯೋಗಕ್ಕೆ ಬರುತ್ತಿಲ್ಲ
- ಎಸ್.ಜಿ. ಬಿರಾದಾರ, ಎಂಜಿನಿಯರ್, ಭೂಸೇನಾ ನಿಗಮ

38 - ಔರಾದ್‌ ತಾಲ್ಲೂಕಿನಲ್ಲಿರುವ ಶುದ್ಧ ನೀರಿನ ಘಟಕಗಳು
34 - ಅಧಿಕಾರಿಗಳ ಲೆಕ್ಕದಲ್ಲಿ ಚಾಲ್ತಿಯಲ್ಲಿರುವ ಘಟಕಗಳ ಸಂಖ್ಯೆ
15,000 - ಸಂತಪುರ ಗ್ರಾಮದ ಅಂದಾಜು ಜನಸಂಖ್ಯೆ
₹ 10 ಲಕ್ಷ - ಒಂದು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮಾಡಿದ ವೆಚ್ಚ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !