ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಕೋವಿಡ್ ನಡುವೆ ‘ಬೆಲೆ ಏರಿಕೆ ಸಂಕಷ್ಟ’

ದಿನಸಿ ವಸ್ತು, ತರಕಾರಿ, ಹಣ್ಣುಗಳ ಬೆಲೆಯಲ್ಲಿ ದಿಢೀರ್‌ ಹೆಚ್ಚಳ
Last Updated 3 ಮೇ 2021, 2:59 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಸೋಂಕು ಜನಸಾಮಾನ್ಯರಿಗೆ ಸಂಕಷ್ಟಗಳ ಸರಮಾಲೆ ತಂದೊಡ್ಡಿದೆ. ಈ ಪಟ್ಟಿಗೆ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಸೇರಿದೆ.

ಮೊದಲೇ ಜನಸಾಮಾನ್ಯರು ದಿನಸಿ ವಸ್ತು, ತರಕಾರಿ, ಹಣ್ಣುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಮೇ 12ರ ವರೆಗೆ ವಿಧಿಸಲಾದ ಕಟ್ಟುನಿಟ್ಟಿನ ಕರ್ಫ್ಯೂ ಕಾರಣ ಇವುಗಳ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳ ಆಗಿರುವುದು ಇನ್ನಷ್ಟು ಕಷ್ಟಕ್ಕೆ ದೂಡಿದೆ.

ಕರ್ಫ್ಯೂ ಪ್ರಯುಕ್ತ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಬದುಕಿನ ಬಂಡಿ ಸಾಗಿಸಲು ನಿತ್ಯದ ಕೂಲಿಯನ್ನೇ ಅವಲಂಬಿಸಿರುವ ಕೂಲಿ ಕಾರ್ಮಿಕರು ತೊಂದರೆಯಲ್ಲಿ ಇದ್ದಾರೆ. ಅನೇಕರು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯಲ್ಲಿ ಇರುವಾಗಲೇ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಘಾತ ಉಂಟು ಮಾಡಿದೆ.

ಜೋಳ, ಗೋಧಿ, ತೊಗರಿ ಬೇಳೆ, ಚಣಗಿ ಬೇಳೆ, ಉದ್ದಿನ ಬೇಳೆ, ಸಿಹಿ ಎಣ್ಣೆ, ಶೇಂಗಾ, ರವೆ, ಸಕ್ಕರೆ ಮೊದಲಾದವುಗಳ ಬೆಲೆ ಹೆಚ್ಚಾಗಿದೆ. ತೊಗರಿ ಬೇಳೆ ಕೆಜಿಗೆ ₹90 ರಿಂದ ₹115, ಉದ್ದಿನ ಬೇಳೆ ₹100 ರಿಂದ ₹125, ಬಿಳಿ ಜೋಳ ಬೆಲೆ ₹37 ರಿಂದ ₹50ಕ್ಕೆ ಏರಿಕೆ ಆಗಿದೆ. ಗೋಧಿ, ಶೇಂಗಾ, ಸಕ್ಕರೆ ಬೆಲೆಯಲ್ಲೂ ಹೆಚ್ಚಳವಾಗಿದೆ ಎಂದು ಜನರು ಅಳಲು ತೋಡಿಕೊಳ್ಳುತ್ತಾರೆ.

‘ಸಸ್ಯಹಾರಿಗಳಷ್ಟೇ ಅಲ್ಲ, ಮಾಂಸಾಹಾರಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೋಳಿ, ಕುರಿ ಮಾಂಸ, ಮೊಟ್ಟೆಯ ಬೆಲೆಗಳಲ್ಲೂ ಏರಿಕೆಯಾಗಿದೆ’ ಎಂದು ಹೇಳುತ್ತಾರೆ ನಗರದ ಓಲ್ಡ್ ಸಿಟಿ ನಿವಾಸಿ ಕಲೀಂ.

ಕರ್ಫ್ಯೂ ಕಾರಣ ನಗರಕ್ಕೆ ಅಗತ್ಯ ಪ್ರಮಾಣದಲ್ಲಿ ತರಕಾರಿ ಬರುತ್ತಿಲ್ಲ. ಕೋವಿಡ್ ಭಯದಿಂದಲೂ ತರಕಾರಿ ಬೆಳೆದ ಅನೇಕರು ನಗರದ ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ, ನಗರದಲ್ಲಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ತರಕಾರಿ ಮಾರುವವರು ಕೂಡ ಬೇರೆ ಬೇರೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ಸಾರ್ವಜನಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

‘ಮೆಂತೆ ಸೊಪ್ಪು ಕೆಲವರು ಕೆಜಿಗೆ ₹80ರಂತೆ ಮಾರಾಟ ಮಾಡಿದರೆ, ಇನ್ನು ಕೆಲವರು ₹100, ₹120 ರಂತೆಯೂ ಮಾರುತ್ತಿದ್ದಾರೆ. ಕೋವಿಡ್ ಭಯದಿಂದ ಜನ ಮನೆ ಹೊರಗೆ ಕಾಲಿಡುತ್ತಿಲ್ಲ. ತಳ್ಳುಗಾಡಿಯಲ್ಲಿ ವ್ಯಾಪಾರಿಗಳು ತಂದ ತರಕಾರಿಯನ್ನು ಹೇಳಿದಷ್ಟು ಬೆಲೆಗೆ ಕೊಂಡುಕೊಳ್ಳುವ ಸ್ಥಿತಿ ಇದೆ’ ಎಂದು ವಿದ್ಯಾನಗರ ನಿವಾಸಿ ಅಶ್ವಿನಿ ತಿಳಿಸುತ್ತಾರೆ.

‘ಬೆಂಡೆಕಾಯಿ ಬೆಲೆ ಕೆಜಿಗೆ ₹30 ರಿಂದ ₹50, ಮೆಣಸಿನಕಾಯಿ ಬೆಲೆ ₹60 ರಿಂದ ₹80ಕ್ಕೆ ಹೆಚ್ಚಳವಾಗಿದೆ. ಇತರ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದೆ’ ಎಂದು ಹೇಳುತ್ತಾರೆ.

ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೆರವಾಗುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳು ಸಹ ಬೆಲೆ ಏರಿಕೆಯಿಂದ ಹೊರತಾಗಿಲ್ಲ. ಕೆಜಿಗೆ ₹140ಕ್ಕೆ ಇದ್ದ ಸೇಬು ಹೆಣ್ನಿನ ಬೆಲೆ ಈಗ ₹200ಕ್ಕೆ ಮಾರಾಟವಾಗುತ್ತಿದೆ. ₹120 ಇದ್ದ ದಶಹರಿ ತಳಿಯ ಕೆಜಿ ಮಾವು ₹160 ರಂತೆ ಮಾರಾಟವಾಗುತ್ತಿದೆ. ₹40 ಇದ್ದ ಬಾಳೆಹಣ್ಣು ಪ್ರತಿ ಡಜನ್ ಬೆಲೆ ₹50 ಆಗಿದೆ.

ಗ್ರಾಹಕರಿಗೆ ಬೆಲೆ ಏರಿಕೆ ಬರೆ
ಔರಾದ್:
ಕೋವಿಡ್ ಸೋಂಕಿನ ಸಂಕಷ್ಟದಲ್ಲಿರುವ ಜನರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹೊರೆ ಮತ್ತಷ್ಟು ತೊಂದರೆ ಉಂಟು ಮಾಡಿದೆ.

ಸರ್ಕಾರ ಕರ್ಫ್ಯೂ ವಿಧಿಸಿದ ನಂತರ ತರಕಾರಿ, ಹಣ್ಣು ಹಾಗೂ ಇತರೆ ದಿನಬಳಕೆ ಆಹಾರ ವಸ್ತುಗಳ ಬೆಲೆ ದುಪ್ಪಟ್ಟು ಆಗಿದೆ. ₹60 ಇದ್ದ ಮೆಂತೆ ಸೊಪ್ಪು ಹಾಗೂ ಇತರೆ ಸೊಪ್ಪುಗಳ ಬೆಲೆ ₹100 ದಾಟಿದೆ. ಬೇಳೆಕಾಳು, ತರಕಾರಿ, ಹಣ್ಣಿನ ಬೆಲೆ ಕೂಡ ಜಾಸ್ತಿಯಾಗಿದೆ.

‘ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದೇವೆ. ಇಂತಹ ವೇಳೆ ದಿನ ಬಳಕೆ ವಸ್ತುಗಳ ಬೆಲೆ ಜಾಸ್ತಿಯಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ಇಲ್ಲಿಯ ಕಾರ್ಮಿಕ ಮಲ್ಲಿಕಾರ್ಜುನ ಅಲ್ಲಾಪುರ ಹೇಳುತ್ತಾರೆ.

ಕಳೆದ ವರ್ಷ ಲಾಕ್‍ಡೌನ್ ವೇಳೆ ಜನಪ್ರತಿನಿಧಿಗಳು, ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದರು. ಆದರೆ ಈ ಬಾರಿ ಯಾರೂ ಆ ರೀತಿಯ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಸರ್ಕಾರ ಕೂಡ ಇದುವರೆಗೆ ಸಹಾಯಕ್ಕೆ ಬಂದಿಲ್ಲ ಎಂದು ಜನಸಾಮಾನ್ಯರು ಗೋಳು ತೋಡಿಕೊಳ್ಳುತ್ತಿದ್ದಾರೆ.

ಗ್ರಾಹಕರು ಕಂಗಾಲು
ಕಮಲನಗರ:
ಲಾಕ್‌ಡೌನ್‌ನಿಂದ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಲು ಸೀಮಿತ ಅವಕಾಶ ನೀಡಿದ್ದರೂ ಸಹ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ದಿಢೀರ ಗಗನಕ್ಕೆ ಏರಿದೆ.

‘ಬೆಲೆ ಹೆಚ್ಚಳವಾಗಬಹುದೆಂಬ ಆತಂಕದಿಂದ ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟ ಪರಿಣಾಮ ಹಣ್ಣು ತರಕಾರಿ ಬೆಲೆ ದಿಢೀರ್ ಏರಿಕೆಯಾಗಲು ಕಾರಣವಾಗಿದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.

ಮಾರುಕಟ್ಟೆಗೆ ಎಂದಿನಂತೆ ತರಕಾರಿಗಳ ಪೂರೈಕೆಯಾದರೂ ಬೇಡಿಕೆ ಎರಡರಷ್ಟಾಗಿದೆ. ಜೊತೆಗೆ ಕೆಲ ವ್ಯಾಪಾರಿಗಳು ತರಕಾರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ದಾಸ್ತಾನು ಮಾಡುತ್ತಿದ್ದಾರೆಂಬ ಆರೋಪವೂ ಕೇಳಿಬಂದಿದೆ. ಆದರೆ, ಕೋವಿಡ್ ಹೆಸರಿನಲ್ಲಿ ಸಣ್ಣ ವ್ಯಾಪಾರಿಗಳು ಕೃತಕ ಅಭಾವದ ನೆಪದಲ್ಲಿ ಗ್ರಾಹಕರ ಮೇಲೆ ಬಾರಿ ಹೊರೆಯನ್ನು ಹೊರೆಸುತ್ತಿದ್ದಾರೆ.

ಕಳೆದ ವಾರಕ್ಕೆ ಹೊಳಿಸಿದರೆ ಈ ವಾರ ಪ್ರತಿ ತರಕಾರಿ ಬೆಲೆಯಲ್ಲಿ ₹15 ರಿಂದ ₹20 ಗಳಷ್ಟು ಹೆಚ್ಚಳಗೊಂಡಿದೆ. ಹಸಿಮೆಣಸಿನಕಾಯಿ, ಸೇಬು, ಕಿವಿಸ್, ಮಾವಿನಹಣ್ಣು, ಮೂಸಂಬಿ, ಪಪ್ಪಾಯಿ ಮತ್ತು ಬೀನ್ಸ್ ದರ ಏರಿವೆ. ಆದರೆ, ಶುಂಠಿ ಮತ್ತು ಬೆಳ್ಳುಳ್ಳಿ ದರಗಳು ಸ್ಥಿರವಾಗಿವೆ. ಆಲೂಗಡ್ಡೆ, ಟೊಮ್ಯಾಟೊ ಸಹ ಕೆ.ಜಿ.ಗೆ ₹30ರಿಂದ ₹40ಗೆ ಮಾರಾಟವಾಗುತ್ತಿದೆ.

ಹಸಿಮೆಣಸಿನಕಾಯಿ ₹30ರಿಂದ ಏಕಾಏಕಿ ₹50–60ಗೆ ಏರಿಕೆಯಾಗಿದೆ. ಸೊಪ್ಪಿನ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ಕೊತ್ತಂಬರಿ ಸೋಪ್ಪು ₹30 ಹೆಚ್ಚಾಗಿದೆ.

ಸಂಕಷ್ಟ ಹೆಚ್ಚಿಸಿದ ಬೆಲೆ ಏರಿಕೆ
ಭಾಲ್ಕಿ:
ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಲಾಕ್‌ಡೌನ್‌ನ ಈ ಸಮಯದಲ್ಲಿ ದಿನದ ನಿರ್ದಿಷ್ಟ ಸಮಯದವರೆಗೆ ಮಾತ್ರ ಅಂಗಡಿಗಳು ತೆರೆದಿಡುತ್ತಿರುವುದರಿಂದ ಕೆಲವರು ಕೃತಕ ಅಭಾವ ಸೃಷ್ಟಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಸಾಮಾನ್ಯ ಜನರು ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿ ಹೋಗಿದ್ದಾರೆ.

‘ಈ ಮುಂಚೆ ರುಚಿಗೋಲ್ಡ್‌ ಪಾಕೆಟ್‌ ₹70, ಚೆಣಗಿ ಬೇಳೆ ₹55, ತೊಗರಿ ಬೇಳೆ ₹75, ಕೊಬ್ಬರಿ ₹150, ಶೇಂಗಾ ₹70 ಇತ್ತು. ಈಗ ಕ್ರಮವಾಗಿ ₹140, ₹75– 80, ₹100, ₹190, ₹100 ಗೆ ಹೆಚ್ಚಳವಾಗಿದೆ. ಗ್ರಾಹಕರು ಎಲ್ಲ ವಸ್ತುಗಳಿಗಿಂತ ಅಡುಗೆ ಎಣ್ಣೆ ದರದ ಹೆಚ್ಚಳ ಬಗ್ಗೆ ತುಂಬಾ ಚಿಂತಿತರಾಗಿ ಸರ್ಕಾರಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ’ ಎಂದು ಅಂಗಡಿ ಮಾಲೀಕ ತಿಳಿಸುತ್ತಾರೆ.

‘ಲಾಕ್‌ಡೌನ್‌ನಿಂದ ಸುಮಾರು ತಿಂಗಳುಗಳಿಂದ ಶಾಲೆ ಬಂದ್‌ ಆಗಿದ್ದು, ಇತ್ತ ಸಂಬಳವೂ ಇಲ್ಲದೆ, ಬೆಲೆ ಏರಿಕೆಯ ಬಿಸಿಯೂ ತಾಳದೆ ಅಡಕತ್ತರಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ’ ಎಂದು ಖಾಸಗಿ ಶಾಲೆ ಶಿಕ್ಷಕ ರಾಜಕುಮಾರ ಅಳಲು ತೋಡಿಕೊಂಡರು.

ಜನಸಾಮಾನ್ಯರ ಜೇಬಿಗೆ ಕತ್ತರಿ
ಖಟಕಚಿಂಚೋಳಿ:
ಸರ್ಕಾರ ಕರ್ಫ್ಯೂ ವಿಧಿಸಿರುವ ಕಾರಣ ಬಹುತೇಕ ಜನ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ದಿನಬಳಕೆಯ ತರಕಾರಿ, ಅಡುಗೆ ಎಣ್ಣೆ, ಜೋಳ, ಬೇಳೆಕಾಳು ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಪ್ರತಿನಿತ್ಯ ಅಡುಗೆಗೆ ಬೇಕಾದ ಈರುಳ್ಳಿ ಬೆಲೆ ಕೆ.ಜಿ ಗೆ ₹10 ಇದ್ದದ್ದು ಈಗ ₹15 ಆಗಿದೆ. ಸಿಹಿ ಎಣ್ಣೆ ಬೆಲೆ ಕೆಜಿಗೆ ₹90 ಇದ್ದದ್ದು ₹164ರ ವರೆಗೂ ಏರಿಕೆ ಆಗಿರುವುದರಿಂದ ಜನಸಾಮಾನ್ಯರಿಗೆ ದಿಕ್ಕು ತೋಚದಂತಾಗಿದೆ.

‘ಜೋಳ, ತೊಗರಿ ಹಾಗೂ ಕಡಲೆ ಬೇಳೆಗಳು ದುಪ್ಪಟ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಟೊಮೆಟೊ, ವಿವಿಧ ಬಗೆಯ ಸೊಪ್ಪಿನ ಬೆಲೆಯೂ ಹೆಚ್ಚಾಗಿರುವುದರಿಂದ ಜನರು ಹೆಚ್ಚಾಗಿ ತರಕಾರಿ ಖರೀದಿಸಲು ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ಹೇಳುತ್ತಾರೆ ವ್ಯಾಪಾರಿ ವಿಜಯಕುಮಾರ. ‘ಕರ್ಫ್ಯೂ ಕಾರಣ ದಿನಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಆದಾಯದಲ್ಲಿ ಹೆಚ್ಚಳವಾಗುತ್ತಿಲ್ಲ. ಹೀಗಾದರೆ ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನ ನಡೆಸುವುದು ತುಂಬಾ ಕಷ್ಟವಾಗಲಿದೆ’ ಎಂದು ಖಾಸಗಿ ನೌಕರ ರಾಮರಾವ್ ಮುಗನೂರ್ ಹೇಳುತ್ತಾರೆ.

‘ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸೇಬು ಬೆಲೆ ಪ್ರತಿ ಕೆಜಿಗೆ ₹180ರ ಆಸುಪಾಸಿನಲ್ಲಿದೆ. ಬಾಳೆಹಣ್ಣು ಬೆಲೆ ಪ್ರತಿ ಡಜನ್‍ಗೆ ₹40ರಿಂದ ₹60ಕ್ಕೆ ಏರಿದೆ. ಮಾವು ಪ್ರತಿ ಕೆಜಿಗೆ ₹100ರಂತೆ ಮಾರಾಟವಾಗುತ್ತಿದೆ. ಹಣ್ಣುಗಳು ಜನಸಾಮಾನ್ಯರ ಕೈಗೆಟದಂತಾಗಿವೆ’ ಎಂದು ಗ್ರಾಹಕ ಅವಿನಾಶ ಮುತ್ತಂಗೆ ಬೇಸರ ವ್ಯಕ್ತಪಡಿಸುತ್ತಾರೆ.

ಪೂರಕ ಮಾಹಿತಿ: ನಾಗೇಶ ಪ್ರಭಾ, ಮನ್ಮಥಪ್ಪ ಸ್ವಾಮಿ, ಗಿರಿರಾಜ ವಾಲೆ, ಮನೋಜ್‌ಕುಮಾರ ಹಿರೇಮಠ, ಬಸವರಾಜ್‌ ಎಸ್‌.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT