ಭಾನುವಾರ, ನವೆಂಬರ್ 17, 2019
21 °C
ತುರಾಯಿ ಕಳಚಿದ ಬದನೆಕಾಯಿ

ಕಡಿಮೆಯಾದ ಮೆಣಸಿನಕಾಯಿ ಖಾರ; ಹಿರೇಕಾಯಿ ದರ ಮತ್ತೆ ಹೆಚ್ಚಳ

Published:
Updated:
Prajavani

ಬೀದರ್‌: ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿರುವ ಕಾರಣ ಈ ಬಾರಿ ಅಲ್ಲಿಂದ ತರಕಾರಿ ಬಂದಿಲ್ಲ. ಬೀದರ್ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆ ಬಾರದ ಕಾರಣ ತರಕಾರಿ ಬೆಳೆದಿಲ್ಲ. ಹೀಗಾಗಿ ಮಹಾರಾಷ್ಟ್ರ ಹಾಗೂ ತೆಲಂಗಾಣದ ಜಿಲ್ಲೆಗಳಲ್ಲಿ ಬೆಳೆದ ತರಕಾರಿಯೇ ನಗರದ ಮಾರುಕಟ್ಟೆಗೆ ಬಂದಿದೆ.

ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಸಬ್ಬಸಗಿ ಸೊಪ್ಪಿಗೆ ಭಾರಿ ಬೇಡಿಕೆ ಬಂದು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರದಿಂದ ₹ 6 ಸಾವಿರಕ್ಕೆ ಜಿಗಿಯಿತು. ಬೆಲೆ ದುಪ್ಪಟ್ಟಾದರೂ ವ್ಯಾಪಾರಿಗಳು ಸಬ್ಬಸಗಿ ಸೊಪ್ಪು ಖರೀದಿಸಿದರು. ಚಿಲ್ಲರೆ ಮಾರುಕಟ್ಟೆಯಲ್ಲಿ ಸಬ್ಬಸಗಿ ಸೊಪ್ಪು ಮಾರಾಟವಾಯಿತು.

ಹಿರೇಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 6 ಸಾವಿರದಿಂದ 8 ಸಾವಿರಕ್ಕೆ ಏರಿಕೆ ಕಂಡಿತು. ಕೊತಂಬರಿ ಬೆಲೆ ₹ 1 ಸಾವಿರ ಹಾಗೂ ಆಲೂಗಡ್ಡೆ ಬೆಲೆ ₹ 500 ಹೆಚ್ಚಳವಾಯಿತು. ಬೆಂಡೆಕಾಯಿ, ತೊಂಡೆಕಾಯಿ, ಟೊಮೆಟೊ, ಬೀನ್ಸ್, ಬೀಟ್‌ರೂಟ್, ಹೂಕೋಸು, ಎಲೆಕೋಸು ಹಾಗೂ ಪಾಲಕ್‌ ಬೆಲೆ ಸ್ಥಿರವಾಗಿದೆ.

ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ, ಮೆಂತೆಸೊಪ್ಪು ₹ 2 ಸಾವಿರ, ಬದನೆಕಾಯಿ, ಗಜ್ಜರಿ, ಕರಿಬೇವು, ₹ 1 ಸಾವಿರ ಹಾಗೂ ಹಸಿ ಮೆಣಸಿನಕಾಯಿ ಬೆಲೆ ₹ 500 ಕಡಿಮೆಯಾಗಿದೆ. ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ಮತ್ತೆ ₹ 500 ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸಾಮಾನ್ಯ ಈರುಳ್ಳಿ ₹ 30 ಹಾಗೂ ಗುಣಮಟ್ಟದ ಈರುಳ್ಳಿ ₹ 40ಕ್ಕೆ ಮಾರಾಟವಾಗುತ್ತಿದೆ.

ಹೋಟೆಲ್‌, ಖಾನಾವಳಿ, ರೆಸ್ಟೋರಂಟ್‌ಗಳ ಮಾಲೀಕರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಖರೀದಿಸಿ ಸಂಗ್ರಹಿಸಿ ಇಟ್ಟುಕೊಂಡಿರುವುದು ಕಂಡು ಬಂದಿತು.

ನಗರಕ್ಕೆ ಹೈದರಾಬಾದ್‌ನಿಂದ ಮೆಣಸಿನಕಾಯಿ, ಬೀನ್ಸ್, ಬೀಟ್‌ರೂಟ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ, ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಗ್ರಾದಿಂದ ಆಲೂಗಡ್ಡೆ, ಟೊಮೆಟೊ ಆವಕವಾಗಿದೆ.
ಚಿಟಗುಪ್ಪ, ಹುಮನಾಬಾದ್ ಹಾಗೂ ಭಾಲ್ಕಿ ಗ್ರಾಮೀಣ ಪ್ರದೇಶದಿಂದ ಬದನೆಕಾಯಿ, ಕರಿಬೇವು, ಕೊತಂಬರಿ, ಸಬ್ಬಸಗಿ ಹಾಗೂ ಪಾಲಕ್‌ ಸೊಪ್ಪು ಬಂದಿದೆ.

‘ಕೆಲ ತರಕಾರಿಗಳ ಬೆಲೆ ಮಾತ್ರ ಹೆಚ್ಚಳವಾಗಿದೆ. ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ಎರಡು ತಿಂಗಳು ಮಾರುಕಟ್ಟೆಯಲ್ಲಿ ಇದೇ ಸ್ಥಿತಿ ಮುಂದುವರಿಯಲಿದೆ’ ಎಂದು ಗಾಂಧಿಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದರು.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ     ಈ ವಾರ
ಈರುಳ್ಳಿ                    35-40          30-40
ಮೆಣಸಿನಕಾಯಿ           25-30          20-25
ಆಲೂಗಡ್ಡೆ                 18-20          20-25
ಎಲೆಕೋಸು                20-30         20-30
ಬೆಳ್ಳುಳ್ಳಿ                  180-200     160-170
ಗಜ್ಜರಿ                        40-50        30-40
ಬೀನ್ಸ್‌                       50-60         50-60
ಬದನೆಕಾಯಿ                50-60        40-50
ಮೆಂತೆ ಸೊಪ್ಪು          100-120       80-100
ಹೂಕೋಸು                 50-60        50-60
ಸಬ್ಬಸಗಿ                     20-30        50-60
ಬೀಟ್‌ರೂಟ್‌                30-40        30-40
ತೊಂಡೆಕಾಯಿ              30-40       30-40
ಕರಿಬೇವು                    40-50       30-40
ಕೊತಂಬರಿ                  60-70       70-80
ಟೊಮೆಟೊ                  25-30       30-30
ಪಾಲಕ್‌                      50-60       50-60
ಬೆಂಡೆಕಾಯಿ                30-40        30-40
ಹಿರೇಕಾಯಿ                 50-60        60-80

ಪ್ರತಿಕ್ರಿಯಿಸಿ (+)