ಶುಕ್ರವಾರ, ಜನವರಿ 24, 2020
17 °C
ಪ್ರಗತಿ ಪರಿಶೀಲನೆ ನಡೆಸಿದ ಸುಭೋದ್ ಯಾದವ್‌

ಕೆಕೆಆರ್‌ಡಿಬಿ ಕಾಮಗಾರಿ: ಅಧಿಕಾರಿಗಳಿಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಡಿ ಕೈಗೆತ್ತಿಕೊಂಡ ₹ 30 ಲಕ್ಷ ವರೆಗಿನ ಕಾಮಗಾರಿಗಳನ್ನು ಮೂರು ತಿಂಗಳೊಳಗೆ, ₹ 30 ಲಕ್ಷದಿಂದ ₹ 1 ಕೋಟಿವರೆಗಿನ ಕಾಮಗಾರಿಗಳನ್ನು ಐದು ತಿಂಗಳೊಳಗೆ, ₹ 1 ಕೋಟಿಯ ಕಾಮಗಾರಿಗಳನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು’ ಎಂದು ಮಂಡಳಿಯ ಕಾರ್ಯದರ್ಶಿ ಸುಬೋಧ್ ಯಾದವ್ ಸಂಬಂಧಿಸಿದ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ನಿವೇಶನ ಪರಿಶೀಲನೆ, ಕಾಮಗಾರಿ ಸ್ಥಳ ಮತ್ತು ಕಾಮಗಾರಿ ಬದಲಾವಣೆಯಂತಹ ಪ್ರಕ್ರಿಯೆಗಳನ್ನು ತಿಂಗಳೊಳಗೆ ಮುಗಿಸಬೇಕು’ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

‘2019ರ ಅಕ್ಟೋಬರ್ 11 ರ ವರೆಗೆ 109 ಕಾಮಗಾರಿಗಳು ಮತ್ತು 2019ರ ಡಿಸೆಂಬರ್ 20ರ ವರೆಗೆ 64 ಕಾಮಗಾರಿಗಳು ಆರಂಭವಾಗದೇ ಇರುವ ಬಗ್ಗೆ ಸಂಬಂಧಿಸಿದ ಇಲಾಖೆಗಳಿಂದ ವಿವರಣೆ ಕೇಳಿದರು.

ಲೋಕೋಪಯೋಗಿ ಇಲಾಖೆಯ ಬಾಕಿ ಇರುವ 31 ಕಾಮಗಾರಿಗಳ ಪೈಕಿ 22 ಕಾಮಗಾರಿಗಳಿಗೆ ಈ ವರ್ಷ ಮಂಜೂರಾತಿ ಸಿಕ್ಕಿದೆ. ಇನ್ನುಳಿದ 9 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ತಿಳಿಸಿದರು.

13 ಕಾಮಗಾರಿಗಳನ್ನು ಆರಂಭಿಸದೇ ಇರುವ ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಕಾಮಗಾರಿಗಳ ಅನುಷ್ಠಾನಕ್ಕೆ ಒತ್ತು ಕೊಡಲು ಸುಭೋದ್ ಸೂಚಿಸಿದರು.

‘2018-19ನೇ ಸಾಲಿನ ಕ್ರಿಯಾ ಯೋಜನೆಗಳಲ್ಲಿನ ಕಾಮಗಾರಿಗಳಿಗೆ ಅನುಮತಿ ನೀಡಿ ವರ್ಷವಾದರೂ ಅವುಗಳ ಪ್ರಗತಿ ತೃಪ್ತಿಕರವಾಗಿಲ್ಲ. ಕಾಮಗಾರಿ ಬದಲಾವಣೆ, ಅನುಷ್ಠಾನ ಇಲಾಖೆ ಬದಲಾವಣೆ, ಕಾಮಗಾರಿ ರದ್ದು ಪಡಿಸುವುದು, ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸರಿಯಾದ ಸಮಯಕ್ಕೆ ಕಳುಹಿಸಬೇಕು. ಕಡತಗಳನ್ನು ವರ್ಷಗಟ್ಟಲೇ ಇಟ್ಟುಕೊಂಡು ಕೂಡುವುದು ಸರಿಯಲ್ಲ. ಡಿಸೆಂಬರ್ ತಿಂಗಳು ಮುಗಿಯಲು ಬಂದಿದೆ. ಕಾಮಗಾರಿಗಳ ಆರಂಭಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು. ಎಲ್ಲ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಅನುಷ್ಠಾನಾಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕು. ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಈ ಹಿಂದೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲವು ಕಾಮಗಾರಿಗಳನ್ನು ಆರಂಭಿಸಲು ಮತ್ತು ಪೂರ್ಣಗೊಳಿಸಲು ಕಾಲಮಿತಿ ನಿರ್ಧರಿಸಿದರೂ ಕೆಲ ಇಲಾಖೆಗಳು ಅನಗತ್ಯ ವಿಳಂಬ ಮಾಡುತ್ತಿವೆ. ಅಧಿಕಾರಿಗಳು ಇಲ್ಲದ ನೆಪ ಹೇಳಿ ಕಾಲ ಹರಣ ಮಾಡಿದರೆ ಕಾಮಗಾರಿ ಅನುಷ್ಠಾನ ಮತ್ತು ಕಾಮಗಾರಿ ಅನುದಾನ ಬಳಕೆ ಸಾಧ್ಯವಾಗುವುದಿಲ್ಲ. ಇನ್ನು ಮುಂದೆ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳು ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬೀದರ್‌ ಜಿಲ್ಲೆಯ ಪ್ರಗತಿ ಹೇಳಿಕೊಳ್ಳುವಂತಿಲ್ಲ. ಬೀದರ್‌ ಜಿಲ್ಲೆಗಿಂತ ಹೆಚ್ಚಿನ ಹುದ್ದೆಗಳು ಖಾಲಿ ಇರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಂಡಳಿ ಕಾಮಗಾರಿಗಳ ಅನುಷ್ಠಾನ ಚೆನ್ನಾಗಿದೆ. ತಾಂತ್ರಿಕ ತೊಂದರೆಯಂತಹ ಕಾರಣಗಳನ್ನು ಹೇಳದೇ ನುರಿತವರಲ್ಲಿ ಕೇಳಿ, ಶ್ರದ್ಧೆಯಿಂದ ಕೆಲಸ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು