ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬಳಕಾಯಿಗೂ ಬಂತು ಬೆಲೆ

ಪ್ರತಿ ಕ್ವಿಂಟಲ್‌ ಕೊತಂಬರಿ ಬೆಲೆ ₹ 10 ಸಾವಿರ
Last Updated 19 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೀದರ್: ಆಯುಧ ಪೂಜೆ ಹಾಗೂ ದಸರಾ ಪ್ರಯುಕ್ತ ಇಲ್ಲಿಯ ಮಾರುಕಟ್ಟೆಯಲ್ಲಿ ಬೂದು ಕುಂಬಳಕಾಯಿ ಕೊರತೆ ಕಂಡು ಬಂದು ಸಿಹಿ ಕುಂಬಳಕಾಯಿಯ ಬೆಲೆ ಸಹಜವಾಗಿಯೇ ಹೆಚ್ಚಾಯಿತು.

ಚಿಲ್ಲರೆ ಮಾರುಕಟ್ಟೆಯಲ್ಲಿ 100 ವೀಳ್ಯದೆಲೆಯ ಬೆಲೆ ನೂರು ರೂಪಾಯಿಗೆ ಏರಿದರೆ ನಿಂಬೆ ಹಣ್ಣು ಹತ್ತು ರೂಪಾಯಿಗೆ ನಾಲ್ಕರಂತೆ ಮಾರಾಟವಾದವು. ಗ್ರಾಹಕರು ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಕೇಳಿದರೂ ವ್ಯಾಪಾರಿಗಳು ಬೆಲೆ ಬಿಟ್ಟುಕೊಡಲಿಲ್ಲ. ಲಿಂಬೆಹಣ್ಣು ವ್ಯಾಪಾರಿಗಳಿಗೆ ಹೆಚ್ಚು ಲಾಭ ತಂದುಕೊಟ್ಟಿತು.

ಈ ಬಾರಿ ಬೆಳಗಾವಿಯ ಕೊತಂಬರಿ ಬೀದರ್‌ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಲಾತೂರ್‌ ಜಿಲ್ಲೆಯಿಂದ ಬಂದ ಕೊತಂಬರಿ ಬೆಲೆ ಹೆಚ್ಚಿಸಿಕೊಂಡು ಗ್ರಾಹಕರು ಹುಬ್ಬೇರಿಸುವಂತೆ ಮಾಡಿತು. ಮಹಿಳೆಯರು ವಗ್ಗರಣೆಗೆ ಅನಿವಾರ್ಯವಾಗಿ ಹೆಚ್ಚು ಬೆಲೆ ನೀಡಿ ಕೊತಂಬರಿ ಖರೀದಿಸಿದರು.

ಸೊಲ್ಲಾಪುರದ ಈರುಳ್ಳಿ, ಬೆಳಗಾವಿಯ ಹಸಿ ಮೆಣಸಿನಕಾಯಿ, ನಾಸಿಕ್‌ನ ಬೀನ್ಸ್, ಹೈದಾಬಾದ್‌ನಿಂದ ಆವಕವಾದ ಗಜ್ಜರಿ, ತೊಂಡೆಕಾಯಿ ಹಾಗೂ ಬಿಟ್‌ರೂಟ್‌ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದವು. ಗಜ್ಜರಿ ಹಾಗೂ ಬಿಟ್‌ರೂಟ್‌ ವಹಿವಾಟಿನ ಮೇಲೆ ಹೈದರಾಬಾದ್‌ನ ಸಗಟು ವ್ಯಾಪಾರಿಗಳು ಎರಡು ವಾರಗಳಿಂದ ಹಿಡಿತ ಸಾಧಿಸಿರುವುದು ಕಂಡು ಬಂದಿತು.

ಬಹುಬೇಡಿಕೆಯ ನುಗ್ಗೆಕಾಯಿ ಹೊರ ಜಿಲ್ಲೆಗಳಿಂದಲೂ ಬೀದರ್‌ ಮಾರುಕಟ್ಟೆಗೆ ಬರಲಿಲ್ಲ. ಚಿಟಗುಪ್ಪ ಪರಿಸರದಲ್ಲಿ ಬೆಳೆದ ಎಲೆಕೋಸು, ಹೂಕೋಸು ಹಾಗೂ ಕರಿಬೇವಿಗೆ ಪೈಪೋಟಿ ಇಲ್ಲದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಿತು.
ಗುಣಮಟ್ಟದ ಈರುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ, ಬೆಳ್ಳೂ ಳ್ಳಿ, ಸಬ್ಬಸಗಿ ಸೊಪ್ಪು ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಯಿತು. ಎಲೆಕೋಸು, ಹೂಕೋಸು, ಬಿಟ್‌ರೂಟ್‌ ಹಾಗೂ ಗಜ್ಜರಿ ಬೆಲೆ ಕುಸಿಯಿತು. ಬೀನ್ಸ್‌, ಬದನೆಕಾಯಿ, ಮೆಂತೆ ಬೆಲೆ ಸ್ಥಿರವಾಗಿತ್ತು.

ಟೊಮೆಟೊ ಬೆಲೆ ಪಾತಾಳಕ್ಕೆ ಇಳಿಯಿತು. ಗುಣಮಟ್ಟದ ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್‌ಗೆ ₹1,200 ರಿಂದ ₹ 1,000 ಗೆ ಕುಸಿತ ಕಂಡಿತು. ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಹೆಚ್ಚಾಗಿರುವುದು ಬೆಲೆ ಕುಸಿತಕ್ಕೆ ಕಾರಣವಾಯಿತು. ಇದರಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುವಂತಾಯಿತು. ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮೆಟೊ ಬಿಟ್ಟು ಸಾಮಾನ್ಯ ಟೊಮೆಟೊಗೆ ಕೇಳುವವರೇ ಇರಲಿಲ್ಲ.

‘ಮಳೆ ಇಲ್ಲದ ಕಾರಣ ತರಕಾರಿ ಆವಕ ಕಡಿಮೆಯಾಗಿದೆ. ಪ್ರಮುಖ ತರಕಾರಿಗಳ ಬೆಲೆ ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದು ತರಕಾರಿ ಸಗಟು ವ್ಯಾಪಾರಿ ಮಕ್ಬೂಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT