ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಕೋವಿಡ್‌ ಲಸಿಕೆ: ಮೂರನೇ ಸ್ಥಾನದಲ್ಲಿ ಬೀದರ್

ವಾರದೊಳಗೆ ಎಲ್ಲ ಮಕ್ಕಳಿಗೂ ಲಸಿಕೆ: ಜಿಲ್ಲಾಧಿಕಾರಿ
Last Updated 3 ಜನವರಿ 2022, 15:25 IST
ಅಕ್ಷರ ಗಾತ್ರ

ಬೀದರ್: ಶಾಲಾ, ಕಾಲೇಜುಗಳಲ್ಲಿನ 15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಯಾನದ ಮೊದಲ ದಿನವಾದ ಸೋಮವಾರ ಶೇಕಡ 26.76 ರಷ್ಟು ವಿದ್ಯಾರ್ಥಿಗಳು ಮಾತ್ರ ಲಸಿಕೆ ಪಡೆದುಕೊಂಡರು.

ಮಕ್ಕಳ ಲಸಿಕಾಕರಣದಲ್ಲಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಬೀದರ್‌ ಮೂರನೇ ಸ್ಥಾನದಲ್ಲಿ ಇದೆ. ಜಿಲ್ಲೆಯ 1,05,083 ಮಕ್ಕಳ ಪೈಕಿ 28,120 ಮಕ್ಕಳಿಗೆ ಲಸಿಕೆ ಕೊಡಲಾಗಿದೆ.

ಔರಾದ್‌ ತಾಲ್ಲೂಕಿನಲ್ಲಿ 5683. ಬೀದರ್‌ನಲ್ಲಿ 5,641, ಭಾಲ್ಕಿಯಲ್ಲಿ 5,371, ಬಸವಕಲ್ಯಾಣದಲ್ಲಿ 5,750, ಹುಮನಾಬಾದ್‌ ತಾಲ್ಲೂಕಿನಲ್ಲಿ 5,675 ಮಕ್ಕಳು ಕೋವಿಡ್ ಲಸಿಕೆ ಪಡೆದಿದ್ದಾರೆ. ಔರಾದ್‌ ತಾಲ್ಲೂಕಿನಲ್ಲಿ ಶೇಕಡ 50.81, ಬೀದರ್‌ನಲ್ಲಿ ಶೇಕಡ 15, ಭಾಲ್ಕಿಯಲ್ಲಿ ಶೇಕಡ 31.95, ಬಸವಕಲ್ಯಾಣದಲ್ಲಿ ಶೇಕಡ 29.99 ಹಾಗೂ ಹುಮನಾಬಾದ್‌ ತಾಲ್ಲೂಕಿನಲ್ಲಿ ಶೇಕಡ 27.95ರಷ್ಟು ಮಕ್ಕಳು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

‘ಆಯಾ ಜಿಲ್ಲಾಡಳಿತಗಳೇ ಮಕ್ಕಳಿಗೆ ಲಸಿಕೆ ಹಾಕಲು ಗುರಿ ಇಟ್ಟುಕೊಂಡಿದ್ದವು. ಬೀದರ್‌ ಜಿಲ್ಲೆಯಲ್ಲಿ ಮೊದಲ ದಿನ ಶೇಕಡ 26.76 ರಷ್ಟು ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ. ಒಂದು ವಾರದಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ಕೊಡಲಾಗುವುದು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ.

* * *
ಜನಸೇವಾ ಶಾಲೆ: 45 ವಿದ್ಯಾರ್ಥಿಗಳಿಗೆ ಲಸಿಕೆ

ಬೀದರ್: ಇಲ್ಲಿಯ ಪ್ರತಾಪನಗರದಲ್ಲಿ ಇರುವ ಜನಸೇವಾ ಶಾಲೆಯಲ್ಲಿ 15 ರಿಂದ 18 ವರ್ಷದ ಒಳಗಿನ 45 ವಿದ್ಯಾರ್ಥಿಗಳಿಗೆ ಕೋವಿಡ್ ಪ್ರತಿರೋಧಕ ಲಸಿಕೆ ಕೊಡಲಾಯಿತು.

ನೌಬಾದ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿದರು.

ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿ, ಕೋವಿಡ್ ಸೋಂಕು ಸಂಪೂರ್ಣ ನಿರ್ಮೂಲನೆಗೆ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.

ಕೋವಿಡ್ ನಿಯಂತ್ರಣದಲ್ಲಿ ಲಸಿಕೆಯ ಪಾತ್ರ ಮಹತ್ವದ್ದಾಗಿದೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಲಸಿಕೆ ಕುರಿತ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಶಿವಾನಂದ ಮಲ್ಲ, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ ಯರನಳ್ಳಿ ಇದ್ದರು.

* * *

ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

ಬೀದರ್: ಕೋವಿಡ್ ಲಸಿಕೆ ಅಭಿಯಾನಕ್ಕೆ ನಗರದಲ್ಲಿ ಸೋಮವಾರ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

15 ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡರು.

ಬಿ.ವಿ.ಬಿ. ಕಾಲೇಜು: ನಗರದ ಬಿ.ವಿ. ಭೂಮರಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಲಸಿಕೆ ಅಭಿಯಾನಕ್ಕೆ ಪದವಿ ಕಾಲೇಜು ಪ್ರಾಚಾರ್ಯ ಡಾ. ವಿ.ಎಂ. ಚನಶೆಟ್ಟಿ ಚಾಲನೆ ನೀಡಿದರು.

ಪ್ರಾಚಾರ್ಯೆ ದೀಪಾ ರಾಗಾ, ಆರೋಗ್ಯ ಇಲಾಖೆಯ ಡಾ. ಸಂಗಪ್ಪ, ಸಾಜೀದ್, ಜ್ಯೋತಿ, ಸಂತೋಷಕುಮಾರ ರಾಯಕೋಟೆ, ಶೈಲಜಾ ಸಿದ್ಧವೀರ ಇದ್ದರು.

ಸರ್ಕಾರಿ ಐಟಿಐ: ನಗರದ ಸರ್ಕಾರಿ ಐಟಿಐನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಂಕ್ರೆಪ್ಪ ಬೊಮ್ಮ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

ಲಸಿಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಲಸಿಕೆ ನೋಡಲ್ ಅಧಿಕಾರಿ ಶ್ರೀನಿವಾಸ್, ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ಮಾತನಾಡಿದರು. ಸುದರ್ಶನಕುಮಾರ ಮಂಗಲಿಕರ್ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ಪ್ರಶಾಂತ ಜ್ಯಾಂತಿಕರ್ ವಂದಿಸಿದರು. 140 ವಿದ್ಯಾರ್ಥಿಗಳು ಲಸಿಕೆ ಪಡೆದರು.

ಸರ್ಕಾರಿ ಪಾಲಿಟೆಕ್ನಿಕ್: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ನಡೆದ ಅಭಿಯಾನದಲ್ಲಿ 215 ವಿದ್ಯಾರ್ಥಿಗಳು ಲಸಿಕೆ ಪಡೆದರು.

ಪ್ರಾಚಾರ್ಯ ಪ್ರಭು ಹೊಸಳ್ಳಿ, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಶಿವಕುಮಾರ ಕಟ್ಟೆ, ಸಿಪಿ ವಿಭಾಗದ ಮುಖ್ಯಸ್ಥ ಬಕ್ಕಪ್ಪ ನಿರ್ಣಾಕರ್, ಉಪನ್ಯಾಸಕರಾದ ಮಚ್ಚೇಂದ್ರ, ತಾನಾಜಿ ಬಿರಾದಾರ, ಚನ್ನಬಸಪ್ಪ ಪಾಟೀಲ, ವಿಜಯಕುಮಾರ ಮಾನಕಾರಿ, ಡಾ. ಸುರೇಖಾ, ಡಾ. ಮೇರಿ, ಅನಿಲಕುಮಾರ ಇದ್ದರು.

ಜ್ಞಾನಸುಧಾ ವಿದ್ಯಾಲಯ: ನಗರದ ಮಾಮನಕೇರಿಯ ಜ್ಞಾನಸುಧಾ ವಿದ್ಯಾಲಯದಲ್ಲಿ ಲಸಿಕೆ ಅಭಿಯಾನ ನಡೆಯಿತು.

* * *
ಜನವಾಡದಲ್ಲಿ ಕೋವಿಡ್ ಲಸಿಕಾಕರಣ

ಜನವಾಡ: ಬೀದರ್ ತಾಲ್ಲೂಕಿನ ಜನವಾಡದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ 15 ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳ ಕೋವಿಡ್ ಲಸಿಕಾಕರಣ ಅಭಿಯಾನ ನಡೆಯಿತು.
ಶಾಸಕ ರಹೀಂಖಾನ್ ಅಭಿಯಾನಕ್ಕೆ ಚಾಲನೆ ನೀಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಚುನಾಯಿತ ಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

****

ಅರ್ಹರು ಲಸಿಕೆ ಪಡೆಯಿರಿ: ಶಾಸಕ

ಜನವಾಡ: 15 ರಿಂದ 18 ವರ್ಷದ ಒಳಗಿನ ಎಲ್ಲ ಅರ್ಹ ಮಕ್ಕಳು ಕೋವಿಡ್ ಲಸಿಕೆ ಪಡೆಯಬೇಕು ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.

ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಕೋವಿಡ್ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ 105 ಕೋಟಿಗೂ ಅಧಿಕ ಜನರಿಗೆ ಕೋವಿಡ್ ಲಸಿಕೆ ಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಲ್ಲಿ ಕೋವಿಡ್ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕೋವಿಡ್ ಅಲೆ ಇನ್ನೂ ಮುಂದುವರಿದಿದೆ. ಮೊದಲ ಹಾಗೂ ಎರಡನೇ ಅಲೆ ನೋಡಿದ್ದೇವೆ. ಈಗ ಕೋವಿಡ್ ಮೂರನೇ ಅಲೆ ಆತಂಕ ಸೃಷ್ಟಿಯಾಗಿದೆ. ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪದವಿಪೂರ್ವ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ಕೋಣೆ ಹಾಗೂ ಗ್ರಂಥಾಲಯ ಉದ್ಘಾಟಿಸಿದರು. ವಿವಿಧ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು.

ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗದಿಗೆಪ್ಪ ಕುರಕುಂಟೆ, ಎಇಇ ಭಗವಾನ್ ಸಿಂಗ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಹಿರೇಮಠ, ಮೊರಾರ್ಜಿ ಶಾಲೆ ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ, ಫಾರೂಕ್, ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT