ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಕಾಯಿಕೊರಕ, ಜೋಳಕ್ಕೆ ಸೈನಿಕಹುಳು ಬಾಧೆ

ಕೃಷಿ ವಿಜ್ಞಾನಿಗಳು, ಅಧಿಕಾರಿಗಳಿಂದ ಜಂಟಿ ಕ್ಷಿಪ್ರ ಸಂಚಾರ ಸಮೀಕ್ಷೆ: ರೈತರಿಗೆ ಸಲಹೆ
Last Updated 26 ನವೆಂಬರ್ 2020, 5:00 IST
ಅಕ್ಷರ ಗಾತ್ರ

ಜನವಾಡ: ಬೀದರ್‌ ಜಿಲ್ಲೆಯ ವಿವಿಧೆಡೆ ತೊಗರಿಯಲ್ಲಿ ಹಸಿರು ಕಾಯಿಕೊರಕ, ಜೋಳದಲ್ಲಿ ಸೈನಿಕ ಹುಳು ಹಾಗೂ ಕಡಲೆಯಲ್ಲಿ ನೆಟೆ ರೋಗ ಬಾಧೆ ಕಂಡು ಬಂದಿದೆ.

ಜನವಾಡದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ನಡೆಸಿದ ಜಂಟಿ ಕ್ಷಿಪ್ರ ಸಂಚಾರ ಸಮೀಕ್ಷೆ ವೇಳೆ ಬೆಳೆಗಳಿಗೆ ಕೀಟಗಳು ಹಾಗೂ ರೋಗ ಬಾಧಿಸುತ್ತಿರುವುದು ಪತ್ತೆಯಾಗಿದೆ.

ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲ್ಲೂಕುಗಳ ಅನೇಕ ರೈತರ ಹೊಲಗಳಲ್ಲಿ ತೊಗರಿಗೆ ತೇವಾಂಶ ಕೊರತೆ ಕಾಡುತ್ತಿದೆ. ಹುಮನಾಬಾದ್ ತಾಲ್ಲೂಕಿನ ತಾಳಮಡಗಿ, ಹುಡಗಿ, ಭಾಲ್ಕಿ ತಾಲ್ಲೂಕಿನ ಸಾಂಗವಿ, ಕಮಲನಗರ ಹಾಗೂ ಠಾಣಾಕುಶನೂರು ಗ್ರಾಮಗಳ ಕೆಲ ರೈತರ ಹೊಲಗಳಲ್ಲಿ ಹಸಿರು ಕಾಯಿಕೊರಕ ಬಾಧೆ ಕಂಡು ಬಂದಿದ್ದು, ಆರ್ಥಿಕ ನಷ್ಟದ ರೇಖೆ ತಲುಪಿಲ್ಲ ಎಂದು ತಂಡದಲ್ಲಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ ತಿಳಿಸಿದ್ದಾರೆ.

ಕೀಟ ಆರ್ಥಿಕ ನಷ್ಟದ ರೇಖೆ ತಲುಪಿರುವುದು (ಪ್ರತಿ ಗಿಡಕ್ಕೆ 2 ಮೊಟ್ಟೆ/1 ಕೀಡೆ) ಕಂಡು ಬಂದಲ್ಲಿ ರೈತರು ಕೂಡಲೇ ಇಮಾಮೆಕ್ಟಿನ್ ಬೆಂಜೊಯೇಟ್ ಪ್ರತಿ ಲೀಟರ್ ನೀರಿಗೆ 0.2 ಗ್ರಾಂ ಅಥವಾ ಕ್ಲೋರ್ಯಾಂಟ್ರನಿಲಿಪ್ರೋಲ್ ಪ್ರತಿ ಲೀಟರ್ ನೀರಿಗೆ 0.15 ಮಿ.ಲೀ ಅಥವಾ ಫ್ಲೂಬೆಚಿಡಿಯಮಾಯಿಡ್ ಪ್ರತಿ ಲೀಟರ್ ನೀರಿಗೆ 0.075 ಮಿ.ಲೀ. ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.

ಬೀದರ್ ತಾಲ್ಲೂಕಿನ ಅತಿವಾಳ, ಕೊಳಾರ, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಬಿ), ಬೇನಚಿಂಚೋಳಿ ಹಾಗೂ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮಗಳ ರೈತರ ಹೊಲದಲ್ಲಿ ಜೋಳದಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದೆ.

ಮೊದಲ ಹಂತದ ಮರಿಹುಳು ಎಲೆಯನ್ನು ಕೆರೆದು ತಿನ್ನುವುದರಿಂದ ಎಲೆಯ ಮೇಲೆ ಬಿಳಿಯ ಪಾರದರ್ಶಕ ಜಾಲರಿಗಳು ಕಂಡು ಬರುತ್ತವೆ. ನಂತರ ಸುಳಿಯನ್ನು ತಿನ್ನುವುದರಿಂದ ಗಿಡ ಒಣಗುತ್ತದೆ. ಮರಿಹುಳು ಎಲೆಯ ತುದಿಯಿಂದ ತಿನ್ನುವುದರಿಂದ ಎಲೆಯು ಹರಿದಂತೆ ಕಾಣಿಸುತ್ತದೆ. ಮರಿಹುಳು ಒದ್ದೆಯಾದ ಹಳದಿ ಮಿಶ್ರಿತ ಕಂದು ಬಣ್ಣದ ಹಿಕ್ಕೆಯಿಂದ ಸುಳಿಯನ್ನು ಮುಚ್ಚುತ್ತದೆ ಎಂದು ಹೇಳಿದ್ದಾರೆ.

ಸೈನಿಕ ಹುಳುವಿನ ನಿರ್ವಹಣೆಗಾಗಿ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್. ಜಿ. ಪ್ರತಿ ಲೀಟರ್ ನೀರಿಗೆ 0.4 ಗ್ರಾಂ ಅಥವಾ ಸ್ಪೈನೋಸಾಡ್ 45 ಎಸ್.ಸಿ. ಪ್ರತಿ ಲೀಟರ್ ನೀರಿಗೆ 0.3 ಮಿ.ಲೀ ಅಥವಾ ಸ್ಪೈನೋಟೋರಂ 12.5 ಎಸ್. ಸಿ ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ. ಅಥವಾ ಕ್ಲೋರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ ಪ್ರತಿ ಲೀಟರ್‌ಗೆ 0.3 ಮಿ.ಲೀ ಮಿಶ್ರಣ ಮಾಡಿ ಸಿಂಪಡಿಸಬೇಕು. ಸಿಂಪರಣಾ ದ್ರಾವಣ ನೇರವಾಗಿ ಸುಳಿಯೊಳಗೆ ಬೀಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕಡಲೆ ಬೆಳೆಯಲ್ಲಿ ನೆಟೆ ರೋಗ

ಬೀದರ್‌ ಜಿಲ್ಲೆಯ ಕೆಲ ಕಡೆ ಕಡಲೆ ಬೆಳೆಯಲ್ಲಿ ನೆಟೆ ರೋಗ ಬಾಧೆ ಕಾಣಿಸಿದೆ ಎಂದು ಕೃಷಿವಿಜ್ಞಾನಿಗಳು ತಿಳಿಸಿದ್ದಾರೆ.

ರೋಗ ಬಾಧಿತ ಗಿಡದ ಎಲೆಗಳು ಹಳದಿಯಾಗಿ, ಬಾಡಿ ಜೋತು ಬಿದ್ದು, ನಂತರ ಒಣಗಿ ಉದುರದೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ಗಿಡದ ಬೇರುಗಳು ಕೊಳೆಯದೆ, ಆರೋಗ್ಯಯುತವಾಗಿರುವಂತೆ ಕಾಣುತ್ತವೆ. ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಸಾಗಣೆ ಅಂಗಾಂಶವು ಕಡು ಕಪ್ಪಾಗಿರುವುದು ಕಂಡು ಬರುತ್ತದೆ.

ರೋಗ ನಿರ್ವಹಣೆಗೆ ತಕ್ಷಣ ಕಾರ್ಬನ್‍ಡೈಜಿಮ್ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಬೆರೆಸಿ ಸರಿಯಾಗಿ ಗಿಡ ತೊಯ್ಯುವಂತೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ಅಧಿಕಾರಿಗಳು ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬಹುದು.

ಕೃಷಿ ವಿಜ್ಞಾನಿಗಳಾದ ಡಾ.ಮಲ್ಲಿಕಾರ್ಜುನ ನಿಂಗದಳ್ಳಿ, ಡಾ.ಜ್ಞಾನದೇವ ಬುಳ್ಳಾ, ಡಾ.ಅಕ್ಷಯಕುಮಾರ, ಡಾ ಬಸವರಾಜ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಿಕಾರ್ಜುನ ಪಿ.ಎಂ ಹಾಗೂ ರಮೇಶ ಮಸ್ಕಲೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT