ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳು ಎಲ್ಲ ಭಾಷೆಗಳಲ್ಲಿ ಅನುವಾದವಾಗಲಿ

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾರಾಯಣರಾವ್ ಹೇಳಿಕೆ
Last Updated 23 ಡಿಸೆಂಬರ್ 2018, 16:16 IST
ಅಕ್ಷರ ಗಾತ್ರ

ಬೀದರ್: ‘ಗೌತಮ ಬುದ್ಧ ತನ್ನ ದೇಶವನ್ನು ಬಿಟ್ಟು ಹೋಗದಿದ್ದರೆ ಆತನ ತತ್ವ ಸಿದ್ಧಾಂತಗಳು ವಿಶ್ವದೆಲ್ಲಡೆ ವ್ಯಾಪಿಸುತ್ತಿರಲಿಲ್ಲ. ಬಸವತತ್ವ ಸರ್ವ ಶ್ರೇಷ್ಠವಾಗಿದ್ದರೂ ನಮ್ಮಲ್ಲಿನ ಸಂಕುಚಿತ ಮನೋಭಾವದಿಂದಾಗಿ ಹೆಚ್ಚು ಪ್ರಚಾರ ಪಡೆಯಲಿಲ್ಲ. ವಚನಗಳನ್ನು ವಿಶ್ವದ ಎಲ್ಲ ಭಾಷೆಗಳಿಗೂ ಅನುವಾದಿಸಿ ಬಸವತತ್ವವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯಬೇಕಾಗಿದೆ’ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾರಾಯಣರಾವ್ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಧಾರವಾಡದ ಬಸವ ಶಾಂತಿ ಮಿಷನ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಬಸವಾದಿ ಶರಣರ ಕೊಡುಗೆ–ಚಿಂತನ ಹಾಗೂ ಶರಣವಾಣಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನ ಅನುಭವ ಮಂಟಪದಲ್ಲಿ ಸ್ಥಾನ ಪಡೆದ ಶೋಷಿತ ಸಮುದಾಯದವರು ನಿಜವಾದ ವಾರಸುದಾರರು. ಲಿಂಗವಂತರು ಧಾರ್ಮಿಕ ಫಲಾನುಭವಿಗಳು. ಫಲಾನುಭವಿಗಳ ಸಂಕುಚಿತ ಭಾವನೆಯಿಂದಾಗಿ ಬಸವಣ್ಣನ ವಿಚಾರಧಾರೆಗಳು 900 ವರ್ಷ ಕಳೆದರೂ ವಿಶ್ವಮಟ್ಟದಲ್ಲಿ ಪ್ರಚಾರ ಪಡೆದಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವಾರಸುದಾರರಾದರೂ ವಿಶ್ವದೆಲ್ಲಡೆ ಬಸವ ತತ್ವದ ಪ್ರಚಾರ ಮಾಡಬೇಕು. ವಚನಗಳನ್ನು ವಿಶ್ವದ ಎಲ್ಲ ಭಾಷೆಗಳಿಗೂ ಅನುವಾದ ಮಾಡಿಸಬೇಕು’ ಎಂದು ಮನವಿ ಮಾಡಿದರು.

‘ನೆಲವನ್ನು ಆಳಿದ ರಾಜಮಹಾರಾಜರು ಮಣ್ಣಾಗಿ ಹೋದರು. ಆದರೆ ವಿಚಾರಗಳನ್ನು ಆಳಿದ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯವರು ವಿಶ್ವವನ್ನೇ ಆಳಿದರು’ ಎಂದು ತಿಳಿಸಿದರು.

‘30 ವರ್ಷಗಳ ಹೋರಾಟದ ಫಲವಾಗಿ ನನಗೆ ಬಸವಣ್ಣನ ನೆಲದಲ್ಲಿ ಶಾಸಕನಾಗುವ ಭಾಗ್ಯ ಒದಗಿ ಬಂದಿತು.
ನನ್ನ ಅಧಿಕಾರ ಅವಧಿಯಲ್ಲಿ ಬಸವಣ್ಣ ಅನುಭವ ಮಂಟಪದ ಸಿದ್ಧತೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಅನೇಕ ಲಿಂಗಾಯತ ಮುಖ್ಯಮಂತ್ರಿಗಳು ಆಗಿ ಹೋಗಿ ಹೋದರು. ಜೆ.ಎಚ್.ಪಟೇಲ್‌ ಬಿಟ್ಟರೆ ಯಾರೊಬ್ಬರೂ ಬಸವಣ್ಣನ ಸ್ಮಾರಕ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಡಲಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೂ ಕುರುಬ ಸಮುದಾಯದ ಮುಖ್ಯಮಂತ್ರಿ ಕೇಂದ್ರಕ್ಕೆ ಶಿಫಾರಸು ಮಾಡಬೇಕಾಯಿತು. ಬಿ.ಎಸ್‌.ಯಡಿಯೂರಪ್ಪ ಹಾಗೂ ಜಗದೀಶ್‌ ಶೆಟ್ಟರ್‌ ಏನನ್ನೂ ಮಾಡಲಿಲ್ಲ’ ಎಂದರು.

‘ಸಾಹಿತ್ಯ, ಕಲೆ ಹಾಗೂ ನೃತ್ಯಗಳ ಮೂಲಕ ವಚನಗಳನ್ನು ಪರಿಚಯಿಸಿದರೆ ಸಾಲದು. ವಚನಗಳಲ್ಲಿ ಅಡಗಿರುವ ಶಕ್ತಿಯನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು’ ಎಂದು ಸಾಹಿತಿ ರಂಜಾನ ದರ್ಗಾ ಹೇಳಿದರು.

‘ಬಸವಣ್ಣ ಅಂದರೆ ವ್ಯಕ್ತಿಯಲ್ಲ, ಅದೊಂದು ಮಂತ್ರ. ಬಸವಣ್ಣ ಸಮಾನತೆಯ ಸಂಕೇತವಾಗಿ ಇಷ್ಟಲಿಂಗವನ್ನು ಜಗತ್ತಿಗೆ ನೀಡಿದ್ದಾರೆ. ಇಷ್ಟಲಿಂಗವನ್ನು ಅರಸಿಕೊಂಡವನು ಅರಸನ ಮಗನಾಗಲಿ ಅಥವಾ ವೇಶ್ಯೆಯ ಮಗನಾಗಲಿ ಇಬ್ಬರೂ ಶರಣರೇ. ತಾರತಮ್ಯ ಅನುಸರಿಸಿದರೆ ಬಸವ ತತ್ವದ ಪಾಲನೆ ಮಾಡಿದಂತೆ ಆಗಲಿದೆ’ ಎಂದು ತಿಳಿಸಿದರು.

‘ಬಸವಣ್ಣ ಸಮಾಜಕ್ಕೆ ಜೇನುತುಪ್ಪ ಕೊಟ್ಟರೆ ಉಳಿದ ಶರಣರು ಮಕರಂದವನ್ನು ನೀಡಿದ್ದಾರೆ. ಪ್ರತಿಯೊಬ್ಬರು ಅದನ್ನು ಅರ್ಥ ಮಾಡಿಕೊಂಡು ಜೇನಿನ ಸವಿಯನ್ನು ಸವಿಯಬೇಕಾಗಿದೆ’ ಎಂದು ಕಿವಿಮಾತು ಹೇಳಿದರು.

‘ಕಾಯಕವು ವ್ಯಕ್ತಿಯ ಆತ್ಮಗೌರವವನ್ನು ಪ್ರತಿಪಾದಿಸುತ್ತದೆ. ಅಂದಿನ ಅನುಭವ ಮಂಟಪದಲ್ಲಿ ಎಲ್ಲ ಜನಸಮುದಾಯಕ್ಕೆ ಸೇರಿದ್ದ 770 ಅಮರಗಣಂಗಳ ಇದ್ದರು. ಸಾಮಾಜಿಕ ಸಮಾನತೆ. ಮಹಿಳಾ ಹಕ್ಕು, ಮಾನವಹಕ್ಕು, ದಲಿತರ ಶಿಕ್ಷಣ ಎಲ್ಲ ವಿಷಯಗಳೂ ಚರ್ಚೆಗೆ ಒಳಪಡುತ್ತಿದ್ದವು’ ಎಂದು ವಿವರಿಸಿದರು.

‘ಬಸವ ತತ್ವದಲ್ಲಿ ಪ್ರಜಾಪ್ರಭುತ್ವದ ಶ್ರೇಷ್ಠ ಬೀಜಗಳು ಇವೆ. ಸದ್ಯದ 21ನೇ ಶತಮಾನದಲ್ಲಿ ಬೆಳೆದು ನಿಂತಿರುವ ಅಸಮಾನತೆ, ಜಾತಿಯತೆ, ಅಸ್ಪ್ರಶ್ಯತೆಯನ್ನು ತೊಲಗಿಸುವ ಶಕ್ತಿ ಬಸವತತ್ವಕ್ಕೆ ಇದೆ. ಅರಿವಿನಿಂದ ಸಮರತೆ, ಸಹಜತೆಯ ಭಾವ, ಸಮಸುಖ ಪಡೆಯಲು ಸಾಧ್ಯವಿದೆ’ ಎಂದು ಹೇಳಿದರು.

ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ.ಇಸಾಬೆಲ್ಲಾ  ಝೇವಿಯರ್ ಮಾತನಾಡಿ, ‘ಶಾಂತಿ ಹಾಗೂ ಸಮಾಧಾನ ಕೊಡುವ ವಿಚಾರವೇ ನಿಜವಾದ ಧರ್ಮ. ಬದುಕನ್ನು ಸುಂದರಗೊಳಿಸಿಕೊಳ್ಳಲು ಬಸವ ತತ್ವ ಪಾಲನೆ ಮಾಡಬೇಕಾಗಿದೆ’ ಎಂದು ತಿಳಿಸಿದರು.

ಪ್ರವಚನಕಾರ ಇಬ್ರಾಹಿಂ ಸುತಾರ್ ಮಾತನಾಡಿ, ‘ಶೋಷಣೆ ಹಾಗೂ ಮಡಿವಂತಿಕೆಯನ್ನು ಧಿಕ್ಕರಿಸಿದವರು ಬಸವಣ್ಣ. ಅವರ ತತ್ವದಲ್ಲಿ ಎಲ್ಲರೂ ಒಪ್ಪುವಂತಹ ಆದರ್ಶವಾದ ಇದೆ. ಅಂತೆಯೇ ಬಸವ ಧರ್ಮ ಸರ್ವಶ್ರೇಷ್ಠವಾಗಿದೆ’ ಎಂದು ಬಣ್ಣಿಸಿದರು.

‘ಪ್ರಜ್ಞಾವಂತರು ತಲೆತಗ್ಗಿಸುವಂತಹ ವ್ಯವಸ್ಥೆ , ಅಸಮಾನತೆ ಹಾಗೂ ಅಜ್ಞಾನ ಆವರಿಸಿದ್ದ ಸಂದರ್ಭದಲ್ಲಿ ಸಮಾನತೆಯ ಇಷ್ಟಲಿಂಗವನ್ನು ಉಪಯೋಗಿಸಿ ಸಮಾನತೆಯನ್ನು ತಂದುಕೊಟ್ಟರು. ಬಸವ ತತ್ವದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನಾಶಿ ಮಠದ ಶಿವಕುಮಾರ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಬುಳ್ಳಾ, ಬಸವಶಾಂತಿ ಮಿಷನ್‌ ಟ್ರಸ್ಟ್ ಅಧ್ಯಕ್ಷ ಮಹಾದೇವ ಹೊರಟ್ಟಿ ಮಾತನಾಡಿದರು.

ಚನ್ನಬಸವಾನಂದ ಸ್ವಾಮೀಜಿ, ಲಿಂಗಾಯತ ಸಮನ್ವಯ ಸಮಿತಿಯ ಬಸವರಾಜ ಧನ್ನೂರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಗಂದಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT