ಸೋಮವಾರ, ಡಿಸೆಂಬರ್ 9, 2019
17 °C
ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮಿನ್ ಜಿಲ್ಲಾ ಘಟಕ ನಿರ್ಧಾರ

ಒಂದು ಲಕ್ಷ ಟಿಪ್ಪು ಪುಸ್ತಕ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮಿನ್ ಜಿಲ್ಲಾ ಘಟಕವು ಹಜರತ್ ಟಿಪ್ಪು ಸುಲ್ತಾನ್ ಜೀವನ ಸಾಧನೆ ಬಿಂಬಿಸುವ ಒಂದು ಲಕ್ಷ ಪುಸ್ತಕಗಳನ್ನು ಮುದ್ರಿಸಿ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ವಿತರಿಸಲು ನಿರ್ಧರಿಸಿದೆ.

ಟಿಪ್ಪು ಸುಲ್ತಾನ್‌ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ನಾಡಿನ ಜನತೆಗೆ ಸತ್ಯವನ್ನು ಪರಿಚಯಿಸುವ ದಿಸೆಯಲ್ಲಿ ಶಾಲಾ ಕಾಲೇಜುಗಳಿಗೆ ಪುಸ್ತಕ ವಿತರಿಸಲು ನಿರ್ಧರಿಸಲಾಗಿದೆ ಎಂದು ಎಐಎಂಐಎಂ ಜಿಲ್ಲಾ ಘಟಕದ ಅಧ್ಯಕ್ಷ ಮನ್ಸೂರ್ ಖಾದ್ರಿ ತಿಳಿಸಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರ, ಮೈಸೂರು ಹುಲಿ ಎಂದೇ ಖ್ಯಾತಿ ಪಡೆದ ಟಿಪ್ಪು ಸುಲ್ತಾನ್‌ ಪಾಠವನ್ನು ಪಠ್ಯದಿಂದ ಕೈಬಿಡಲು ಮುಂದಾಗಿರುವುದು ಖಂಡನೀಯ. ಇಂದಿನ ಪೀಳಿಗೆಗೆ ಇತಿಹಾಸ ತಿಳಿಸಬೇಕು. ಇತಿಹಾಸ ಅಳಿಸುವ ಕಾರ್ಯವನ್ನು ಮಾಡಬಾರದು ಎಂದು ಹೇಳಿದ್ದಾರೆ.

ಹಣ ಮತ್ತು ಅಧಿಕಾರದ ಆಸೆಗಾಗಿ ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರದ ದುರುಪಯೋಗ ಮಾಡುತ್ತಿದ್ದಾರೆ. ಯಡಿಯೂರಪ್ಪ, ಅಧಿಕಾರ ಸ್ವೀಕರಿಸಿ ಇಂದಿಗೆ ನೂರು ದಿನಗಳು ಕಳೆದರೂ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಬೀದಿ ಪಾಲಾಗಿರುವ ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ವಿಫಲವಾಗಿದ್ದಾರೆ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿಲ್ಲ. ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಆಗಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ಹಾಗೂ ತಮ್ಮ ಅಸಹಾಯಕತೆಯನ್ನು ಮರೆಮಾಚಲು ಟಿಪ್ಪು ಸುಲ್ತಾನ್ ವಿಷಯವನ್ನು ವಿವಾದ ಎನ್ನುವಂತೆ ಬಿಂಬಿಸಿದ್ದಾರೆ ಎಂದು ಟೀಕಿಸಿದ್ದಾರೆ.

ರಾಜ್ಯದ ಪ್ರತಿಯೊಂದು ಸಮುದಾಯದವರು ಟಿಪ್ಪು ಸುಲ್ತಾನ್‌ ಬಗ್ಗೆ ಅಭಿಮಾನ ಹೊಂದಿದ್ದಾರೆ. ಆದರೆ, ಯಡಿಯೂರಪ್ಪ ಅವರು ಆರ್.ಎಸ್.ಎಸ್. ಪ್ರಮುಖರನ್ನು ಮೆಚ್ಚಿಸಲು ಟಿಪ್ಪು ಸುಲ್ತಾನ್‌ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮೊದಲು ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನರ ಸಮಾಧಿ ಬಳಿ ಹೋಗಿ ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಆದರೆ, ಈಗ ವೈರುಧ್ಯದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಟಿಪ್ಪು ಎಲ್ಲ ಧರ್ಮೀಯರೊಂದಿಗೆ ಅನೋನ್ಯ ಸಂಬಂಧ ಹೊಂದಿದ್ದರು. ಹಿಂದೂ ರಾಣಿಯೊಬ್ಬಳ ರಕ್ಷಣೆಗಾಗಿ ಮುಸ್ಲಿಂ ಸೇನಾಪತಿಯನ್ನು ಕೊಲೆ ಮಾಡಲು ಟಿಪ್ಪು ಸುಲ್ತಾನ್ ಹಿಂದೆ, ಮುಂದೆ ನೋಡಿರಲಿಲ್ಲ. ಹಿಂದೂ ಮಹಿಳೆಯರ ರಕ್ಷಣೆಗೆ ಟಿಪ್ಪು ಸುಲ್ತಾನ್ ಕಟಿಬದ್ಧರಾಗಿದ್ದರು ಎನ್ನುವುದು ಇತಿಹಾಸವೇ ಹೇಳುತ್ತದೆ. ಅಂತಹ ಇತಿಹಾಸವನ್ನು ಯಾರಿಂದಲೂ ಅಳಿಸಲಾಗದು ಎಂದು ಹೇಳಿದ್ದಾರೆ.

ಧರ್ಮ ಹಾಗೂ ಜಾತಿ ರಾಜಕಾರಣದಿಂದ ಏನನ್ನೂ ಸಾಧಿಸಲಾಗದು. ಮಾನವೀಯತೆಯ ನೆಲೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು