ವಿಶ್ವೇಶ್ವರಯ್ಯ ಭಾವಚಿತ್ರದ ಮೆರವಣಿಗೆ

7
ಜಿಲ್ಲೆಯಲ್ಲಿ ಸಂಭ್ರಮದ ಎಂಜಿನಿಯರ್‌ಗಳ ದಿನಾಚರಣೆ

ವಿಶ್ವೇಶ್ವರಯ್ಯ ಭಾವಚಿತ್ರದ ಮೆರವಣಿಗೆ

Published:
Updated:
Deccan Herald

ಬೀದರ್: ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಎಂಜಿನಿಯರ್‌ಗಳ ದಿನವನ್ನಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಬೀದರ್ ಶಾಖೆಯು ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಮಾರಂಭದ ಮೂಲಕ ಎಂಜಿನಿಯರ್‌ಗಳ ದಿನವನ್ನು  ಭಿನ್ನವಾಗಿ ಆಚರಿಸಿತು.

ನಗರದ ಬಸವೇಶ್ವರ ವೃತ್ತದ ಸಮೀಪ ಸಂಸದ ಭಗವಂತ ಖೂಬಾ ಅವರು ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯು ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ರೋಟರಿ ಕನ್ನಡಾಂಬೆ ವೃತ್ತದ ಮೂಲಕ ಸಾಗಿ ಜಿಲ್ಲಾ ರಂಗಮಂದಿರ ತಲುಪಿ ಮುಕ್ತಾಯಗೊಂಡಿತು.

ಅಲಂಕೃತ ವಾಹನದಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರ ಇರಿಸಲಾಗಿತ್ತು. ಡೊಳ್ಳು ಕುಣಿತ ತಂಡವು ಆಕರ್ಷಕ ಕಲೆ ಪ್ರದರ್ಶನದ ಮೂಲಕ ಮೆರವಣಿಗೆಗೆ ಕಳೆ ತಂದುಕೊಟ್ಟಿತು.

ಟಿ–ಶರ್ಟ್ ಧರಿಸಿ ತಲೆ ಮೇಲೆ ಟೊಪ್ಪಿಗೆ ಹಾಕಿಕೊಂಡಿದ್ದ ಗಣ್ಯರು, ಎಂಜಿನಿಯರ್‌ಗಳು ಗಮನ ಸೆಳೆದರು. ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಕೊರಳಲ್ಲಿ ಡೊಳ್ಳು ಹಾಕಿಕೊಂಡು ಬಾರಿಸುವ ಮೂಲಕ ಎಂಜಿನಿಯರ್‌ಗಳಲ್ಲಿ ಉತ್ಸಾಹ ತುಂಬಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಬೀದರ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹುಗ್ಗಿ, ಮಾಜಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ, ಖಜಾಂಚಿ ಓಂಕಾರ ಮಾಲಿಪಾಟೀಲ ಕೊಟಗ್ಯಾಳ, ಎಸಿಸಿಇ(ಐ) ಬೀದರ್ ಶಾಖೆಯ ಅಧ್ಯಕ್ಷ ವೀರಶೆಟ್ಟಿ ಮಣಗೆ, ರವಿ ಮೂಲಗೆ, ಶಿವಶರಣಪ್ಪ ವಾಲಿ, ಪ್ರಕಾಶ ಟೊಣ್ಣೆ, ಅನಿಲ ಔರಾದೆ, ಅನಿಲ ಖೇಣಿ, ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ನಂತರ ಜಿಲ್ಲಾ ರಂಗ ಮಂದಿರದಲ್ಲಿ ಕಾರ್ಮಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲಾವಿದ ಆಬೇದ್ ಅಲಿ ಕನ್ನಡ ಹಾಗೂ ಹಿಂದಿ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ಕಟ್ಟಡ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು, ಎಂಜಿನಿಯರ್‌ಗಳು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !