ಮಂಗಳವಾರ, ಆಗಸ್ಟ್ 20, 2019
27 °C
ಬದನೆಕಾಯಿ, ಆಲೂಗಡ್ಡೆ, ಟೊಮೆಟೊ ಬೆಲೆ ಸ್ಥಿರ

ಬೆಲೆ ಇಳಿದರೂ ಕೊತ್ತಂಬರಿ ತುಟ್ಟಿ

Published:
Updated:
Prajavani

ಬೀದರ್‌: ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಬೀದರ್‌ ಜಿಲ್ಲೆಯಲ್ಲಿ ಸಮರ್ಪಕ ಮಳೆ ಸುರಿದಿಲ್ಲ. ಬೇರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅಲ್ಲಿ ತರಕಾರಿ ಚೆನ್ನಾಗಿ ಬೆಳೆದಿರುವ ಕಾರಣ ಸ್ವಲ್ಪ ಮಟ್ಟಿಗೆ ಬೆಲೆ ಕುಸಿದಿದೆ. ಗ್ರಾಹಕರು ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಜಿಲ್ಲೆಯಲ್ಲಿ ಬಿತ್ತನೆಯೇ ವಿಳಂಬವಾಗಿದೆ. ಮಳೆ ಕೊರತೆಯಿಂದಾಗಿ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ನಿರೀಕ್ಷೆಯಷ್ಟು ತರಕಾರಿ ಬರುತ್ತಿಲ್ಲ. ನೀರಿನ ಸೌಲಭ್ಯ ಇರುವವರು ಅಷ್ಟು ಇಷ್ಟು ತರಕಾರಿ ಬೆಳೆದು ಅದಾಯ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಒಂದು ವಾರದ ಅವಧಿಯಲ್ಲಿ ಹಸಿಮೆಣಸಿನಕಾಯಿ ಹಾಗೂ ಸಬ್ಬಸಗಿ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರ ಕುಸಿದಿದೆ. ಜನರ ಬಹು ಬೇಡಿಕೆಯ ಹಿರೇಕಾಯಿ, ಬೆಂಡೆಕಾಯಿ, ಮೆಂತೆ ಸೊಪ್ಪಿನ ಬೆಲೆ ₹ 3 ಸಾವಿರ ಕಡಿಮೆಯಾಗಿದೆ. ಈರುಳ್ಳಿ, ಗಜ್ಜರಿ, ಬೀನ್ಸ್, ಬಿಟ್‌ರೂಟ್, ಹೂಕೋಸು ಬೆಲೆ ₹ 1 ಸಾವಿರ ಹಾಗೂ ಪಾಲಕ್‌ ಸೊಪ್ಪಿನ ಬೆಲೆ ₹ 2 ಸಾವಿರ ಇಳಿಕೆಯಾಗಿದೆ.

ಬೆಳ್ಳೂಳ್ಳಿ ದರ ಮಾತ್ರ ಪ್ರತಿ ಕ್ವಿಂಟಲ್‌ಗೆ ₹12,000 ತಲುಪಿದೆ. ಬೆಳ್ಳೂಳ್ಳಿ ಬೆಲೆ ಈ ವಾರ ಒಂದು ಸಾವಿರ ರೂಪಾಯಿ ಹೆಚ್ಚಾಗಿದೆ. ಜಿಲ್ಲೆಯ ಜನರ ಅಚ್ಚುಮೆಚ್ಚಿನ ಬದನೆಕಾಯಿ, ಆಲೂಗಡ್ಡೆ, ಎಲೆಕೋಸು ಹಾಗೂ ತೊಂಡೆಕಾಯಿಯ ಬೆಲೆ ಸ್ಥಿರವಾಗಿದೆ.

ನಗರದ ಮಾರುಕಟ್ಟೆಗೆ  ಬೆಂಗಳೂರಿನ ಅರಸಿಕೆರೆಯಿಂದ ಟೊಮೆಟೊ, ಬೆಳಗಾವಿಯಿಂದ ಮೆಣಸಿನಕಾಯಿ, ಹೈದರಾಬಾದ್‌ನಿಂದ ಬೀನ್ಸ್, ತೊಂಡೆಕಾಯಿ, ಗಜ್ಜರಿ, ಬಿಟ್‌ರೂಟ್ ಬಂದಿದೆ. ಸೋಲಾಪುರದಿಂದ ಈರುಳ್ಳಿ, ಬೆಳ್ಳೂಳ್ಳಿ ಹಾಗೂ ಆಲೂಗಡ್ಡೆ ಆವಕವಾಗಿದೆ. ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನಿಂದ ಬೆಂಡೆಕಾಯಿ, ಹಿರೇಕಾಯಿ ಹೂಕೋಸು, ಮೆಂತೆ, ಪಾಲಕ್‌ ಹಾಗೂ ಕರಿಬೇವು ಬಂದಿವೆ.

ಚಿಟಗುಪ್ಪ ಪರಿಸರದಲ್ಲಿ ಮಣ್ಣಿನಲ್ಲಿ ತೇವಾಂಶ ಇರುವ ಕಾರಣ ಸೊಪ್ಪು ಬೆಳೆದಿದೆ. ಕಾರಂಜಾ ಹಿನ್ನೀರು ಹಾಗೂ ಅಲ್ಪ ಮಳೆಗೆ ಒಂದಿಷ್ಟು ತರಕಾರಿ ಬೆಳೆದಿದೆ. ಈಗಲೂ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಇದೆ. ಮಳೆ ಕೈಕೊಟ್ಟರೆ ಮತ್ತೆ ತರಕಾರಿ ಬೆಲೆ ಗಗನಕ್ಕೆ ಚಿಮ್ಮಲಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಹೂಗೇರಿ ಹೇಳುತ್ತಾರೆ.

Post Comments (+)