ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗಳಿಂದ 10 ರಂದು ಪ್ರತಿಭಟನಾ ರ್‍ಯಾಲಿ

ಅನುದಾನಿತ ಶಾಲೆ ಸೌಲಭ್ಯ ಖಾಸಗಿ ಶಾಲೆಗಳಿಗೂ ವಿಸ್ತರಿಸಲು ಆಗ್ರಹ
Last Updated 5 ಡಿಸೆಂಬರ್ 2019, 9:32 IST
ಅಕ್ಷರ ಗಾತ್ರ

ಬೀದರ್: ‘ಸರ್ಕಾರ, ಕಲ್ಯಾಣ ಕರ್ನಾಟಕದ ಅನುದಾನಿತ ಶಾಲೆಗಳಿಗೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆ ಅನ್ವಯ ಒದಗಿಸುತ್ತಿರುವ ಸೌಲಭ್ಯಗಳನ್ನು ಅನುದಾನ ರಹಿತ ಖಾಸಗಿ ಶಾಲೆಗಳಿಗೂ ಕಲ್ಪಿಸಬೇಕು ಒತ್ತಾಯಿಸಿ ಡಿಸೆಂಬರ್ 10 ರಂದು ನಗರದಲ್ಲಿ ಪ್ರತಿಭಟನಾ ನಡೆಸಲಾಗುವುದು’ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಬಸವರಾಜ ಭರಶೆಟ್ಟಿ ತಿಳಿಸಿದರು.

‘ನಗರದ ಹಿಂದುಳಿದ ವರ್ಗಗಳ ವಸತಿ ನಿಲಯದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಜಿಲ್ಲೆಯ 800 ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅನುದಾನಿತ ಶಾಲೆಗಳಿಗಿಂತ ಅನುದಾನ ರಹಿತ ಶಾಲೆಗಳೇ ಮುಂದಿವೆ. ಆದರೂ, ಸರ್ಕಾರ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಯಾವುದೇ ಸೌಲಭ್ಯ ಒದಗಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅನುದಾನಿತ ಶಾಲೆಗಳಲ್ಲಿ ಜಾರಿಯಲ್ಲಿರುವ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ವಿತರಣೆ, ಕ್ಷೀರಭಾಗ್ಯ ಹಾಗೂ ಬಿಸಿಯೂಟ ಯೋಜನೆಗಳನ್ನು ಖಾಸಗಿ ಅನುದಾನ ರಹಿತ ಶಾಲೆಗಳಿಗೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

‘ಬಡ ಮಕ್ಕಳ ಹಿತದೃಷ್ಟಿಯಿಂದ ಆರ್‌ಟಿಇ ಶುಲ್ಕ ಮರು ಪಾವತಿ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕು. ಖಾಸಗಿ ಶಾಲೆಗಳ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆಗೆ ಅನುಮತಿ ಕೊಡಬೇಕು. ಸ್ವಚ್ಛ ಭಾರತ ಯೋಜನೆಯಡಿ ಖಾಸಗಿ ಶಾಲೆಗಳಲ್ಲೂ ಶೌಚಾಲಯ ನಿರ್ಮಿಸಬೇಕು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರಂತೆ ಖಾಸಗಿ ಶಾಲಾ ಶಿಕ್ಷಕರಿಗೂ ಗೌರವಧನ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

ತಡೋಳಾದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಸರ್ಕಾರ ಸೌಲಭ್ಯ ಒದಗಿಸದ ಕಾರಣ ಖಾಸಗಿ ಶಾಲೆಗಳು ವ್ಯಾಪಾರ ಕೇಂದ್ರಗಳಾಗುತ್ತಿವೆ. ಇದು, ಭ್ರಷ್ಟಾಚಾರಕ್ಕೂ ಎಡೆಮಾಡಿಕೊಡುತ್ತಿದೆ. ಸರ್ಕಾರ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ನಿಯಂತ್ರಿಸಬಹುದು’ ಎಂದು ತಿಳಿಸಿದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಶಿಕ್ಷಣ ರಂಗದಿಂದಲೇ ಎಲ್ಲ ರಂಗಗಳ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಸರ್ಕಾರ ಶಿಕ್ಷಣದಲ್ಲಿ ತಾರತಮ್ಯ ಮಾಡಬಾರದು. ಖಾಸಗಿ ಶಾಲೆಗಳ ಅಭಿವೃದ್ಧಿಗೂ ಒತ್ತು ಕೊಡಬೇಕು’ ಎಂದು ಆಗ್ರಹಿಸಿದರು.

ಹಲಬರ್ಗಾದ ರಾಚೋಟೇಶ್ವರ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಉಪಾಧ್ಯಕ್ಷ ಸಂದೀಪ ಶೆಟಕಾರ, ಕಾರ್ಯದರ್ಶಿ ಗುರುನಾಥ ರೆಡ್ಡಿ ಚಿಂತಾಕಿ, ಖಜಾಂಚಿ ರಾಜೇಂದ್ರ ಮಣಗಿರೆ, ಸಂಘಟನಾ ಕಾರ್ಯದರ್ಶಿ ಸಲೀಂ ಪಾಷಾ, ಸುರೇಶ ಪಾಟೀಲ, ಬಸವರಾಜ ಶೆಟಕಾರ, ಲಕ್ಷ್ಮೀಕಾಂತ, ಅನೂಪ ಪಾಠಕ್, ಅನಿಲ ಭಾಲ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT