ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ಸರ್ಕಾರಿ ಸಿಬ್ಬಂದಿಗೆ ನಂತರ ಇತರರಿಗೆ ಲಸಿಕೆ

ಕೋವಿಡ್-19 ನಿಯಂತ್ರಣ ಪೂರ್ವಭಾವಿ ಸಭೆಯಲ್ಲಿ ಸೂಚನೆ
Last Updated 1 ನವೆಂಬರ್ 2020, 15:40 IST
ಅಕ್ಷರ ಗಾತ್ರ

ಬೀದರ್‌: ’ಮೊದಲ ಹಂತದಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ನರ್ಸ್‌ಗಳು ಆಸ್ಪತ್ರೆಯಲ್ಲಿನ ಗ್ರೂಪ್‌ ಡಿ ನೌಕರರಿಗೆ ಹಾಗೂ ಅಪಾಯದ ಹಂತದಲ್ಲಿರುವವರಿಗೆ ಲಸಿಕೆ ನೀಡಲಾಗುವುದು. ನಂತರ ಇನ್ನುಳಿದವರಿಗೆ ಹಂತ ಹಂತವಾಗಿ ಕೊಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಯಾರಿಗೆ ತುರ್ತು ಲಸಿಕೆ ಅವಶ್ಯಕತೆ ಇದೆಯೋ ಅಂಥವರ ವಿವರವನ್ನು ಕೂಡಲೇ ಸಿದ್ಧಪಡಿಸಿಕೊಳ್ಳಬೇಕಿದೆ. ಇದಕ್ಕೆ ಪೂರ್ವಭಾವಿಯಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ವರದಾನವಾಗಿದೆ. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ವಿವರವನ್ನು ಸಿದ್ಧಗೊಳಿಸಬೇಕು’ ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಕೆ.ಪಿ.ಎಂ.ಇ. ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ವಿವರಗಳನ್ನು ಪಡೆದು ಅಪ್‍ಲೋಡ್ ಮಾಡಿಸುವ ಕಾರ್ಯವನ್ನು ನವೆಂಬರ್ 2ರ ಸಂಜೆಯೊಳಗೆ ಪೂರ್ಣಗೊಳಿಸಬೇಕು’ ಎಂದು ಸಿಇಒ ಗಡುವು ವಿಧಿಸಿದರು.

‘ಹಲವು ಬಾರಿ ತಿಳಿಸಿದರೂ ಖಾಸಗಿ ಆಸ್ಪತ್ರೆಗಳು ಆರೋಗ್ಯ ಸಿಬ್ಬಂದಿಯ ಮಾಹಿತಿ ಕೊಡುತ್ತಿಲ್ಲ. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ವೈದ್ಯರು ಈ ಬಗ್ಗೆ ಗಮನ ಕೊಡಬೇಕು’ ಎಂದು ಸೂಚಿಸಿದರು.

ಡಾ.ಅನಿಲಕುಮಾರ ತಾಳಿಕೋಟಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಕೇಂದ್ರ ಸರ್ಕಾರದ ಲಸಿಕಾಕರಣದ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರತಿಕಾಂತ ಸ್ವಾಮಿ, ಆರ್.ಸಿ.ಎಚ್. ಅಧಿಕಾರಿ ಡಾ.ರವೀಂದ್ರ ಸಿರಸಗಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಕೃಷ್ಣಾ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಮಹೇಶ ಬಿರಾದಾರ, ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಅನಿಲಕುಮಾರ ಚಿಂತಾಮಣಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ.ಸಂಜುಕುಮಾರ ಪಾಟೀಲ, ಜಿಲ್ಲಾ ಲಸಿಕೆ ಮತ್ತು ಶೀತಲ ಸರಪಣಿ ವ್ಯವಸ್ಥಾಪಕ ಗುರುನಾಥ ಕವಳೆ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೇಮಳಗಿ ಇದ್ದರು.

ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT