ಕ್ಷಯರೋಗಿಗಳಿಗೆ ₹ 30 ಸಾವಿರ ಬೆಲೆಯ ಮಾತ್ರೆಗಳು ಉಚಿತ

7
ನಿಯಮಿತವಾಗಿ ಮಾತ್ರೆ ಸೇವಿಸಿದರೆ ₹ 500 ಗೌರವ ಧನ

ಕ್ಷಯರೋಗಿಗಳಿಗೆ ₹ 30 ಸಾವಿರ ಬೆಲೆಯ ಮಾತ್ರೆಗಳು ಉಚಿತ

Published:
Updated:
ಡಾ.ಎಂ.ಎ.ಜಬ್ಬಾರ್‌

ಬೀದರ್‌: ‘ಕ್ಷಯರೋಗ ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತಿ ರೋಗಿಗೆ ಸರ್ಕಾರ ₹ 30 ಸಾವಿರ ಬೆಲೆಯ ಮಾತ್ರೆಗಳನ್ನು ಉಚಿತವಾಗಿ ಕೊಡುತ್ತಿದೆ. ಅಷ್ಟೇ ಅಲ್ಲ ನಿಯಮಿತವಾಗಿ ಮಾತ್ರೆ ಸೇವಿಸಿದ ರೋಗಿಗೆ ₹ 500 ಪ್ರೋತ್ಸಾಹ ಧನವನ್ನೂ ನೀಡಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದರು.

‘ಚಿಕಿತ್ಸೆಯ ಕೋರ್ಸ್‌ ಪೂರ್ಣಗೊಳಿಸಲು ಸಹಕರಿಸಿದ ಖಾಸಗಿ ವೈದ್ಯರಿಗೂ ಪ್ರೋತ್ಸಾಹಧನ ದೊರೆಯಲಿದೆ. ಪ್ರೋತ್ಸಾಹಧನವನ್ನು ರೋಗಿಯ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು’ ಎಂದು ಶನಿವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಕ್ಷಯರೋಗ ನಿಯಂತ್ರಣಕ್ಕಾಗಿ ಜಿಲ್ಲಾ ಆಡಳಿತದ ವತಿಯಿಂದ ಜುಲೈ 2 ರಿಂದ 13ರ ವರೆಗೆ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಕ್ಷಯರೋಗ ಪತ್ತೆಗಾಗಿ 477 ತಂಡಗಳನ್ನು ರಚಿಸಲಾಗಿದೆ. 610 ಆಶಾ ಕಾರ್ಯಕರ್ತೆಯರು ಹಾಗೂ 344 ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.

‘ಸಾಮಾನ್ಯವಾಗಿ 1 ಲಕ್ಷ ಜನಸಂಖ್ಯೆಯಲ್ಲಿ 211 ಜನರಲ್ಲಿ ಕ್ಷಯ ಕಾಣಿಸಿಕೊಳ್ಳುತ್ತದೆ. ಜಿಲ್ಲೆಯಲ್ಲಿ ಇದರ ಪ್ರಮಾಣ ಒಂದು ಲಕ್ಷಕ್ಕೆ 117 ಇದೆ. ಕೊಳೆಗೇರಿಗಳಲ್ಲಿ ಜಾಗೃತಿ ಜಾಥಾಗಳನ್ನು ಆಯೋಜಿಸಿ ಕರಪತ್ರ, ಭಿತ್ತಿಪತ್ರ, ಬೀದಿ ನಾಟಕಗಳ ಮೂಲಕ ಕ್ಷಯರೋಗದ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ದೀಪಾ ಖಂಡ್ರೆ ಮಾತನಾಡಿ, ‘ಜಿಲ್ಲೆಯಲ್ಲಿ 16 ಕಡೆ ಕಫ ಪರೀಕ್ಷಾ ಕೇಂದ್ರಗಳಿವೆ. ವೈದ್ಯಕೀಯ ವರದಿಯನ್ನು ಆಧರಿಸಿ ರೋಗ ನಿರೋಧಕ ಮಾತ್ರೆಗಳನ್ನು ಕೊಟ್ಟು ನಂತರ ಕ್ಷ ಕಿರಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇನ್ನೊಂದು ಹಂತದ ಪರೀಕ್ಷೆಯಲ್ಲಿ ಕ್ಷಯ ದೃಢಪಟ್ಟರೆ ಚಿಕಿತ್ಸೆ ಮುಂದುರಿಸಲಾಗುತ್ತದೆ’ ಎಂದು ತಿಳಿಸಿದರು.

‘ಹೊಸ ರೋಗಿಗಳಿಗೆ ಆರು ತಿಂಗಳು, ಮರು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಎಂಟು ತಿಂಗಳು ಹಾಗೂ ಹಳೆಯ ರೋಗಿಗಳಿಗೆ 24 ರಿಂದ 27 ತಿಂಗಳ ಅವಧಿಯ ಚಿಕಿತ್ಸೆ ನೀಡಲಾಗುತ್ತದೆ. ರೋಗ ಗಂಭೀರವಾಗಿದ್ದರೆ 30 ತಿಂಗಳ ವರೆಗೆ ಚಿಕಿತ್ಸೆ ಮುಂದುವರಿಸಲಾಗುತ್ತದೆ’ ಎಂದು ಹೇಳಿದರು.

‘2014ರ ಅಂಕಿ ಅಂಶಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕ್ಷಯರೋಗಿಗಳ ಮರಣದ ಪ್ರಮಾಣ ಕಡಿಮೆಯಾಗಿದೆ. ಸಕ್ಕರೆ ಕಾಯಿಲೆ ಇರುವವರು, ಕ್ಷಯರೋಗಗಿಗಳ ಸಂಪರ್ಕ ಇರುವವರು, ಧೂಮಪಾನ ಮಾಡುವವರು ಹಾಗೂ ಎಚ್‌ಐವಿ ಸೋಂಕಿತರಲ್ಲಿ ಕ್ಷಯರೋಗ ಬೇಗ ಕಾಣಿಸಿಕೊಳ್ಳುತ್ತದೆ. ಕ್ಷಯರೋಗದಿಂದ 2014ರಲ್ಲಿ 231, 2015ರಲ್ಲಿ 159 ಹಾಗೂ 2016ರಲ್ಲಿ 1,33 ಜನ ಮೃತಪಟ್ಟಿದ್ದಾರೆ’ ಎಂದು ವಿವರಿಸಿದರು.

ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ:
‘ವಿಶ್ವ ಜನಸಂಖ್ಯೆ ದಿನಾಚರಣೆ ಪ್ರಯುಕ್ತ ಜುಲೈ 11 ರಿಂದ 25ರ ವರೆಗೆ ಉಚಿತ ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಆಯೋಜಿಲಾಗಿದೆ’ ಎಂದು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ ತಿಳಿಸಿದರು.

‘ಮೊದಲು ಗರ್ಭಧಾರಣೆ ತಡೆಯಲು ಮಹಿಳೆಯರು ಮಾಲಾ–ಡಿ ಮಾತ್ರೆಗಳನ್ನು ಸೇವಿಸುತ್ತಿದ್ದರು. ಈಗ ಛಾಯಾ ಹೆಸರಿನಲ್ಲಿ ಸುಧಾರಿತ ಮಾತ್ರೆಗಳು ಬಂದಿವೆ. ಪ್ರಸ್ತುತ ಮೂರು ತಿಂಗಳು, ಆರು ತಿಂಗಳು ಹಾಗೂ ಎರಡು ವರ್ಷಗಳ ಕಾಲ ಗರ್ಭಧಾರಣೆ ತಡೆಯುವ ಇಂಜೆಕ್ಷನ್‌ಗಳು ಬಂದಿವೆ. ಪುರುಷರಿಗೆ ಉಚಿತವಾಗಿ ನಿರೋಧಗಳನ್ನು ಪೂರೈಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಖಾಸಗಿ ವೈದ್ಯರು ಹಾಗೂ ಔಷಧ ವಿತರಕರು ಕ್ಷಯರೋಗ ಪತ್ತೆ ಮಾಡಿ ರೋಗದ ವಿವರ ನೀಡಿದರೆ ₹ 500 ಗೌರವಧನ ಕೊಡಲಾಗುವುದು.
- ಡಾ.ಎಂ.ಎ.ಜಬ್ಬಾರ್, ಡಿಎಚ್‌ಒ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !