ಭಾನುವಾರ, ಆಗಸ್ಟ್ 14, 2022
21 °C
ನಿರ್ಮನಹಳ್ಳಿ ಗ್ರಾಮಸ್ಥರ ಸಭೆಯಲ್ಲಿ ನಿರ್ಧಾರ

ರಸ್ತೆ ನಿರ್ಮಿಸದಿದ್ದರೆ ಮತದಾನ ಬಹಿಷ್ಕಾರ: ಗ್ರಾಮಸ್ಥರ ಸಭೆಯಲ್ಲಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ನಿರ್ಮನಹಳ್ಳಿ ಗ್ರಾಮದಲ್ಲಿ ಹದಗೆಟ್ಟ ರಸ್ತೆ ದುರಸ್ತಿ ಹಾಗೂ ನಿರ್ಮನಹಳ್ಳಿಯಿಂದ ನ್ಯಾಲಹಳ್ಳಿ ಗ್ರಾಮದ ವರೆಗೆ ರಸ್ತೆ ನಿರ್ಮಿಸದಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಕ್ಕೆ ಗ್ರಾಮದ ಪ್ರಮುಖರು ನಿರ್ಧರಿಸಿದ್ದಾರೆ.

ಸೋಮವಾರ ಗ್ರಾಮದಲ್ಲಿ ಸಭೆ ಸೇರಿದ ಮುಖಂಡರು, ‘ಸುಮಾರು ವರ್ಷಗಳಿಂದ ಗ್ರಾಮದಲ್ಲಿ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಎಂದು ಅನೇಕ ಸಲ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಅವರ್‍ಯಾರು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ’ ಎಂದು ದೂರಿದರು.

‘ಹದಗೆಟ್ಟ ರಸ್ತೆ, ಗ್ರಾಮದ ರಸ್ತೆ ಮಧ್ಯೆ ನೀರು ತುಂಬಿರುವುದರಿಂದ ಚುನಾವಣೆಯ ಬೂತ್‌ ಸಂಖ್ಯೆ 88ಕ್ಕೆ ತೆರಳಲು, ಪಂಚಾಯಿತಿ ಕೇಂದ್ರ ಬ್ಯಾಲಹಳ್ಳಿಗೆ ಹೋಗಲು ಗ್ರಾಮಸ್ಥರು, ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಗಿದೆ. ರಸ್ತೆ ನಿರ್ಮಾಣಕ್ಕೆ ಜಮೀನಿಗಾಗಿ ಇಬ್ಬರ ಮಧ್ಯೆ ತಕರಾರು ಇದೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇತ್ಯರ್ಥ ಪಡಿಸಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ’ ಎಂದು ತಿಳಿಸದ್ದಾರೆ.

‘ಈ ವಿಷಯ ಸಂಬಂಧದ ಪತ್ರಕ್ಕೆ ನೂರಕ್ಕೂ ಹೆಚ್ಚು ಜನ ಸಹಿ ಮಾಡಿರುವ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸುತ್ತಿದ್ದೇವೆ’ ಎಂದು ಪ್ರಮುಖರಾದ ನೀಲಕಂಠರಾವ್‌ ಚನ್ನಮಲ್ಲಯ್ಯ, ಪ್ರಹ್ಲಾದ ಗುಂಡಪ್ಪ, ಶರಣಪ್ಪ ಗುರುಶಾಂತಪ್ಪ, ಶರಣಪ್ಪ ಮಾಲಿಪಾಟೀಲ, ಶಿವಕುಮಾರ ಪಾಟೀಲ, ಪುಂಡಲಿಕಪ್ಪಾ ಹಾಲಹಳ್ಳೆ, ನೀಲಕಂಠ ಪಾಟೀಲ, ಅಪ್ಪಾರಾವ್‌ ವಡಗಾಂವೆ, ಜ್ಞಾನೇಶ್ವರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.