ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಬಳಕೆಯಾಗದ ಸಾರ್ವಜನಿಕ ಶೌಚಾಲಯಗಳು

ಎಲ್ಲ ಕಡೆ ನೀರಿನ ಕೊರತೆ, ನಿರ್ವಹಣೆ ಸಮಸ್ಯೆ
Last Updated 24 ಜನವರಿ 2021, 19:30 IST
ಅಕ್ಷರ ಗಾತ್ರ

ಬೀದರ್‌: ಐತಿಹಾಸಿಕ ಮಹತ್ವ ಪಡೆದಿರುವ ಬೀದರ್‌ ಜಿಲ್ಲೆ ಶೌಚಾಲಯಗಳ ಬಳಕೆಯಲ್ಲಿ ಇಂದಿಗೂ ಹಿಂದುಳಿದಿದೆ. ನೀರಿನ ಕೊರತೆ ಹಾಗೂ ನಿರ್ವಹಣೆಯ ಸಮಸ್ಯೆಯೇ ಇದಕ್ಕೆ ಮುಖ್ಯ ಕಾರಣ.

ಸಾರ್ವಜನಿಕ ಶೌಚಾಲಯಗಳಿದ್ದರೂ ಬೀದರ್‌, ಹುಮನಾಬಾದ್ ಹಾಗೂ ಔರಾದ್‌ನ ಕೆಲ ಪ್ರದೇಶಗಳ ನಿವಾಸಿಗಳು ಬಯಲು ಶೌಚಕ್ಕೆ ಹೋಗುತ್ತಿರುವ ಕಾರಣ ಜಿಲ್ಲೆಯ ಜನ ತಲೆಗ್ಗಿಸುವಂತಾಗಿದೆ.

ಬೀದರ್‌ ನಗರದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 30 ಸಾರ್ವಜನಿಕ ಶೌಚಾಲಯಗಳಿವೆ. ಇವುಗಳಲ್ಲಿ 9 ಶೌಚಾಲಗಳಿಗೆ ಮೂರು ವರ್ಷಗಳಿಂದ ಬೀಗ ಹಾಕಲಾಗಿತ್ತು. ಸಾರ್ವಜನಿಕರ ಆಕ್ರೋಶ ಹೆಚ್ಚಾದ ನಂತರ ಕಳೆದ ವರ್ಷ ಒಂಬತ್ತು ಶೌಚಾಲಯಗಳನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಅವು ಸಾರ್ವಜನಿಕರ ಬಳಕೆಗೆ ಇಂದಿಗೂ ಮುಕ್ತವಾಗಿಲ್ಲ.

ಜಿಲ್ಲಾ ನಗರ ಅಭಿವೃದ್ಧಿ ಕೋಶದ ಮೂಲಕವೇ ನಗರ, ಪಟ್ಟಣಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿತ್ತು. ಕಟ್ಟಡ ಕಾಮಗಾರಿ ಮುಗಿದ ನಂತರ ನಿರ್ವಹಣೆಯ ಸಮಸ್ಯೆ ಎದುರಾಗಿ ಖಾಸಗಿಯವರಿಗೆ ವಹಿಸಿಕೊಡಲು ಮೂರು ವರ್ಷಗಳೇ ಬೇಕಾದವು. ಹೀಗಾಗಿ ನಗರದ ಜನ ಸಮುದಾಯ ಶೌಚಾಲಯ ಬಳಸಲು ಪರದಾಡಬೇಕಾಗಿದೆ.

ಬೀದರ್‌ನ ವಾರ್ಡ್‌ ಸಂಖ್ಯೆ 3 ರ ಮುಸ್ತೈದಪುರ, ವಾರ್ಡ್‌ ಸಂಖ್ಯೆ 14ರ ಪಶು ಆಸ್ಪತ್ರೆಯ ಹಿಂಬದಿ, ವಾರ್ಡ್‌ ಸಂಖ್ಯೆ15 ರ ನಾವದಗೇರಿಯ ಎರಡು ಕಡೆ, ವಾರ್ಡ್‌ ಸಂಖ್ಯೆ 24ರ ಇರಾನಿ ಕಾಲೊನಿ, ವಾರ್ಡ್‌ ಸಂಖ್ಯೆ 17ರ ಪ್ರತಾಪನಗರ, ವಾರ್ಡ್‌ ಸಂಖ್ಯೆ 30ರ ದೇವಿ ಮಂದಿರ, ಪ್ರತಾಪನಗರದ ಪೊಲೀಸ್‌ ವಸತಿಗೃಹದ ಸಮೀಪ ಹಾಗೂ ಚೌಬಾರಾ ವೃತ್ತದ ಬಳಿ 2018ರಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಹಾಗೂ ನಗರಸಭೆ ವಿಶೇಷ ಅನುದಾನದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ.

ವಾರ್ಡ್‌ ಸಂಖ್ಯೆ 10 ಭೀಮನಗರ, ಕಸಾಯಿ ಖಾನೆ, ವಾರ್ಡ್‌ ಸಂಖ್ಯೆ 13ರ ಶಹಾಗಂಜ್‌ ಲೇಬರ್‌ ಕಾಲೊನಿ, ವಾರ್ಡ್‌ ಸಂಖ್ಯೆ 14ರ ದೇವರಾಜ್‌ ಅರಸ್‌ ಕಾಲೊನಿ, ವಾರ್ಡ್‌ ಸಂಖ್ಯೆ 31ರ ಕ್ರಿಶ್ಚಯನ್‌ ಗಲ್ಲಿ, ಲಿಂಗಾಯತ ಗಲ್ಲಿ, ವಾರ್ಡ್‌ ಸಂಖ್ಯೆ 32ರ ಹೂಗೇರಿ, ವಾರ್ಡ್‌ ಸಂಖ್ಯೆ 33ರಲ್ಲಿ ಅಬ್ದುಲ್‌ ಫಯಾಜ್‌ ದರ್ಗಾ ಬಳಿ ಸಾರ್ವಜನಿಕ ಶೌಚಾಲಯಗಳು ಇವೆ. ನಿರ್ವಹಣೆಯ ಸಮಸ್ಯೆಯಿಂದಾಗಿ ಗಬ್ಬು ನಾರುತ್ತಿವೆ. ಕೆಲವು ಸುಲಭ ಶೌಚಾಲಯಗಳಾಗಿ ಪರಿವರ್ತನೆ ಹೊಂದಿದರೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ.

ವಾರ್ಡ್‌ ಸಂಖ್ಯೆ 27ರಲ್ಲಿರುವ ಸ್ಮಶಾನ ಹಿಂಬದಿಯ ಸಾರ್ವಜನಿಕ ಶೌಚಾಲಯ ಹಾಗೂ ಮೈಲೂರ್‌ ಕ್ರಾಸ್‌ ಸರ್ಕಾರಿ ಶಾಲೆ ಸಮೀಪದ ಸಾರ್ವಜನಿಕ ಶೌಚಾಲಯಕ್ಕೆ ಇಂದಿಗೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ ಬಾರದಿದ್ದರೂ ಶೌಚಾಲಯ ಗಬ್ಬು ನಾರುತ್ತದೆ.

ಜಿಲ್ಲಾ ಕೇಂದ್ರದಲ್ಲೇ ಬಯಲು ಶೌಚ ಮುಂದುವರಿದಿದೆ. ನಗರದ ನಾವದಗೇರಿ, ಲಾಡಗೇರಿ, ಹೂಗೇರಿ ಮತ್ತಿತರ ಪ್ರದೇಶಗಳಲ್ಲಿ ಬೆಳಗಿನ ಜಾವ ಈಗಲೂ ಜನ ಚೆಂಬು ಹಿಡಿದು ಬಯಲು ಶೌಚಕ್ಕೆ ಹೋಗುವುದು ಸಾಮಾನ್ಯವಾಗಿದೆ.

‘ನಾವದಗೇರಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡುವಂತೆ ನಗರಸಭೆಗೆ 10 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಒಂದು ಸಮುದಾಯ ಶೌಚಾಲಯ ನಿರ್ಮಿಸಿದರೂ ಉದ್ಘಾಟನೆ ಮೊದಲೇ ಬಿದ್ದು ಹೋಗಿದೆ. ಗಂಡಸರು ಶೌಚಕ್ಕೆ ಎಲ್ಲಿಯೂ ಹೋಗಬಹುದು. ಆದರೆ ಮಹಿಳೆಯರು ಏನು ಮಾಡಬೇಕು’ ಎಂದು ನಾವದಗೇರಿಯ ನಿವಾಸಿಗಳು ಪ್ರಶ್ನಿಸುತ್ತಾರೆ.

‘ಬೀದರ್‌ ನಗರ ಅಭಿವೃದ್ಧಿ ಕೋಶದಿಂದ ಯಾವ ಕೆಲಸಗಳು ಆಗುತ್ತಿಲ್ಲ. ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳಿಗೆ ಕೆಲಸ ಮಾಡುವ ಮನಸ್ಸಿಲ್ಲ. ಜನರ ಸಮಸ್ಯೆಯನ್ನು ಯಾರ ಬಳಿಗೆ ಹೇಳಿಕೊಳ್ಳಬೇಕು’ ಎಂದು ನಾವದಗೇರಿ ನಿವಾಸಿ ಜಟ್ಟಿಂಗರಾಯ್‌ ಡಬಲಾಪುರ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT