ಗುರುವಾರ , ನವೆಂಬರ್ 21, 2019
27 °C
ಶೋಷಿತ ವರ್ಗಗಳ ಜನಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಎಚ್ಚರಿಕೆ

ಸಂಘಟಿತರಾಗದಿದ್ದರೆ ನ್ಯಾಯ ಇನ್ನಷ್ಟು ವಿಳಂಬ

Published:
Updated:
Prajavani

ಬೀದರ್‌: ‘ಶೋಷಿತ ವರ್ಗದವರು ಸಂಘಟಿತರಾದಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಹೋರಾಟ ಹಾಗೂ ಸಂಘಟನೆ ಇಲ್ಲದಿದ್ದರೆ ಶೋಷಿತರು ನ್ಯಾಯ ಪಡೆಯುವುದು ಇನ್ನಷ್ಟು ವಿಳಂಬವಾಗಲಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. 

ಇಲ್ಲಿಯ ಗಣೇಶ ಮೈದಾನದಲ್ಲಿ ಶೋಷಿತ ವರ್ಗಗಳ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಶೋಷಿತ ವರ್ಗಗಳ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ ವ್ಯವಸ್ಥೆಯಿಂದ ಶೋಷಿತರು ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಮನುಸ್ಮೃತಿಯ ಮೂಲಕ ಚತುರ್ವಣ ವ್ಯವಸ್ಥೆಯನ್ನು ಹುಟ್ಟು ಹಾಕಲಾಗಿದೆ. ಶೂದ್ರರು ಬ್ರಾಹ್ಮಣ, ಕ್ಷತ್ರೀಯ ಹಾಗೂ ವೈಶ್ಯರ ಸೇವೆಗಾಗಿ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ. ಅಂತೆಯೇ ನೂರಾರು ವರ್ಷಗಳಿಂದ ಶೂದ್ರರು ಶಿಕ್ಷಣ ಹಾಗೂ ಸಂಪತ್ತಿನಿಂದ ವಂಚಿತರಾಗಿದ್ದಾರೆ’ ಎಂದು ತಿಳಿಸಿದರು.

‘ಜಾತಿ ವ್ಯವಸ್ಥೆಗೆ ಚಹರೆ ಇಲ್ಲ. ಬುದ್ಧನ ಕಾಲದಿಂದಲೂ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಪ್ರಯತ್ನ ನಡೆದಿವೆ. ಡಾ.ಅಂಬೇಡ್ಕರ್‌ ಹೇಳುವಂತೆ ನಮ್ಮ ಸಾಮಾಜಿಕ ವ್ಯವಸ್ಥೆಗೆ ಚಲನಶೀಲತೆ ಇಲ್ಲ. ನಿಂತಲ್ಲೇ ನಿಂತಿರುವ ಕಾರಣ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ’ ಎಂದರು.

‘ಜಾತಿ ವ್ಯವಸ್ಥೆ ಬಾವಿಯಲ್ಲಿ ಬಿದ್ದ ಕಸದಂತಾಗಿದೆ. ಬಿಂದಿಗೆಯನ್ನು ನೀರಿನಲ್ಲಿ ಚೆಲ್ಲಿ ಕಸವನ್ನು ಸರಿಸಿ ನೀರು ತುಂಬಿಕೊಳ್ಳುವಂತೆ ಹೋರಾಟ ನಡೆಸಿದಾಗ ಮಾತ್ರ ಕೆಲ ಬದಲಾವಣೆ ಕಂಡು ಬರುತ್ತದೆ. ಹೋರಾಟ ನಿಂತಾಗ ವ್ಯವಸ್ಥೆ ಮತ್ತೆ ಅದೇ ಸ್ಥಿತಿಗೆ ಬಂದು ನಿಲ್ಲುತ್ತದೆ’ ಎಂದು ಹೇಳಿದರು.

‘1835ರಲ್ಲಿ ಬ್ರಿಟಿಷರು ಎಲ್ಲರಿಗೂ ಶಿಕ್ಷಣ ಪದ್ಧತಿ ಜಾರಿಗೆ ತಂದರು. ಆದರೆ ಕಡ್ಡಾಯ ಶಿಕ್ಷಣ ಪದ್ಧತಿ ಜಾರಿಗೆ ಬಂದಿದ್ದು 1950ರಲ್ಲಿ. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಅಷ್ಟೇ ಮೀಸಲಾತಿ ಒದಗಿಸಿಲ್ಲ. ಹಿಂದುಳಿದ ವರ್ಗಗಳಿಗೂ ಮೀಸಲಾತಿ ಕಲ್ಪಿಸಿದೆ. ಪ್ರತಿಯೊಬ್ಬರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಂಡಲ ವರದಿಯನ್ನು ಬಿಜೆಪಿಯವರು ವಿರೋಧಿಸಿದರು. ಅದಕ್ಕೆ ಪ್ರಜೋದನೆಯನ್ನೂ ನೀಡಿದ್ದರಿಂದ ಕೆಲ ವಿದ್ಯಾರ್ಥಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಲಾಲಕೃಷ್ಣ ಅಡ್ವಾಣಿ ರಥಯಾತ್ರೆಯನ್ನೆ ನಡೆಸಿದರು. ಶೋಷಿತ ವರ್ಗದವರು ತಮ್ಮ ಪರವಾಗಿ ಇರುವವರನ್ನು ಬೆಂಬಲಿಸಬೇಕು. ವಿರೋಧಿಗಳನ್ನು ಬೆಂಬಲಿಸಿದರೆ ಮುಂದೊಂದು ದಿನ ಗಂಡಾಂತರ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಅರ್ಜುನಸಿಂಗ್ ಅವರು ಉನ್ನತ ಶಿಕ್ಷಣದಲ್ಲೂ ಮೀಸಲಾತಿ ಕಲ್ಪಿಸಿದರು. ಅದನ್ನು ಚತುವರ್ವಣವಾದಿಗಳು ವಿರೋಧಿಸಿದ್ದರು. ನಾಡಿನ ಪ್ರತಿಯೊಬ್ಬರು ಇತಿಹಾಸ ಹಾಗೂ ನೈಜತೆ ಅರಿಯಬೇಕು. ಅಪಪ್ರಚಾರಕ್ಕೆ ಬಲಿಯಾಗಬಾರದು. ಅವರಿಗೂ ಜೈ, ಇವರಿಗೂ ಜೈ ಎಂದರೆ ಎಂದಿಗೂ ನ್ಯಾಯ ಸಿಗಲಾರದು’ ಎಂದು ಹೇಳಿದರು.

‘371ಜೆ ಅಡಿ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ಒದಗಿಸುವಂತೆ ಅಡ್ವಾಣಿ ಅವರಿಗೆ ಮನವಿ ಕೊಟ್ಟಾಗ ಅವರು ಅದನ್ನು ತಿರಸ್ಕರಿಸಿದ್ದರು. ಈಗ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದಾರೆ. ಇದಕ್ಕೆ ನನ್ನ ತಕರಾರಿಲ್ಲ. ಕೇವಲ ಹೆಸರು ಬದಲಾವಣೆಯಿಂದ ಏನೂ ಮಾಡಲಾಗದು. ಸೌಲಭ್ಯವನ್ನೂ ಕೊಡಬೇಕು’ ಎಂದರು.

ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ರಹೀಂ ಖಾನ್, ಬಿ.ನಾರಾಯಣರಾವ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್, ಸಮಾವೇಶದ ಸಂಯೋಜಕರಾದ ಬಸವರಾಜ ಮಾಳಗೆ, ಆನಂದ ದೇವಪ್ಪ, ಅನಿಲಕುಮಾರ ಬೆಲ್ದಾರ್, ಅಮೃತರಾವ್‌ ಚಿಮಕೋಡ, ಚಂದ್ರಾಸಿಂಗ್, ಮನ್ನಾನ್‌ ಸೇಠ್, ಗೋವರ್ಧನ್‌ ರಾಠೋಡ್, ಲೋಕೇಶ ಮೇತ್ರೆ, ಕಲ್ಯಾಣರಾವ್‌ ಭೋಸಲೆ, ಬಾಬು ಪಾಸ್ವಾನ್, ಕಲ್ಯಾಣರಾವ್ ಭೋಸಲೆ ಇದ್ದರು.

ಪ್ರತಿಕ್ರಿಯಿಸಿ (+)