ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಇಳಿಕೆ; ರೈತರಿಗೆ ಸಂಕಟ

Last Updated 12 ಜನವರಿ 2022, 6:28 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಒಂದು ವಾರದ ಹಿಂದೆ ಮಾರುಕಟ್ಟೆಯಲ್ಲಿ ಗಗನಕ್ಕೇರಿದ್ದ ತರಕಾರಿ ಬೆಲೆ ಇದೀಗ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದೆ. ಇದರಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ರೈತರು ನಷ್ಟ ಅನುಭವಿಸುವಂತಾಗಿದೆ.

ರೈತರ ಪಾಲಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಎಳ್ಳ ಅಮಾವಾಸ್ಯೆ ಸಮಯದಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟಾಗಿತ್ತು. ಇದರಿಂದ ಗ್ರಾಹಕರು ಸಂಕಷ್ಟ ಅನುಭವಿಸಿದ್ದಾರೆ. ಹೆಚ್ಚಿನ ಜನ ತರಕಾರಿ ಖರೀದಿಸಲು ಜನ ಹಿಂದೇಟು ಹಾಕಿದ್ದಾರೆ. ಆದರೆ ಸದ್ಯ ದರ ಕಡಿಮೆ ಆಗಿರುವುದರಿಂದ ಎಲ್ಲರೂ ತರಕಾರಿ ಖರೀದಿಸಲು ಉತ್ಸಾಹ ತೋರುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕುಸಿದಿರುವುದರಿಂದ ತರಕಾರಿ ಬೆಳೆದ ರೈತರು ಬೆಂಬಲ ಬೆಲೆ ಸಿಗದೇ ನಷ್ಟ ಅನುಭವಿಸುವಂತಾಗಿದೆ. ಕೆಲವರು ಮಾರುಕಟ್ಟೆಗೆ ಕಳುಹಿಸಲು ತಗಲುವ ವೆಚ್ಚವು ಸಹ ಬರುವುದಿಲ್ಲ ಎಂದು ಜಾನುವಾರುಗಳಿಗೆ ಹಾಕುತ್ತಿರುವುದು ಕಂಡು ಬರುತ್ತಿದೆ.

’ನಾನು ಒಂದು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದೇನೆ. ಹದಿನೈದು ದಿನಗಳ ಹಿಂದೆ ಬದನೆಕಾಯಿ, ಟೊಮೆಟೊ ಬೆಲೆ ಕೆಜಿಗೆ ಒಂದು ನೂರು ರೂಪಾಯಿ ಗಡಿ ದಾಟಿದ್ದವು. ಇದರಿಂದ ಉತ್ತಮ ಆದಾಯ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ತರಕಾರಿಗಳ ಬೆಲೆ ದಿಢೀರನೆ ಕುಸಿದಿರುವುದರಿಂದ ನನ್ನ ಆಸೆಗೆ ತಣ್ಣೀರು ಎರಚಿದಂತಾಗಿದೆ‘ ಎಂದು ರೈತ ರಾಜಕುಮಾರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

’ಸದ್ಯ ಟೊಮೆಟೊ ಪ್ರತಿ ಕೆಜಿಗೆ ₹15, ಪ್ರತಿ ಕೆಜಿಗೆ ₹140 ಇದ್ದ ಅವರೆಕಾಯಿ ಬೆಲೆ ಸದ್ಯ ₹40 ಗೆ ಇಳಿದಿದೆ. ಪಾಲಕ ₹20, ಬೆಂಡೆಕಾಯಿ ₹ 40, ಬದನೆಕಾಯಿ ₹ 50 ಕೆಜಿಗೆ ಮಾರಾಟ ಆಗುತ್ತಿದೆ. ಹೀಗೆ ಬಹುತೇಕ ತರಕಾರಿ ಬೆಲೆಗಳು ನೆಲಕಚ್ಚಿವೆ. ಇದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಿದರೆ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ‘ ಎನ್ನುತ್ತಾರೆ ರೈತ ಭದ್ರು ಭವರಾ.

’ಈ ತಿಂಗಳು ಶುಭ ಸಮಾರಂಭಗಳಿಲ್ಲದ ಕಾರಣ ಅನೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಇದೊಂದು ತಿಂಗಳು ತರಕಾರಿಗಳ ಬೆಲೆ ಏರಿಳಿತ ಕಂಡುಬರಲಿದೆ’ ಎಂದು ಸಂಗಮೇಶ ಜ್ಯಾಂತೆ ಹೇಳುತ್ತಾರೆ.

’ತರಕಾರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ತರಕಾರಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು‘ ಎಂದು ಸಾಮಾಜಿಕ ಕಾರ್ಯಕರ್ತ ಅನಿಲ ಜಾಧವ್ ಒತ್ತಾಯಿಸುತ್ತಾರೆ.

’ದಿನ ಬಳಕೆಯ ಅಡುಗೆ ಅನಿಲ, ಪೆಟ್ರೋಲ್‌, ಡಿಸೇಲ್‌, ರೈತರು ಬಳಕೆ ಮಾಡುವ ರಸಗೊಬ್ಬರ, ಕ್ರಿಮಿನಾಶಕ ದರಗಳು ದುಬಾರಿ ಆಗಿವೆ. ಆದರೆ ರೈತರು ಬೆಳೆದ ತರಕಾರಿಗಳು ದರ ಮಾತ್ರ ಪಾತಾಳಕ್ಕೆ ಕುಸಿದಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ‘ ಎಂದು ರೈತ ಅವಿನಾಶ ಮುತ್ತಂಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

*ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ತರಕಾರಿ ಬೆಲೆಗಳು ಕುಸಿದಿರುವುದರಿಂದ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು
- ಅಶೋಕ ದಿಡಗೆ , ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT