ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಏನೇ ಇರಲಿ, ಮಾನವೀಯತೆ ಮೊದಲಿರಲಿ

ವಿವಿಧ ಸಮುದಾಯಗಳ ಮುಖಂಡರ ಅಭಿಮತ
Last Updated 9 ನವೆಂಬರ್ 2019, 14:09 IST
ಅಕ್ಷರ ಗಾತ್ರ

ಬೀದರ್‌: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಏನೇ ತೀರ್ಪು ನೀಡಿರಲಿ, ಪ್ರತಿಯೊಬ್ಬರು ಅದನ್ನು ಗೌರವಿಸಬೇಕು. ಭಾವನಾತ್ಮಕ ವಿಷಯಗಳಿಗಿಂತ ಮಾನವೀಯತೆಯೇ ಮೊದಲಾಗಬೇಕು...

ವಿವಿಧ ಸಮುದಾಯಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ. ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು, ಈದ್ ಮಿಲಾದ್, ಗುರುನಾನಕರ 550ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಶನಿವಾರ ಕರೆದಿದ್ದ ಶಾಂತಿ ಪಾಲನಾ ಹಾಗೂ ಸೌಹಾರ್ದ ಸಭೆಯಲ್ಲಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅತ್ಯಂತ ಹಳೆಯದಾದ ವಿವಾದವೊಂದು ಅಂತ್ಯ ಕಂಡಿದೆ. ದೇಶದ ಅಭಿವೃದ್ಧಿಗಾಗಿ ಹೊಸ ಆಲೋಚನೆಯೊಂದಿಗೆ ಮುಂದಿನ ಹೆಜ್ಜೆ ಇಡಬೇಕಿದೆ. ಸಣ್ಣ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡರೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುವುದು, ಬದುಕು ಸಾಗಿಸುವುದು ಕಷ್ಟವಾಗಲಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸೌಹಾರ್ದದ ಸಂಸ್ಕೃತಿಯನ್ನು ಮುಂದೆ ಸಾಗಿಸಿಕೊಂಡು ಹೋಗಲು ಪ್ರಯತ್ನಿಸಬೇಕಿದೆ ಎಂದರು.

ಮೌಲಾನಾ ಅಬ್ದುಲ್ ವಹೀದ್‌ ಖಾಸ್ಮಿ ಮಾತನಾಡಿ, ‘ಪ್ರತಿಯೊಬ್ಬರು ಸುಖ, ದುಃಖಗಳನ್ನು ಹಂಚಿಕೊಳ್ಳುವ ಸಂಪ್ರದಾಯ ನಮ್ಮ ದೇಶದಲ್ಲಿದೆ. ನಮ್ಮ ದೇಶದ ಜನ ಮಾನವೀಯತೆಗೆ ಪ್ರಾಮುಖ್ಯ ನೀಡುತ್ತ ಬಂದಿದ್ದಾರೆ. ಹಿರಿಯರು ತೋರಿಸಿದ ಮಾರ್ಗದಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.

ಉದ್ಯಮಿ ಎನ್‌.ಆರ್‌.ವರ್ಮಾ ಮಾತನಾಡಿ, ‘ಯಾವುದೋ ಒಂದು ವಿಷಯವನ್ನು ಮುಂದಿಟ್ಟುಕೊಟ್ಟು ಪ್ರತಿಭಟನೆ ನಡೆಸಿದರೆ ಯಾರಿಗೂ ಲಾಭವಿಲ್ಲ. ವ್ಯಾಪಾರಿಗಳು ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಮಹಮ್ಮದ್ ಆಮಿದ್‌ಪಾಶಾ ಮಾತನಾಡಿ, ‘ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಯಾರೊಬ್ಬರೂ ಸಂಭ್ರಮಿಸುವುದಾಗಲಿ, ವಿರೋಧಿಸುವುದಾಗಲಿ ಮಾಡಬಾರದು’ ಎಂದರು.

ಹಳ್ಳಿಖೇಡದ ಕೇಶವರಾವ್‌ ತಳಘಟಕರ್ ಮಾತನಾಡಿ, ‘ಹಳ್ಳಿಖೇಡದಲ್ಲಿ ಮುಸ್ಲಿಮರ ಸಂಖ್ಯೆ ಶೇಕಡ 40ರಷ್ಟಿದ್ದರೂ ಅಲ್ಲಿ ಭ್ರಾತೃತ್ವ ಭಾವನೆ ನೆಲೆಯೂರಿದೆ. ಈಗ ಸೀಮಿ ನಾಗಣ್ಣನ ಜಾತ್ರೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಮನವಿ ಮಾಡಿದರು.

ಬೀದರ್‌ ನಗರಸಭೆ ಮಾಜಿ ಸದಸ್ಯ ಸೈಯದ್‌ ಮನ್ಸೂರ್‌ ಅಹಮ್ಮದ್‌ ಖಾದ್ರಿ, ಮಹಮ್ಮದ್‌ ಮೋಜಂ, ಮಲ್ಲಿಕಾರ್ಜುನ ಪ್ರಭಾ ಅವರು, ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT