ನಾಗೇಶ ಪ್ರಭಾ
ಜನವಾಡ: ಅಡುಗೆ ಸ್ವಾದ ಹೆಚ್ಚಿಸುವ ಟೊಮೆಟೊ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಚಿನ್ನದ ಬೆಲೆ ಬಂದ ಕಾರಣ ಎಲ್ಲೆಲ್ಲೂ ಅದರದ್ದೇ ಚರ್ಚೆ ನಡೆದಿದೆ. ರಾಜ್ಯದಲ್ಲಿ ಬೆಳೆಗೆ ಕಾವಲು ಇಟ್ಟ, ಕಳುವಾದ ಪ್ರಸಂಗಗಳೂ ಬೆಳಕಿಗೆ ಬಂದಿವೆ. ಸದ್ಯ ಈ ‘ಕೆಂಪು ಸುಂದರಿ' ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದ ‘ರಾಜಕುಮಾರ'ನ ಕೈ ಹಿಡಿದಿದ್ದಾಳೆ.
ರಾಜಕುಮಾರ ಜಗನ್ನಾಥ ಕಾಶೆಂಪುರ ಅವರು ಬೆಳೆದ ಟೊಮೆಟೊಗೆ ಬಂಪರ್ ಬೆಲೆ ದೊರೆಯುತ್ತಿದೆ. ಒಂದೂವರೆ ಎಕರೆಯಲ್ಲೇ ಅವರು ₹8 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಐದು ವರ್ಷಗಳಿಂದ ನಿರಂತರ ಟೊಮೆಟೊ ಬೇಸಾಯ ಮಾಡುತ್ತಿರುವ ಅವರು ಲಾಭ-ನಷ್ಟ ಎರಡನ್ನೂ ಕಂಡಿದ್ದಾರೆ. ಆದರೆ, ‘ತಾಳ್ಮೆಯ ಫಲ ಬಹಳ ಸಿಹಿಯಾಗಿರುತ್ತದೆ' ಎನ್ನುವ ಗಾದೆ ಅವರ ಪಾಲಿಗೆ ನಿಜವಾಗಿದೆ.
ಎಸ್ಸೆಸ್ಸೆಲ್ಸಿವರೆಗೆ ಓದಿರುವ 32 ವರ್ಷದ ರಾಜಕುಮಾರ ತಮ್ಮ ಎರಡು ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಜೂನ್ 25 ರಿಂದ ಬೆಳೆ ಕಟಾವು ಮಾಡಿ ಬೀದರ್ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ. ಆರಂಭದಲ್ಲಿ ಇವರಿಗೆ ಒಂದು ಕ್ಯಾರೆಟ್ (25 ಕೆ.ಜಿ.) ಟೊಮೆಟೊಗೆ ₹400 ಬೆಲೆ ಸಿಕ್ಕಿತ್ತು. ನಂತರ ಬೆಲೆ ಹೆಚ್ಚುತ್ತ ಹೋಯಿತು. ಜುಲೈ 12 ರಂದು ₹2,370ರಂತೆ 50 ಕ್ಯಾರೆಟ್ ಮಾರಾಟವಾಗಿದೆ.
‘ಐದು ವರ್ಷಗಳಿಂದ ಟೊಮೆಟೊ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಲಾಭ, ನಷ್ಟ ಎರಡೂ ಅನುಭವಿಸಿದ್ದೇನೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ತೀರಾ ಕಡಿಮೆ ಇದ್ದಾಗ ಗೋಶಾಲೆಗೆ ಕಳುಹಿಸಿದ್ದೇನೆ. ರಸ್ತೆ ಬದಿಗೂ ಚೆಲ್ಲಿದ್ದೇನೆ. ಇದೀಗ ಬಂಗಾರದ ಬೆಲೆ ಬಂದಿದ್ದರಿಂದ ಸಂತಸವಾಗಿದೆ’ ಎಂದು ರಾಜಕುಮಾರ ಜಗನ್ನಾಥ ತಿಳಿಸಿದರು.
ಬೀಜ, ಗೊಬ್ಬರ, ಔಷಧಿ, ಕಾರ್ಮಿಕರ ಕೂಲಿ ಸೇರಿ ಟೊಮೆಟೊ ಬೆಳೆಯಲು ಒಟ್ಟು ₹80 ಸಾವಿರ ಖರ್ಚಾಗಿದೆ. ಟೊಮೆಟೊ ಮಾರಾಟದಿಂದ ಈವರೆಗೆ ₹4 ಲಕ್ಷ ದೊರೆತಿದೆ. ಇನ್ನೂ ₹5 ಲಕ್ಷದ ಬೆಳೆ ಇದೆ. ಖರ್ಚು ಹೊರತುಪಡಿಸಿ ₹8 ಲಕ್ಷ ಆದಾಯ ಲಭಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಇನ್ನೂ ಒಂದು ತಿಂಗಳವರೆಗೆ ಬೆಳೆ ಕಟಾವು ಆಗಲಿದೆ. ನಿತ್ಯ ಬೆಳೆ ಕಾಯುತ್ತಿದ್ದೇನೆ. ಒಬ್ಬ ಸಹಾಯಕ ಕೂಡ ಹೊಲದಲ್ಲೇ ಇದ್ದಾರೆ ಎಂದು ತಿಳಿಸಿದರು.
ರೈತರು ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬೆಳೆದಿರುವುದು, ರೋಗ ಹಾಗೂ ಬೆಳೆ ಹಾಳಾಗಿರುವುದು ಟೊಮೆಟೊ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೂ ಒಂದು ತಿಂಗಳು ಇದೇ ಬೆಲೆ ಮುಂದುವರಿಯಲಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ ₹120 ರಿಂದ 160 ಇದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.