ಬೆಲೆಯಲ್ಲಿ ಹಿರೇಕಾಯಿ ಹಿಂದಿಕ್ಕಿದ ಬೆಂಡೆಕಾಯಿ

7
ಬಿಟ್‌ರೂಟ್, ಹೂಕೋಸು, ತೊಂಡೆ ಆವಕ ಹೆಚ್ಚಳ; 14 ಬಗೆಯ ತರಕಾರಿ ಬೆಲೆ ಕುಸಿತ

ಬೆಲೆಯಲ್ಲಿ ಹಿರೇಕಾಯಿ ಹಿಂದಿಕ್ಕಿದ ಬೆಂಡೆಕಾಯಿ

Published:
Updated:
Prajavani

ಬೀದರ್: ಸ್ಥಳೀಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈ ವಾರ ನಡೆದ ಬೆಲೆ ಸಮರದಲ್ಲಿ ಬೆಂಡೆಕಾಯಿ ಪ್ರತಿ ಕ್ವಿಂಟಲ್‌ಗೆ ₹ 2,000 ರಿಂದ ₹ 2,500ರ ವರೆಗೆ ಏರಿಕೆ ಕಂಡಿತು. ಹಿರೇಕಾಯಿ ಹಿರಿತನ ಬದಿಗೆ ಸರಿಸಿ ಬೆಂಡೆಕಾಯಿ ಪ್ರಾಬಲ್ಯ ಮೆರೆಯಿತು. ಹಿರೇಕಾಯಿ ಸಹ ಕಳೆದ ವಾರಕ್ಕಿಂತ ಕ್ವಿಂಟಲ್‌ಗೆ ₹ 2,000 ಬೆಲೆ ಹೆಚ್ಚಿಸಿಕೊಂಡು ತನ್ನ ಅಸ್ತಿತ್ವ ತೋರಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸಿತು. ಬದನೆಕಾಯಿ ಸ್ಥಿರತೆಯನ್ನು ಕಾಯ್ದುಕೊಂಡು ತುರಾಯಿ ಘನತೆ ಉಳಿಸಿತು.

ಹಸಿ ಮೆಣಸಿನಕಾಯಿ ಬೆಲೆ ಸಹ ಸ್ಥಿರವಾಗಿಯೇ ಇತ್ತು. ಸಬ್ಬಸಗಿ ಹಾಗೂ ಕರಿಬೇವು ಸೊಪ್ಪಿನ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಳ ಕಂಡು ಬಂದಿತು. ಇಷ್ಟನ್ನು ಬಿಟ್ಟರೆ 14 ಬಗೆಯ ತರಕಾರಿ ಬೆಲೆ ಕುಸಿದು ಗ್ರಾಹಕರಿಗೆ ಅನುಕೂಲವಾಗಿ ಪರಿಣಮಿಸಿತು.

ಮಾರುಕಟ್ಟೆಗೆ ಹೆಚ್ಚು ಆವಕವಾದ ಬಿಟ್‌ರೂಟ್, ಹೂಕೋಸು, ತೊಂಡೆ ಹಾಗೂ ಮೆಂತೆ ಸೊಪ್ಪಿನ ಬೆಲೆ ಕ್ವಿಂಟಲ್‌ಗೆ ₹ 1,500ರ ವರೆಗೂ ಕುಸಿಯಿತು. ಆಲೂಗಡ್ಡೆ, ಎಲೆಕೋಸು ಹಾಗೂ ಪಾಲಕ್‌ ಬೆಲೆ ಸಹ ₹ 800ರ ವರೆಗೆ ಇಳಿಯಿತು. ಈರುಳ್ಳಿ, ಗಜ್ಜರಿ ಹಾಗೂ ಟೊಮೆಟೊ ಬೆಲೆ ಕನಿಷ್ಠ ₹ 500 ವರೆಗೆ ಕಡಿಮೆ ಆಯಿತು. ಇಡೀ ಮಾರುಕಟ್ಟೆಯಲ್ಲಿ ಬೀನ್ಸ್ ಮಾತ್ರ ₹ 100 ಕುಸಿಯಿತಾದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡು ಬರಲಿಲ್ಲ.

ಸ್ಥಳೀಯ ಮಾರುಕಟ್ಟೆಗೆ ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಂಡೆಕಾಯಿ, ಹಿರೇಕಾಯಿ ಹಾಗೂ ಜಾಲನಾದಿಂದ ಮೆಣಸಿನಕಾಯಿ ಬಂದಿದೆ. ಹೈದರಾಬಾದ್‌ನಿಂದ ಗಜ್ಜರಿ, ಬೀನ್ಸ್, ಟೊಮೆಟೊ, ತೊಂಡೆಕಾಯಿ, ಬಿಟ್‌ರೂಟ್‌ ಹಾಗೂ ಹೂಕೋಸು ಆವಕವಾಗಿದೆ. ಉತ್ತರಪ್ರದೇಶದ ಆಗ್ರಾದಿಂದ ಆಲೂಗಡ್ಡೆ ಬಂದಿದೆ.

‘ಬೀದರ್‌ ನಗರಕ್ಕೆ ಎರಡು ವಾರಗಳಿಂದ ಮಹಾರಾಷ್ಟ್ರ ಹಾಗೂ ಹೈದರಾಬಾದ್‌ನಿಂದಲೇ ಅತಿ ಹೆಚ್ಚು ತರಕಾರಿ ಮಾರುಕಟ್ಟೆಗೆ ಬರುತ್ತಿದೆ‘ ಎಂದು ತರಕಾರಿ ವ್ಯಾಪಾರಿ ಅಹಮ್ಮದ್‌ ಪಾಶಾ ಹೇಳುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !