ಬರ ನಿರ್ವಹಣೆಗೆ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ

7
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಸೂಚನೆ

ಬರ ನಿರ್ವಹಣೆಗೆ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ

Published:
Updated:
Deccan Herald

ಬೀದರ್‌: ‘ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಅಭಾವದಿಂದಾಗಿ ಬರ ಪರಿಸ್ಥಿತಿ ಉಲ್ಬಣಗೊಂಡಿದೆ. ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ಪ್ರತಿ ಹಳ್ಳಿಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ತಿಳಿಸಿದರು.

ನಗರದಲ್ಲಿ ಬರ ನಿರ್ವಹಣೆಗೆ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಭಾಲ್ಕಿ ಹೊರತು ಪಡಿಸಿ ಜಿಲ್ಲೆಯ ಉಳಿದೆಲ್ಲ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಅಧಿಕಾರಿಗಳು ಬೇಸಿಗೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

‘ಎಲ್ಲ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು,  ಉಪ ತಹಶೀಲ್ದಾರ್‌ಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಲಭ್ಯವಿರುತ್ತಾರೆ. ಇವರನ್ನು ಸಮಿತಿಯಲ್ಲಿ ಸೇರಿಸಿ ಗ್ರಾಮಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಅರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

‘ಸಮಿತಿಯ ನಿರ್ವಹಣೆಗೆ ತಾಲ್ಲೂಕು ಅಧಿಕಾರಿಗಳನ್ನು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ. ಇವರು ಜನರೊಂದಿಗೆ ಕುಳಿತುಕೊಂಡು ಅವರ ಸಮಸ್ಯೆಗಳನ್ನು ಆಲಿಸುವ ಜತೆಗೆ ಪರಿಹಾರ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕು. ಹಳ್ಳಿ ಮಟ್ಟದ ಸಮಿತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆಗಳ ಕುರಿತು ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಉಪ ವಿಭಾಗಾಧಿಕಾರಿ ತಾಲ್ಲೂಕಿಗೆ ನೋಡಲ್‌ ಅಧಿಕಾರಿಯಾಗಿದ್ದಾರೆ. ಇವರು ತಮ್ಮ ಹೋಬಳಿವಾರು ರಚಿಸಲಾದ ಸಮಿತಿಯ ಸಭೆ ನಡೆಸಿ ಕುಡಿಯುವ ನೀರು, ಮೇವು ಮತ್ತು ಉದ್ಯೋಗ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿಯನ್ನು ತಯಾರಿಸಿ ಸಭೆ ನಡವಳಿ ಹಾಗೂ ಸ್ಥಾನಿಕ ಪರಿಶೀಲನಾ ವರದಿಯೊಂದಿಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು’ ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಸಹಾಯವಾಣಿ ಆರಂಭಿಸಿ:
ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಹರಿಸಲು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆದು ದಿನದ 24 ಗಂಟೆಯೂ ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ದೂರುಗಳನ್ನು 24 ಗಂಟೆಯೊಳಗಾಗಿ ಪರಿಹರಿಸಲು ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ನೀರಿನ ಮೂಲಗಳನ್ನು ಬಳಸಿ ನೀರು ಪೂರೈಸಲು ಆದ್ಯತೆ ನೀಡಬೇಕು. ತೀವ್ರ ಇದ್ದರೆ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್, ಜಿಲ್ಲಾ ಆಸ್ಪತ್ರೆ ಸರ್ಜನ್‌ ಡಾ.ಸಿ.ಎಸ್‌.ರಗಟೆ, ತಹಶೀಲ್ದಾರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !