ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಸಚಿವದ್ವಯರಿಗೆ ಮತ್ತೆ ಅಶುಚಿತ್ವ ದರ್ಶನ

ಭಾನುವಾರ, ಜೂಲೈ 21, 2019
22 °C
ಇಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವರ ಭೇಟಿ

ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಸಚಿವದ್ವಯರಿಗೆ ಮತ್ತೆ ಅಶುಚಿತ್ವ ದರ್ಶನ

Published:
Updated:
Prajavani

ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್ ನಗರದ ಬ್ರಿಮ್ಸ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.

ಇಬ್ಬರು ಸಚಿವರು ಆಸ್ಪತ್ರೆಗೆ ಭೇಟಿ ಕೊಡುತ್ತಿರುವುದು ಆಸ್ಪತ್ರೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸ್ವಚ್ಛತೆ ಕೈಗೊಂಡಿರಲಿಲ್ಲ. ಹೀಗಾಗಿ ಸಚಿವರಿಗೆ ಮತ್ತೆ ಅಶುಚಿತ್ವದ ದರ್ಶನ ಆಯಿತು.

ಎಲುಬು, ಕೀಲುಗಳ ವಿಭಾಗದ ಶೌಚಾಲಯಗಳು ಹೊಲಸು ತುಂಬಿಕೊಂಡು ಗಬ್ಬು ನಾರುತ್ತಿರುವುದನ್ನು ಸಚಿವರು ಖುದ್ದು ನೋಡಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಬಂದ ಜನ ಅಲ್ಲಲ್ಲಿ ಮೂಲೆಗಳಲ್ಲಿ ಎಲೆ ಅಡಿಕೆ, ಗುಟಕಾ ಜಗಿದು ಉಗುಳಿರುವುದು ಕಂಡು ಬಂದಿತು. ನಾಲ್ಕನೆಯ ಮಹಡಿಯಲ್ಲಿ ಮಧ್ಯಾಹ್ನ ಸಚಿವರು ಬಂದಿರುವುದನ್ನು ಕಂಡು ಸಿಬ್ಬಂದಿಯೊಬ್ಬರು ಫಿನಾಯಿಲ್‌ ಹಾಕಿ ನೆಲಹಾಸು ಶುಚಿಗೊಳಿಸಿದರು.

ಕೆಲ ಲಿಫ್ಟ್‌ಗಳು ಬಂದ್‌ ಆಗಿದ್ದವು. ಆಸನಗಳು ಇಲ್ಲದ ಕಾರಣ ರೋಗಿಗಳು ಹಾಗೂ ಅವರ ಸಂಬಂಧಿ ನೆಲದ ಮೇಲೆ ಕುಳಿತುಕೊಂಡಿದ್ದರು. ಕೆಲವರು ಆವರಣದಲ್ಲಿ ಚಟಾಯಿ ಹಾಕಿ ವಿಶ್ರಾಂತಿ ಪಡೆಯುತ್ತಿದ್ದರು. ಆಸ್ಪತ್ರೆಯೊಳಗಡೆ ಅಲ್ಲಲ್ಲಿ ಕಾಗದ ತುಣಕುಗಳು ಬಿದ್ದುಕೊಂಡಿದ್ದವು. ಸಚಿವರು ಮೂಗು ಮುಚ್ಚಿಕೊಂಡು ಆಸ್ಪತ್ರೆಯನ್ನು ಪರಿಶೀಲಿಸಬೇಕಾಗಿ ಬಂದಿತು.

‘ಹಾಳಾಗಿರುವ ಲಿಫ್ಟ್‌ ಬಗೆಗೆ ವರದಿ ಮಾಡಿ ಅದನ್ನು ಸರಿಪಡಿಸಬೇಕು. ರೋಗಿಗಳು ಹಾಗೂ ಅವರ ಸಂಬಂಧಿ ನೆಲದ ಮೇಲೆ ಕುಳಿತಿರುವುದನ್ನು ವೀಕ್ಷಿಸಿ ಸರಿಯಾದ ವ್ಯವಸ್ಥೆ ಮಾಡಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಶಾಂತ, ಬ್ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಅಂತಪ್ಪನವರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರತಿಕಾಂತ ಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !