ಗುರುವಾರ , ಜನವರಿ 28, 2021
15 °C
ಯುವ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಖೂಬಾ ಹೇಳಿಕೆ

ಯುವಕರಲ್ಲಿ ಚೈತನ್ಯ ತುಂಬುವ ವಿವೇಕಾನಂದರ ಭಾಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಶಿಕಾಗೊ ಭಾಷಣದ ಮೂಲಕ ಭಾರತವನ್ನು ಅಧ್ಯಾತ್ಮ ಕ್ಷೇತ್ರದಲ್ಲಿ ವಿಶ್ವಗುರುವನ್ನಾಗಿ ಗುರುತಿಸುವಂತೆ ಮಾಡಿದ ಕೀರ್ತಿ ವೀರ ಸನ್ಯಾಸಿ ಎಂದೇ ಪರಿಚಿತ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ’ ಎಂದು ಸಂಸದ ಭಗವಂತ ಖೂಬಾ ಬಣ್ಣಿಸಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾಮಿ ವಿವೇಕಾನಂದರ ಬರಹ ಹಾಗೂ ಭಾಷಣಗಳಲ್ಲಿ ಯುವ ಪೀಳಿಗೆಯಲ್ಲಿ ಚೈತನ್ಯ ತುಂಬುವ ಶಕ್ತಿ ಇದೆ. ಇಂದಿನ ಯುವಕರು ವಿವೇಕಾನಂದರ ತತ್ವಗಳ ‍ಪಾಲನೆ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು’ ಎಂದು ಮನವಿ ಮಾಡಿದರು.

‘ವಿವೇಕಾನಂದರು ರಾಷ್ಟ್ರಪ್ರಜ್ಞೆ, ಗುರುಭಕ್ತಿ, ಶಿಸ್ತು, ಸಂಸ್ಕಾರ ಸಂದೇಶ ನೀಡಿದ್ದಾರೆ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಗುರಿ ಸಾಧಿಸುವವರೆಗೆ ಛಲದಿಂದ ಮುನ್ನುಗ್ಗುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದರು.

‘ಶಿಕ್ಷಣ, ನೌಕರಿ ಪಡೆದುಕೊಳ್ಳಲು ಸೀಮಿತವಾಗಬಾರದು. ವ್ಯಕ್ತಿತ್ವ ವಿಕಸನ, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿ ಅದರ ಮೂಲ ಉದ್ದೇಶವಾಗಬೇಕು’ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ‘ಇಡೀ ವಿಶ್ವಕ್ಕೆ ಮಾದರಿಯಾಗಿ ಯುವಕರಿಗೆ ಸ್ಫೂರ್ತಿ ನೀಡಿದ ಏಕೈಕ ವೀರ ಸನ್ಯಾಸಿ ಎಂದರೆ ಸ್ವಾಮಿ ವಿವೇಕಾನಂದರು’ ಎಂದು ಬಣ್ಣಿಸಿದರು.

‘ವಿವೇಕಾನಂದರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಮಾತಿನಲ್ಲಿ ಮಮತೆ, ಕಂಚಿನ ಕಂಠದ ವಾಗ್ಝರಿ, ಧೀರೋದಾತ್ತ ನುಡಿ, ಉನ್ನತ ವ್ಯಕ್ತಿತ್ವ ಅವರದ್ಧಾ ಗಿತ್ತು. ಮಾನವ ಹಿತಕ್ಕಾಗಿ ವಿವೇಕಾನಂದರು ಮಾಡಿದ ಕಾರ್ಯ ಅದ್ಭುತವಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ರಾಮಚಂದ್ರನ್ ಮಾತನಾಡಿ ‘ವಿವೇಕಾನಂದರ ಬರಹ ಮತ್ತು ಭಾಷಣಗಳನ್ನು ಯುವಕರು ಪ್ರತಿಕ್ಷಣ ನೆನೆಸಿಕೊಳ್ಳಬೇಕು’ ಎಂದರು.

‘ಕಠಿಣ ಪರಿಶ್ರಮ, ಸಮಯಪ್ರಜ್ಞೆ, ಸತತ ಪ್ರಯತ್ನವೇ ಗುರಿ ತಲುಪಲು ಇರುವ ಪ್ರಮುಖ ಮೆಟ್ಟಿಲುಗಳು. ಕನಸಿನ ಬೆನ್ನೇರಿ ಸಾಧನೆ ಮಾಡಲು ಶ್ರಮಿಸಬೇಕು. ವಿವೇಕಾನಂದರು ಕಡಿಮೆ ಅವಧಿ ಬದುಕಿದರೂ ದೊಡ್ಡ ಸಾಧನೆ ಮಾಡಿದ ಹಾಗೆ ಇಂದಿನ ಯುವಕರು ಗುರಿ ಮುಟ್ಟಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ನೆಹರೂ ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೊರ್ಮೆ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರ, ವೈಜಿನಾಥ ಮಾನ್ಪಡೆ, ಶಿವಯ್ಯ ಸ್ವಾಮಿ, ಪ್ರಭುಲಿಂಗ ಬಿರಾದಾರ, ಓಂಪ್ರಕಾಶ ರೊಟ್ಟೆ, ಎನ್.ಸಿ.ಸಿ. ಅಧಿಕಾರಿ ಮೇಜರ್ ಡಾ.ಪಿ.ವಿಠಲರೆಡ್ಡಿ ಇದ್ದರು.

ಕಾರ್ಯಕ್ರಮದಲ್ಲಿ ನಾಗೇಶ ಪಾಟೀಲ ಹಾಗೂ ವಿವೇಕ ವಾಲಿ ಅವರನ್ನು ಸನ್ಮಾನಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಿಗೇರ್ ಸ್ವಾಗತಿಸಿದರು. ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ನಿರೂಪಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಎನ್.ಸಿ.ಸಿ, ಎನ್.ಎಸ್.ಎಸ್ ಘಟಕಕಗಳು, ಜಗದ್ಗುರು ಪಂಚಾಚಾರ್ಯ ಯುವಕ ಸಂಘ ಸೇರಿದಂತೆ ವಿವಿಧ ಯುವಕ, ಯುವತಿ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು