ಶನಿವಾರ, ಅಕ್ಟೋಬರ್ 24, 2020
27 °C
ಕಾರಂಜಾ ಜಲಾಶಯಕ್ಕೆ ಅರ್ಧ ದಿನದಲ್ಲೇ ಅರ್ಧ ಟಿಎಂಸಿ ನೀರು

ಮಳೆ: ಬಿರುಗಾಳಿಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಿದೆ. ಮಹಾರಾಷ್ಟ್ರದ ಗಡಿಯಲ್ಲಿರುವ ಹೊಸೂರು ಬ್ಯಾರೇಜ್‌ ತುಂಬಿದ್ದು, ಗೇಟ್‌ಗಳನ್ನು ತೆರೆಯಲಾಗಿದೆ. ಮಳೆಯ ಅಬ್ಬರಕ್ಕೆ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಬೀದರ್‌ ತಾಲ್ಲೂಕಿನ ಚಿಮಕೋಡ, ಭಾಲ್ಕಿ ತಾಲ್ಲೂಕಿನ ದಾಡಗಿ ಹಾಗೂ ಚಿಟಗುಪ್ಪದ ಕೆರೆ ತುಂಬಿ ಹರಿಯುತ್ತಿವೆ. ಸಣ್ಣ ನೀರಾವರಿ ಇಲಾಖೆಯ ಒಟ್ಟು 82 ಕೆರೆಗಳು ತುಂಬಿವೆ.

ಮಳೆಯ ಅಬ್ಬರಕ್ಕೆ ಬೀದರ್‌ ನಗರದಲ್ಲಿ ಐದು ಮರಗಳು ಧರೆಗೆ ಉರುಳಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಹೋಗುವ ಮಾರ್ಗದಲ್ಲಿ ಮಂಗಲಪೇಟೆಯ ಬಳಿ ಬೆಳಗಿನ ಜಾವ ದೊಡ್ಡ ಮರವೊಂದು ನೆಲಕ್ಕೆ ಉರುಳಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಜೆಎನ್‌ಡಿ ಕಾಲೇಜು ರಸ್ತೆ, ಹಾರೂರಗೇರಿ ಕಮಾನ್‌, ವಿದ್ಯಾನಗರ ಹಾಗೂ ಎಸ್‌.ಎಂ,ಪಂಡಿತ ಕಾಲೇಜು ಬಳಿ ಬಿದ್ದಿದ್ದ ಮರಗಳನ್ನು ನಗರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ತೆರವುಗೊಳಿಸಿದರು.

ಕಾರಂಜಾ ಜಲಾಶಯದಲ್ಲಿ ಬುಧವಾರ 5.779 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ 6 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ಚುಳಕಿನಾಲಾ ಜಲಾಶಯ ತುಂಬಿದ್ದು, ನೀರು ಹೊರಗೆ ಬಿಡಲಾಗುತ್ತಿದೆ.

ಹಾಸಿಗೆಯೊಳಗೆ ನುಗ್ಗಿದ ನೀರು

ಬೀದರ್‌: ಬುಧವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ನಗರದ ಕೆಇಬಿ ಸಿಬ್ಬಂದಿ ವಸತಿಗೃಹಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿತು. ನಿದ್ರೆಯಲ್ಲಿದ್ದಾಗ ನೀರು ಮನೆಯೊಳಗೆ ನುಗ್ಗಿ ಹಾಸಿಗೆಯನ್ನು ಸೇರಿತು. ವಿದ್ಯುತ್ ಕೈಕೊಟ್ಟಿದ್ದರಿಂದ ಅಲ್ಲಿನ ನಿವಾಸಿಗಳು ದೀಪ ಹಚ್ಚಿಕೊಂಡು ಮಳೆಯ ನೀರನ್ನು ಹೊರಗೆ ಚೆಲ್ಲಲು ರಾತ್ರಿಯಿಡೀ ಪ್ರಯಾಸಪಡಬೇಕಾಯಿತು.
ಓಲ್ಡ್‌ಸಿಟಿ ಹಾಗೂ ಸಿಎಂಸಿ ಕಾಲೊನಿಯ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಬೇಕಾಯಿತು. ನೌಬಾದ್‌ನಲ್ಲಿರುವ ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ಮೆಡಿಕಲ್‌ ಕಾಲೇಜಿನ ಆವರಣದಲ್ಲಿರುವ ಕಟ್ಟಡದೊಳಗೆ ಹಾಗೂ ಸುತ್ತಲಿನ ಮನೆಗಳಿಗೆ ನೀರು ನುಗ್ಗಿತ್ತು.

ಕೈಕೊಟ್ಟ ವಿದ್ಯುತ್, ಮೊಬೈಲ್‌ ನೆಟ್‌ವರ್ಕ ಕಡಿತ

ಬೀದರ್‌: ನಗರದಲ್ಲಿ ನಾಲ್ಕು ವಿದ್ಯುತ್‌ ಕಂಬಗಳು ಬಿದ್ದಿವೆ. ಬಾಲಭವನದ ಬಳಿ ಬಿದ್ದಿದ್ದ ವಿದ್ಯುತ್ ಕಂಬವನ್ನು ಕೆಇಬಿ ಸಿಬ್ಬಂದಿ ಮಧ್ಯಾಹ್ನ ಸರಿಪಡಿಸಿದರು. ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದ ಕಾರಣ ವಿದ್ಯುತ್‌ ತಂತಿ, ಟೆಲಿಫೋನ್‌ ಹಾಗೂ ಟಿವಿ ಕೇಬಲ್‌ಗಳು ತುಂಡಾಗಿವೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಜೆಸ್ಕಾಂ ಸಿಬ್ಬಂದಿ ದಿನವಿಡೀ ಪ್ರಯಾಸ ಪಡಬೇಕಾಯಿತು.

ಮಂಗಳವಾರ ಸಂಜೆ ಕಡಿತಗೊಂಡಿದ್ದ ವಿದ್ಯುತ್ ಬುಧವಾರ ಸಂಜೆ ವರೆಗೂ ಬಂದಿರಲಿಲ್ಲ. ಮಂಗಳವಾರ ಸಂಜೆಯಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ವಿದ್ಯುತ್ ಲೈನ್‌ಗಳಲ್ಲಿನ ಲೋಪ ಹುಡುಕುವುದು ಕಷ್ಟವಾಗಿತ್ತು. ವಿದ್ಯುತ್‌ ಇಲ್ಲದ ಕಾರಣ ಮೊಬೈಲ್‌ಗಳು ಸ್ತಬ್ಧಗೊಂಡಿದ್ದವು. ದಿನವಿಡೀ ನೆಟ್‌ವರ್ಕ ಸಹ ಕಡಿತಗೊಂಡಿತ್ತು. ಬಿಎಸ್‌ಎನ್‌ಎಲ್‌ ಸಿಬ್ಬಂದಿ ಟಾವರ್‌ಗಳಲ್ಲಿ ಜನರೇಟರ್‌ ಶುರು ಮಾಡಿ ಗ್ರಾಹಕರಿಗೆ ಮೊಬೈಲ್‌ ನೆಟವರ್ಕ್‌ ಒದಗಿಸಿಕೊಡಲು ನಡೆಸಿದ ಪ್ರಯತ್ನ ಫಲನೀಡಲಿಲ್ಲ. ಕೆಲ ಕಡೆ ಲೈನ್‌ಗಳಲ್ಲೇ ದೋಷ ಕಾಣಿಸಿಕೊಂಡಿತ್ತು.

ಜಿಲ್ಲೆಯಲ್ಲಿ ತಡ ರಾತ್ರಿ ಅಬ್ಬರಿಸಿದ ಮಳೆ

ಬೀದರ್: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗಿನ ಜಾವ ಭಾರಿ ಬಿರುಗಾಳಿಯೊಂದಿಗೆ ಮಳೆ ಅಬ್ಬರಿಸಿತು. ಬುಧವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ ವರೆಗೆ ಮಳೆ ಬಿಡುವು ನೀಡಿತ್ತು.
ಹುಮನಾಬಾದ್‌ ತಾಲ್ಲೂಕಿನ ಚಂದನಹಳ್ಳಿಯಲ್ಲಿ 141 ಮಿ.ಮೀ, ಜಲಸಂಘ್ವಿಯಲ್ಲಿ 125 ಮಿ.ಮೀ, ರಾಮಪುರದಲ್ಲಿ 124 ಮಿ.ಮೀ, ಇಟಗಾದಲ್ಲಿ 83 ಮಿ.ಮೀ, ಧುಮ್ಮನಸೂರದಲ್ಲಿ 75 ಮಿ.ಮೀ, ಸಿಂಧನಕೇರಾದಲ್ಲಿ 70 ಮಿ.ಮೀ, ಡಾಕುಳಗಿಯಲ್ಲಿ 66 ಮಿ.ಮೀ ಹಾಗೂ ಚಿಟಗುಪ್ಪ ಹೋಬಳಿಯಲ್ಲಿ 119 ಮಿ.ಮೀ ಮಳೆ ಸುರಿದಿದೆ.

ಬೀದರ್‌ ತಾಲ್ಲೂಕಿನ ಅಲಿಯಾಬಾದ್‌ನಲ್ಲಿ 135 ಮಿ.ಮೀ, ಜನವಾಡದಲ್ಲಿ 124 ಮಿ.ಮೀ, ಮನ್ನಳ್ಳಿಯಲ್ಲಿ 125 ಮಿ.ಮೀ, ಯರನಳ್ಳಿಯಲ್ಲಿ 72 ಮಿ.ಮೀ, ಬೀದರ್‌ ದಕ್ಷಿಣದಲ್ಲಿ 126 ಮಿ.ಮೀ, ಹೊಕ್ರಾಣಾ(ಬಿ)ದಲ್ಲಿ 127 ಮಿ.ಮೀ, ಶ್ರೀಮಂಡಲ್‌ದಲ್ಲಿ 86 ಮಿ.ಮೀ, ಮರಕಲ್‌ನಲ್ಲಿ 75 ಮಿ.ಮೀ, ಚಾಂಬೋಳದಲ್ಲಿ 63 ಮಿ.ಮೀ, ಚಿಮಕೋಡ ಹಾಗೂ ಮನ್ನಳ್ಳಿಯಲ್ಲಿ 64 ಮಿ.ಮೀ ಮಳೆಯಾಗಿದೆ.

ಭಾಲ್ಕಿ ತಾಲ್ಲೂಕಿನ ಇಂಚೂರಲ್ಲಿ 74.5 ಮಿ.ಮೀ, ಮೇಥಿಮೆಳಕುಂದಾದಲ್ಲಿ 73 ಮಿ.ಮೀ, ಗೋರ ಚಿಂಚೋಳಿಯಲ್ಲಿ 70 ಮಿ.ಮೀ, ಸಾಯಿಗಾಂವದಲ್ಲಿ 68 ಮಿ.ಮೀ, ಲಂಜವಾಡದಲ್ಲಿ 66 ಮಿ.ಮೀ, ಔರಾದ್‌ ತಾಲ್ಲೂಕಿನ ಮುರ್ಕಿವಾಡಿಯಲ್ಲಿ 81 ಮಿ.ಮೀ, ಹೊಳಸಮುದ್ರದಲ್ಲಿ 64 ಮಿ.ಮೀ, ಮುಧೋಳದಲ್ಲಿ 66 ಮಿ.ಮೀ, ಕಮಲನಗರದಲ್ಲಿ 65 ಮಿ.ಮೀ ಮಳೆ ಬಿದ್ದಿದೆ. ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರದಲ್ಲಿ 85 ಮಿ.ಮೀ, ತೊಗಲೂರಲ್ಲಿ 74 ಮಿ.ಮೀ, ಸಸ್ತಾಪುರದಲ್ಲಿ 72 ಮಿ.ಮೀ. ಮಳೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು