ಮಂಗಳವಾರ, ಸೆಪ್ಟೆಂಬರ್ 28, 2021
21 °C
ಮೂರು ಬಸ್, ಎರಡು ಕಾರು ವಾಪಸ್ ಕಳಿಸಿದ ಪೊಲೀಸರು

ಬೀದರ್: ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ತಪಾಸಣೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್‌ ನಿಯಂತ್ರಿಸುವ ದಿಸೆಯಲ್ಲಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಮಾರ್ಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಔರಾದ್, ಕಮಲನಗರ, ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿರುವ ಆರು ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್‌ ತಪಾಸಣೆ ಬಿಗಿಗೊಳಿಸಲಾಗಿದೆ.

ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳಲ್ಲಿ ಬರುವವರ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್ ನೆಗೆಟಿವ್ ವರದಿ ಅಥವಾ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಗಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ನಿರ್ವಾಹಕರು ಕೋವಿಡ್‌ ನೆಗೆಟಿವ್‌ ವರದಿ ಇದ್ದವರಿಗೆ ಮಾತ್ರ ಬಸ್‌ಗಳಲ್ಲಿ ಪ್ರಯಾಣಕ್ಕೆ ಅವಕಾಶ ಕೊಡುತ್ತಿದ್ದಾರೆ. ಪೊಲೀಸರು ತಪಾಸಣೆ ನಡೆಸುವ ವೇಳೆಯಲ್ಲಿ ವರದಿ ತೋರಿಸುವುದು ಕಡ್ಡಾಯವಾಗಿದೆ.

ಕೋವಿಡ್‌ ನಿಯಮ ಪಾಲಿಸದೇ ಖಾಸಗಿ ಬಸ್‌ಗಳಲ್ಲಿ ಬಂದವರನ್ನು ಮುಲಾಜಿಲ್ಲದೆ ಮರಳಿ ಕಳಿಸಲಾಗಿದೆ. ಮಹಾರಾಷ್ಟ್ರದಲ್ಲೇ ತಪಾಸಣೆ ಮಾಡಿಸಿಕೊಂಡು ಬರುವಂತೆ ತಾಕೀತು ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ಮಹಾರಾಷ್ಟ್ರದ ಉದಗಿರನಲ್ಲೇ ತಪಾಸಣೆ ಮಾಡಿಕೊಂಡು ಬರುತ್ತಿದ್ದಾರೆ.

ನಾಂದೇಡ್‌ನಿಂದ ಬೀದರ್‌ನ ಗುರುದ್ವಾರಕ್ಕೆ ಧಾರ್ಮಿಕ ಪ್ರವಾಸಕ್ಕೆ ಬರುತ್ತಿದ್ದ ಖಾಸಗಿ ವಾಹನಗಳ ತಪಾಸಣೆ ನಡೆಸಲಾಯಿತು. ಕೋವಿಡ್‌ ಎರಡೂ ಲಸಿಕೆ ಪಡೆದ ಹಾಗೂ ಕೋವಿಡ್‌ ಪಾಸಿಟಿವ್‌ ವರದಿ ತಂದಿದ್ದರಿಂದ ಅವರಿಗೆ ಅವಕಾಶ ನೀಡಲಾಯಿತು.

ಬಸ್‌ ವಾಪಸ್: ಔರಾದ್ ತಾಲ್ಲೂಕಿನ ವನಮಾರಪಳ್ಳಿ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. . ಕೋವಿಡ್‌ ನಿಯಮ ಪಾಲಿಸದ ಎರಡು ಖಾಸಗಿ ಬಸ್‌ಗಳಲ್ಲಿ ಬಂದಿದ್ದ ಪ್ರಯಾಣಿಕರನ್ನು ವಾಪಸ್ ಕಳುಹಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಕೆಲವರು ಬೈಕ್‌ಗಳಲ್ಲಿ ಹೊಲ ಗದ್ದೆಗಳಲ್ಲಿರುವ ದಾರಿ ಹಾಗೂ ಇನ್ನು ಕೆಲವರು ಕಾಲು ದಾರಿ ಮೂಲಕ ತಾಲ್ಲೂಕು ಪ್ರವೇಶಿಸುತ್ತಿದ್ದಾರೆ ಎಂದು‌ ಗಡಿಯಲ್ಲಿರುವ ವನಮಾರಪಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.

ಬೀದರ್–ಲಾತೂರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಮಲನಗರ ಸಮೀಪದ ಗಡಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ರಾಜ್ಯಕ್ಕೆ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ನೆಗೆಟಿವ್ ವರದಿ ಇಲ್ಲದ 20 ಲಾರಿ ಹಾಗೂ ಕಾರು ಚಾಲಕರನ್ನು ಮರಳಿ ಕಳಿಸಲಾಗಿದೆ.

ಕೋವಿಡ್ ನೆಗೆಟಿವ್‌ ವರದಿ ಇಲ್ಲದವರನ್ನು ಮರಳಿ ಕಳಿಸಲಾಗುತ್ತಿದೆ. ತುರ್ತು ಅಗತ್ಯ ಇರುವವರಿಗೆ ರ್‍ಯಾಟ್‌ ಪರೀಕ್ಷೆ ನಡೆಸಿ ವರದಿ ನೆಗೆಟಿವ್‌ ಬಂದರೆ ಮಾತ್ರ ಗಡಿಯೊಳಗೆ ಪ್ರವೇಶ ನೀಡಲಾಗುತ್ತಿದೆ. ಪೊಲೀಸ್‌ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದು, ಬಿಡುವಿಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪಿಎಸ್ಐ ರೇಣುಕಾ ಬಾಲೇಕರ್ ಹೇಳಿದರು.

ಮಹಾರಾಷ್ಟ್ರದಿಂದ ರಾಜ್ಯದ ಗಡಿಯೊಳಗೆ ಬರುತ್ತಿದ್ದ ಬಸ್‌ ಹಾಗೂ ಒಂದು ಕಾರಿನಲ್ಲಿ ಬಂದ ಪ್ರಯಾಣಿಕರ ಬಳಿ ಕೋವಿಡ್‌ ನೆಗೆಟಿವ್‌ ವರದಿ ಇರಲಿಲ್ಲ. ಹೀಗಾಗಿ ಹುಲಸೂರು ಚೆಕ್‌ಪೋಸ್ಟ್‌ ಅಧಿಕಾರಿಗಳು ತಪಾಸಣೆ ನಡೆಸಿ ಮರಳಿ ಕಳಿಸಿದರು.

‘ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಅಧಿಕ ಇರುವ ಕಾರಣ ರಾಜ್ಯ ಸರ್ಕಾರದ ನಿರ್ದೇಶನದಂತೆ ಮಹಾರಾಷ್ಟ್ರದ ಗಡಿಯಲ್ಲೇ ತಪಾಸಣೆ ತೀವ್ರಗೊಳಿಸಲಾಗಿದೆ. ತೆಲಂಗಾಣದಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆ ಇವೆ. ಹೀಗಾಗಿ ತೆಲಂಗಾಣ ಗಡಿಯಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ್‌ ಡಿ.ಎಲ್‌. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.