ಶುಕ್ರವಾರ, ಅಕ್ಟೋಬರ್ 18, 2019
27 °C
ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ

ಹೆಸರು ಸೇರ್ಪಡೆಗೆ ನ.6 ಕಡೆಯ ದಿನ

Published:
Updated:
Prajavani

ಬೀದರ್: ‘ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ನವೆಂಬರ್ 6 ಕೊನೆಯ ದಿನವಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ನವೆಂಬರ್ 23 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಡಿಸೆಂಬರ್ 9 ರ ವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ಕನಿಷ್ಠ 3 ವರ್ಷ ಸರ್ಕಾರಿ, ಅರೆ ಸರ್ಕಾರಿ, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದವರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರು. ಅರ್ಜಿ ನಮೂನೆ 19 ರ ಜತೆಗೆ ರಾಜ್ಯ ಸರ್ಕಾರದಿಂದ ಅಂಗೀಕೃತವಾದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ಅನುಬಂಧ 2 ರಲ್ಲಿ ದೃಢೀಕೃತ ಪತ್ರ ಒದಗಿಸಬೇಕು’ ಎಂದು ತಿಳಿಸಿದರು.

‘ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಲು ಅನುಕೂಲವಾಗುವಂತೆ ಎಲ್ಲರಿಗೂ ಮಾಹಿತಿ ನೀಡಬೇಕು’ ಎಂದರು.

‘ಹೆಸರು ಸೇರ್ಪಡೆ ಅರ್ಜಿಗಳು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಕಚೇರಿಗಳಲ್ಲಿ ಲಭ್ಯ ಇವೆ. ಅರ್ಹರು ಅರ್ಜಿ ಪಡೆದು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಹಾಲಿ ಸದಸ್ಯರ ಅವಧಿ 2020 ರ ಜೂನ್ 30 ರಂದು ಕೊನೆಗೊಳ್ಳಲಿದೆ’ ಎಂದು ತಿಳಿಸಿದರು.

ಚುನಾವಣಾ ತಹಶೀಲ್ದಾರ್ ಜಗನ್ನಾಥ ರೆಡ್ಡಿ, ರಾಜಕೀಯ ಪಕ್ಷಗಳ ಮುಖಂಡರಾದ ಎಂ.ಎ. ಸಮಿ, ಅಶೋಕ ಕೋಡಗೆ, ಅಶೋಕ ಮಲ್ಗೆ, ಎಂ.ಡಿ. ಜಾಫರ್ ಇದ್ದರು.

Post Comments (+)