ಗುರುವಾರ , ಮಾರ್ಚ್ 4, 2021
20 °C
ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 15 ಸಾವಿರಕ್ಕೆ ಏರಿಕೆ

ತರಕಾರಿ ಬೆಲೆ ಗಗನಕ್ಕೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಳೆ ಕೊರತೆ ಹಾಗೂ ನೀರಿನ ಅಭಾವದಿಂದಾಗಿ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ತರಕಾರಿ ಬೆಲೆ ಗಗನಕ್ಕೆ ಏರಿದೆ.

ಜೂನ್‌ ಅಂತ್ಯದ ವರೆಗೆ ಜಿಲ್ಲೆಯಲ್ಲಿ 209.80 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ ಈವರೆಗೆ 111.50 ಮಿ.ಮೀ. ಮಾತ್ರ ಮಳೆಯಾಗಿದೆ. ಶೇಕಡ 46.85ರಷ್ಟು ಮಳೆಯ ಕೊರತೆಯಾಗಿದ್ದು, ತೋಟಗಾರಿಕೆ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿದೆ.

ಜನ ಹೆಚ್ಚು ಇಷ್ಟಪಡುವ ತರಕಾರಿ ಬೆಲೆ ಪ್ರತಿ ಕೆ.ಜಿಗೆ ₹ 80 ರಿಂದ ₹ 100ರ ವರೆಗೆ ಹೆಚ್ಚಳವಾಗಿದೆ. ಅಡುಗೆಯ ಸ್ವಾದ ಹೆಚ್ಚಿಸಲು ಬಳಸುವ ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 15 ಸಾವಿರಕ್ಕೆ ಏರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಚಿಕ್ಕ ಕೊತಂಬರಿ ಸಿವುಡಿಗೆ ₹ 15 ಪಡೆಯುತ್ತಿದ್ದಾರೆ.

ಕೈಯಲ್ಲಿ ಒಂದಿಷ್ಟು ಹಣ ಉಳಿಯಲಿ ಎನ್ನುವ ಉದ್ದೇಶದಿಂದ ಗೃಹಿಣಿಯರು ಕೊತಂಬರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೋಟೆಲ್‌, ಖಾನಾವಳಿ, ಬಾರ್‌ ಆ್ಯಂಡ್ ರೆಸ್ಟೋರಂಟ್‌ನವರು ಮಾತ್ರ ಅನಿವಾರ್ಯವಾಗಿ ಕೊಂತಬರಿ ಖರೀದಿಸುತ್ತಿದ್ದಾರೆ.

ಹಿರೇಕಾಯಿ, ಬೆಂಡೆಕಾಯಿ, ಹಸಿ ಮೆಣಸಿನಕಾಯಿ, ಕರಿಬೇವು, ಪಾಲಕ್‌, ಮೆಂತೆ ಬೆಲೆ ಪ್ರತಿ ಕ್ವಿಂಟಲ್‌ಗೆ ತಲಾ ₹ 1 ಸಾವಿರ ಹೆಚ್ಚಾಗಿದೆ. ಬೆಳ್ಳೊಳ್ಳಿ, ತೊಂಡೆಕಾಯಿ ಹಾಗೂ ಸಬ್ಬಸಗಿ ಬೆಲೆ ಸ್ಥಿರವಾಗಿದೆ. ಬೀನ್ಸ್‌ ಬೆಲೆ ₹ 16 ಸಾವಿರದಿಂದ 11 ಸಾವಿರಕ್ಕೆ ಕುಸಿದಿದೆ. ಆದರೆ, ಇತರೆ ತರಕಾರಿಗೆ ಹೋಲಿಸಿದರೆ ಬೀನ್ಸ್‌ ಬೆಲೆ ಈ ವಾರವೂ ನಿರೀಕ್ಷೆಯಷ್ಟು ಕಡಿಮೆಯಾಗಿಲ್ಲ.

ಹೂಕೋಸು, ಬಿಟ್‌ರೂಟ್, ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ, ಬದನೆಕಾಯಿ ಹಾಗೂ ಎಲೆಕೋಸು ತಲಾ ₹ 500, ಈರುಳ್ಳಿ ಬೆಲೆ ₹ 100 ಕಡಿಮೆಯಾಗಿದೆ. ಬೆಲೆ ಹೆಚ್ಚಳದಿಂದಾಗಿ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.

ಹೈದರಾಬಾದ್‌ನಿಂದ ಗಜ್ಜರಿ, ಬೀನ್ಸ್, ಬಿಟ್‌ರೂಟ್, ತೊಂಡೆಕಾಯಿ, ಬೆಂಡೆಕಾಯಿ ಮಾರುಕಟ್ಟೆಗೆ ಬಂದಿವೆ. ಬೆಳಗಾವಿಯಿಂದ ಮೆಣಸಿನಕಾಯಿ, ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ, ಬೆಳ್ಳೂಳ್ಳಿ ಆವಕವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಟೊಮೆಟೊ, ಹಿರೇಕಾಯಿ, ಬದನೆಕಾಯಿ, ಎಲೆಕೋಸು, ಹೂಕೋಸು, ಮೆಂತೆ, ಸಬ್ಬಸಗಿ, ಕರಿಬೇವು, ಕೊತಂಬರಿ ಹಾಗೂ ಪಾಲಕ್‌ ಮಾರುಕಟ್ಟೆಗೆ ಬಂದಿವೆ.

‘ಮಳೆ ಉತ್ತಮವಾಗಿ ಬಂದರೆ ತರಕಾರಿ ಬೆಲೆ ಕುಸಿಯಲಿದೆ. ಇಲ್ಲದಿದ್ದರೆ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ’ ಎಂದು ತರಕಾರಿ ಸಗಟು ವ್ಯಾಪಾರಿ ಅಮೀರ್‌ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು