ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ನೀರಿನ ಚಿಂತೆ, ಅಭ್ಯರ್ಥಿಗಳಿಗೆ ಮತಗಳ ಚಿಂತೆ

ಸರ್ಕಾರಿ ನೀರಿನ ಟ್ಯಾಂಕರ್ ಹಿಂದೆ ಅಲೆಯುತ್ತಿರುವ ಮುಖಂಡರು
Last Updated 16 ಮೇ 2019, 19:46 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಧಿಸೂಚನೆ ಪ್ರಕಟಿಸಿದ ನಂತರ ಜಿಲ್ಲೆಯಲ್ಲಿ ನೀರು ರಾಜಕೀಯ ಗರಿಬಿಚ್ಚಿಕೊಂಡಿದೆ. ಅಭ್ಯರ್ಥಿಗಳಿಗೆ ಮತಗಳ ಹಾಗೂ ಮತದಾರರಿಗೆ ಕುಡಿಯುವ ನೀರಿನ ಚಿಂತೆ ಕಾಡುತ್ತಿದೆ. ನೀರಿನ ಸಮಸ್ಯೆ ನೀಗಿಸಲು ತಾಲ್ಲೂಕು ಆಡಳಿತ ಔರಾದ್‌ ಪಟ್ಟಣಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದರೂ, ಅಭ್ಯರ್ಥಿಗಳು ತಮ್ಮದೇ ಕೊಡುಗೆ ಎನ್ನುವಂತೆ ಟ್ಯಾಂಕರ್‌ಗಳ ಹಿಂದೆ ಓಡಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಔರಾದ್ ಪಟ್ಟಣದ ನಿವಾಸಿಗಳು ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪಟ್ಟಣದ) ಹೊರ ವಲಯದ ಬಾವಿ ಹಾಗೂ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಇದೆ. ಆದರೆ, ಹಳೆಯ ಬಾವಿಗಳಲ್ಲಿನ ಹೂಳು ತೆಗೆದು ಜನರಿಗೆ ಸರಳವಾಗಿ ನೀರು ಪೂರೈಸುವ ವ್ಯವಸ್ಥೆಯನ್ನು ಅಲ್ಲಿನ ಆಡಳಿತ ಮಾಡಿಲ್ಲ. ಜನರು ಪಟ್ಟಣ ಪಂಚಾಯಿತಿ ಎದುರು ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಖೂಬಾ ಗಲ್ಲಿಯಲ್ಲಿ ಇರುವ ಸಂಸದ ಭಗವಂತ ಖೂಬಾ ಅವರ ಮನೆಯ ಮುಂದೆಯೇ ಟ್ಯಾಂಕರ್‌ ಮೂಲಕ ನೀರು ಪೂರೈಸುವುದು ಸಾಮಾನ್ಯವಾಗಿದೆ. ಅವರ ಮನೆಯಿಂದ 100 ಮೀಟರ್‌ ಅಂತರದಲ್ಲಿಯೇ ಎರಡು ತೆರೆದ ಬಾವಿಗಳು ಹಾಗೂ ಎರಡು ಕೊಳವೆಬಾವಿಗಳು ಇವೆ. ಕೊಳವೆಬಾವಿಯಲ್ಲಿ ಸಾಕಷ್ಟು ನೀರು ಇದ್ದರೂ ಪಟ್ಟಣ ಪಂಚಾಯಿತಿಯವರು ಯೋಜನೆ ರೂಪಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನಿಸಿಲ್ಲ.

‘ಔರಾದ್‌ನ ಓಲ್ಡ್‌ಗಂಜ್‌ನಲ್ಲಿ ಇರುವ ಕೊಳವೆಬಾವಿಯಲ್ಲಿ ಸಾಕಷ್ಟು ನೀರಿದೆ. ಬಾಲಕರ ವಸತಿನಿಲಯದ ಬಳಿಯ ಒಂದು ಹಳೆಯ ಬಾವಿಯಲ್ಲೂ ಸಾಕಷ್ಟು ನೀರಿದೆ. ಅಲ್ಲಿಂದ ಪೈಪ್‌ಲೈನ್‌ ಅಳವಡಿಸಿ ಓವರ್‌ಹೆಡ್‌ ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡಿದರೆ ಜನರ ಸಮಸ್ಯೆ ಬಗೆಹರಿಯುತ್ತದೆ. ಆದರೆ, ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬರದ ಕಾರಣ ನಮ್ಮಂತಹ ಬಡವರು ತೊಂದರೆ ಅನುಭವಿಸಬೇಕಾಗಿದೆ’ ಎಂದು ತರಕಾರಿ ವ್ಯಾಪಾರಿ ರಜಿಯಾ ಬೇಗಂ ಬೇಸರ ವ್ಯಕ್ತಪಡಿಸುತ್ತಾರೆ.

‘ನಮ್ಮದು ಲಂಚಕೋರರ ಊರು. ಅಧಿಕಾರಿಗಳು ಸೋಮಾರಿಗಳಾಗಿದ್ದಾರೆ. ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಬೇಕಾಗಿಲ್ಲ. ನೀರಿನ ಸಮಸ್ಯೆಗಳನ್ನು ಜೀವಂತ ಇಟ್ಟು ರಾಜಕೀಯ ಮಾಡುತ್ತಾರೆ. ಹಣ ಪಡೆದು ಮತ ಹಾಕುವವರಿಗೆ ಇದೇ ಗತಿ ಎಂದು ನಮ್ಮ ಮೇಲೆಯೇ ಸುಳ್ಳು ಆರೋಪ ಮಾಡುತ್ತಾರೆ. ಕೆಲಸ ಮಾಡದವರನ್ನು ಚಪ್ಪಲಿಯಿಂದ ಹೊಡೆಯದ ಹೊರತು ಅನ್ಯ ದಾರಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಹಿಳೆಯರು ಮನೆ ಕೆಲಸ ಮಾಡಿ ನೀರು ಹೊತ್ತು ತರಬೇಕಾಗಿದೆ. ಒಬ್ಬ ಅಧಿಕಾರಿಯೂ ಮಾನವೀಯ ನೆಲೆಯಲ್ಲಿ ಕೆಲಸ ಮಾಡಲು ಸಿದ್ಧವಿಲ್ಲ. ಹೀಗಾಗಿ ನಮ್ಮ ಬದುಕು ನರಕವಾಗಿದೆ’ ಎನ್ನುತ್ತಾರೆ ಮಾರುತಿ ಬೋರೆ.

‘ತಾಲ್ಲೂಕು ಕೇಂದ್ರವಾದರೂ ಪಟ್ಟಣದ ನಲ್ಲಿಗಳಿಗೆ ನೀರು ಬರುವುದಿಲ್ಲ. ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಬಂದಾಗ ಬ್ಯಾರಲ್ಗಳನ್ನು ತುಂಬಿಕೊಳ್ಳುತ್ತೇವೆ. ರಾಮನಗರದಲ್ಲಿ ಕೊಳವೆಯಲ್ಲಿ ನೀರಿದ್ದರೂ ಪೂರೈಕೆ ಮಾಡುತ್ತಿಲ್ಲ. ಪಟ್ಟಣ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರವನ್ನು ಹಿಂದಿನ ಬಾರಿ ಬಿಜೆಪಿಯೇ ಪ್ರತಿನಿಧಿಸಿದೆ. ಅಧಿಕಾರಿಗಳು ಕೆಲಸ ಮಾಡದ ಕಾರಣ ಸಮಸ್ಯೆ ಹೆಚ್ಚಾಗಿದೆ’ ಎಂದು ಮುಖಂಡ ಗಣಪತ್‌ರಾವ್‌ ಉಚ್ಚಾ ಹೇಳುತ್ತಾರೆ.

‘ಕೊಡಗಳಷ್ಟೇ ಅಲ್ಲ ; ಬ್ಯಾರಲ್‌ಗಳನ್ನು ಹಿಡಿದುಕೊಂಡು ನೀರಿಗಾಗಿ ಅಲೆದಾಡುತ್ತಿದ್ದೇವೆ. ಅಯೋಗ್ಯ ಅಧಿಕಾರಿಗಳಿಂದಾಗಿ ನಮ್ಮ ಊರಿಗೆ ಈ ಸ್ಥಿತಿ ಬಂದಿದೆ’ ಪಟ್ಟಣದ ಮಹಿಳೆಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT