ಗುರುವಾರ , ಅಕ್ಟೋಬರ್ 22, 2020
22 °C
ನರೇಗಾ ಯೋಜನೆ ಪರಿಣಾಮಕಾರಿ ಬಳಕೆಗೆ ಮೆಚ್ಚುಗೆ

ಸಸಿಗಳಿಗೆ ಜೀವ ತಂದ ಇಂಗುಗುಂಡಿ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಕಳೆದ ಮೂರು ವರ್ಷಗಳಿಂದ ಮಳೆ ಕೊರತೆಯಾಗಿ ಅಳಿವಿನ ಅಂಚಿ ನಲ್ಲಿದ್ದ ಸಾವಿರಾರು ಸಸಿಗಳಿಗೆ ಇಂಗು ಗುಂಡಿಗಳು ಮರು ಜೀವ ನೀಡಿವೆ.

ಲಾಕ್‌ಡೌನ್ ವೇಳೆ ಕಾರ್ಮಿಕರಿಗೆ ಕೆಲಸ ನೀಡಲು ಅರಣ್ಯ ಇಲಾಖೆ ತೋಡಿದ ಇಂಗುಗುಂಡಿಗಳಲ್ಲಿ ಈಗ ಭರಪೂರ ನೀರು ಸಂಗ್ರಹವಾಗಿದೆ. ಇದರಿಂದ ಎರಡು ಲಕ್ಷಕ್ಕೂ ಹೆಚ್ಚು ಸಸಿಗಳು ಚೇತರಿಸಿಕೊಂಡಿವೆ.

ಕಳೆದ ಕೆಲ ವರ್ಷಗಳಿಂದ ಮಳೆ ಕೊರತೆಯಾಗಿ ನಾಟಿ ಮಾಡಿದ ಅರ್ಧದಷ್ಟು ಸಸಿಗಳು ಉಳಿಸಿಕೊಳ್ಳಲು ತುಂಬಾ ಹರಸಹಾಸ ಪಡಬೇಕಾಯಿತು. ಆದರೆ ಈ ವರ್ಷ ಮಳೆ ಪ್ರಮಾಣ ಜಾಸ್ತಿಯಾಗಿ ತುಂಬಾನೇ ಅನುಕೂಲವಾಗಿದೆ. ಅದರಲ್ಲೂ ಇಂಗು ಗುಂಡಿಗಳು ವರದಾನವಾಗಿವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

‘ಲಾಕ್‌ಡೌನ್ ವೇಳೆ ಗ್ರಾಮೀಣ ಭಾಗದ ಕಾರ್ಮಿಕರಿಗೆ ಕೆಲಸ ಕೊಡಿ ಎಂಬ ಮೇಲಾಧಿಕಾರಿಗಳ ಕಳಕಳಿಯಿಂದಾಗಿ ನಾವು ಹೆಚ್ಚು ಕೆಲಸ ಮಾಡಲು ಸಾಧ್ಯವಾಯಿತು. ಎಲ್ಲೆಲ್ಲಿ ಸಿಸಿಗಳು ನೆಡಲಾಗಿತ್ತೊ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಯಿತು. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 21 ಸಾವಿರ ಮಾನವ ದಿನ ಸೃಷ್ಟಿಸಿ 1500 ಜನ ಕಾರ್ಮಿಕರಿಗೆ ಕೆಲಸ ಕೊಟ್ಟು ಅವರಿಂದ ಸುಮಾರು 2000 ಇಂಗು ಕಂದಕ ನಿರ್ಮಾಣ ಮಾಡಿಸಲಾಗಿದೆ. ಈಚೆಗೆ ಸುರಿದ ಮಳೆಯಿಂದ ಒಂದೊಂದು ಕಂದಕದಲ್ಲಿ 2 ಸಾವಿರ ಲೀಟರ್ ನೀರು ಸಂಗ್ರಹವಾಗಿದೆ. ಈ ನೀರು ಮೂರು ತಿಂಗಳ ತನಕ ಇರುತ್ತದೆ. ನಂತರವೂ ತೇವಾಂಶ ಇದ್ದು ಸಸಿಗಳ ಬೆಳವಣಿಗೆಗೆ ಪೂರಕವಾಗಲಿದೆ’ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ವೀರೇಶ್ ಕಲ್ಯಾಣಿ ತಿಳಿಸಿದ್ದಾರೆ.

ಮಳೆ ಕೊರತೆಯಿಂದಾಗಿ ಮರಗಳ ಸಂಖ್ಯೆ ಕ್ಷೇಣಿಸುತ್ತಿವೆ. ಇದರಿಂದ ಪ್ರಾಣಿ ಮತ್ತು ಪಕ್ಷಿಗಳ ಸಂಕುಲದ ಮೇಲೂ ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ತಾಲ್ಲೂಕಿನ ರೈತರು ಕೂಡ ಅರಣ್ಯ ಕೃಷಿ ಕಡೆ ಒತ್ತು ನೀಡುತ್ತಿದ್ದಾರೆ. ಶ್ರೀಗಂಧ, ಹೆಬ್ಬೇವು, ನುಗ್ಗೆ, ಸೀತಾಫಲ, ನಿಂಬೆ ಸೇರಿದಂತೆ ವಿವಿಧ ತಳಿಯ ಗಿಡಗಳು ಬೆಳೆಸಲು ರೈತರು ಉತ್ಸುಕತೆ ತೋರಿದ್ದಾರೆ. ಈ ವರ್ಷ ರೈತರ ಹೊಲದಲ್ಲಿ 55 ಸಾವಿರ ಸಸಿಗಳು ನಾಟಿ ಮಾಡಲಾಗಿದೆ. ಬೇಸಿಗೆಯಲ್ಲಿ ನರೇಗಾ ಯೋಜನೆಯಡಿ ರೈತರು ತಮ್ಮ ಹೊಲದಲ್ಲಿ ತಾವೇ ಸಸಿಗಳು ನಾಟಿ ಮಾಡಿಕೊಂಡಿದ್ದಾರೆ. ಕೃಷಿ ಹೊಂಡಗಳು ನಿರ್ಮಿಸಿ ನೀರು ಮತ್ತು ಮಣ್ಣು ಸಂರಕ್ಷಿಸುವ ಕೆಲಸ ಮಾಡಿ ಜಿಲ್ಲೆಗೆ ಮಾದರಿ ಎನಿಸಿದ್ದಾರೆ.

ರೈತರು ಹಾಗೂ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಬಳಸಿಕೊಂಡ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಜಿಲ್ಲಾಡಳಿತ ಮುಕ್ತಕಂಠದಿಂದ ಹೊಗಳಿದೆ. ಆಗಸ್ಟ್ 15ರಂದು ಜಿಲ್ಲಾ ಪಂಚಾಯಿತಿಯಲ್ಲಿ ವಲಯ ಅರಣ್ಯಾಧಿಕಾರಿ ವೀರೇಶ ಕಲ್ಯಾಣಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಜ್ಞಾನೇಂದ್ರಕುಮಾರ ಗಂಗ್ವಾರ್ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.