ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ರೇಕುಳಗಿಯ ಪಾಂಡುರಂಗ ಗುರೂಜಿ

ಮಹರ್ಷಿ ವಾಲ್ಮೀಕಿ ಜಯಂತಿ
Last Updated 24 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಬೀದರ್ : ‘ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದೆ. ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ನೀಡಬೇಕು’ ಎಂದು ರೇಕುಳಗಿಯ ಪಾಂಡುರಂಗ ಗುರೂಜಿ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಮನುಷ್ಯನ ಜೀವನದಲ್ಲಿ ಕೆಲವೊಂದು ಲೋಪಗಳು ಆಗುವುದು ಸಹಜ. ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಬದುಕು ಸಾಗಿಸಲು ಪ್ರಯತ್ನಿಸಬೇಕು. ವಾಲ್ಮೀಕಿ ಚಿಕ್ಕವನಿದ್ದಾಗ ಕಳ್ಳತನ, ದರೋಡೆಯಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ. ನಾರದ ಮುನಿಯ ಉಪದೇಶ ಪಾಲಿಸಿ ಬದಲಾವಣೆಗೆ ಕಂಡುಕೊಂಡು ರಾಮಾಯಣ ಮಹಾನ್‌ ಗ್ರಂಥ ಬರೆದು ಪ್ರಸಿದ್ಧಿ ಪಡೆದ’ ಎಂದು ಹೇಳಿದರು.

‘ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಜತೆಗೆ
ಉತ್ತಮ ನಡತೆ ಆಚಾರ ವಿಚಾರಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಸಾಧು ಸಂತರ ಜಾತಿ, ಮತ, ಪಂಥ ಹುಡುಕುವುದಕ್ಕಿಂತ ಅವರಲ್ಲಿಯ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

‘ಮಹಾತ್ಮರ ತತ್ವಗಳಲ್ಲಿರುವ ಮೌಲಿಕ ಅಂಶಗಳನ್ನು ಅರಿತುಕೊಂಡು ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣದಲ್ಲಿ ಉಲ್ಲೇಖವಿರುವಂತೆ ರಾಮ– ಲಕ್ಷ್ಮಣರಿಗಿಂತಲೂ ರಾವಣ ಜ್ಞಾನಿ, ಪರಾಕ್ರಮಿ ಹಾಗೂ ಶೂರನಾಗಿದ್ದನು. ರಾವಣನ ದುರ್ನಡತೆ ಅವನ ಅಂತ್ಯಕ್ಕೆ ಕಾರಣವಾಯಿತು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್ ಅವರು, ‘ಪರಿಶ್ರಮದಿಂದ ಬದುಕು ಸುಂದರ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ ವ್ಯಕ್ತಿಯೇ ಮಹರ್ಷಿ ವಾಲ್ಮೀಕಿ’ ಎಂದು ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಪಂಡಿತ ಚಿದ್ರಿ, ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಶೇಖರ ವಟಗೆ, ಟೋಕರೆ ಕೋಳಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ, ಅಂಬಿಗರ ಚೌಡಯ್ಯ ಯುವ ಸೇನೆಯ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮಸಾಗರ ದಾಂಡೇಕರ್ ಸ್ವಾಗತಿಸಿದರು. ಚೆನ್ನಬಸವ ಹೇಡೆ ನಿರೂಪಿಸಿದರು.

ಜಿಲ್ಲಾಧಿಕಾರಿ ಕಚೇರಿ: ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಾಲ್ಮ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಸಿಇಒ ಮಹಾಂತೇಶ ಬೀಳಗಿ, ಕೋಳಿ ಸಮಾಜದ ಜಗನ್ನಾಥ ಜಮಾದಾರ, ಶಿವರಾಜ್‌ ಜಮಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT