ಭಾನುವಾರ, ಜೂಲೈ 5, 2020
28 °C
ಮೆಹಕರ: ಲಾಕ್‍ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಂಡ ಗ್ರಾಮಸ್ಥರು

ಪ್ರತಿ ಮನೆಗೂ ಇಂಗುಗುಂಡಿ: ಗುರಿ

ಬಸವರಾಜ್ ಎಸ್.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ (ಬೀದರ್ ಜಿಲ್ಲೆ): ತಾಲ್ಲೂಕಿನ ಮೆಹಕರ ಗ್ರಾಮಸ್ಥರು ಸ್ವಚ್ಛ ಮನೆ-ಸ್ವಚ್ಛ ಗ್ರಾಮಕ್ಕೆ ಪಣ ತೊಟ್ಟಿದ್ದಾರೆ. ಗ್ರಾಮವನ್ನು ಚರಂಡಿ ರಹಿತವಾಗಿಸಲು ಮತ್ತು ಅಂತರ್ಜಲ ಮಟ್ಟ ವೃದ್ಧಿಸಲು ಪ್ರತಿ ಮನೆಗೆ ಇಂಗು ಗುಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಲಾಕ್‌ಡೌನ್‌ ಅವಧಿಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. 

ಗ್ರಾಮದಲ್ಲಿ 18 ಸಾವಿರ ಜನಸಂಖ್ಯೆಯಿದ್ದು, ಪಶುಗಳು ಸೇರಿ 30 ಸಾವಿರ ಜೀವಿಗಳು ಇವೆ. ವ್ಯಕ್ತಿಯೊಬ್ಬನಿಂದ ನಿತ್ಯ ಪೋಲಾಗುವ 100 ಲೀಟರ್ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಏಪ್ರಿಲ್ 26ರಂದು ಬಸವ ಜಯಂತಿಯಲ್ಲಿ ಮೇಹಕರ ಮಠದ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯರು ನೀರಿನ ಇಂಗು ಗುಂಡಿ ನಿರ್ಮಿಸುವ ವಿಷಯ ಪ್ರಸ್ತಾಪಿಸಿದೆರು.

ಇದಕ್ಕೆ ಸಮ್ಮತಿ ನೀಡಿದ ಗ್ರಾಮದ ಎಲ್ಲ ಓಣಿಗಳ 1200 ಮನೆಗಳ ಕುಟುಂಬದ ಸದಸ್ಯರು ಸ್ವಂತ ಖರ್ಚಿನಲ್ಲಿ 4 ಅಡಿ ಅಗಲ ಮತ್ತು ಉದ್ದದ ಇಂಗು ಗುಂಡಿ ನಿರ್ಮಿಸಿಕೊಳ್ಳಲು ಮುಂದಾದರು.

‘ತ್ಯಾಜ್ಯ ನೀರು ಸಂಸ್ಕರಣೆಗೊಂಡು ಭೂಮಿ ಸೇರುವಂತಾಗಲು ಇಂಗು ಗುಂಡಿಗಳಲ್ಲಿ ಸಿಮೆಂಟಿನ ತೊಟ್ಟಿ ಬಳಸುತ್ತೇವೆ. ಪ್ರತಿ ಜೀವಿ ಬಳಸುವ 100 ಲೀಟರ್ ನೀರಿನ ಲೆಕ್ಕಾಚಾರ ಹಾಕಿದರೆ, ನಿತ್ಯ 30 ಲಕ್ಷ ಲೀಟರ್ ನೀರು ಪೋಲು ಆಗುತ್ತಿದೆ. ಇಂಗು ಗುಂಡಿ ಮೂಲಕ ಆ ನೀರನ್ನು ಉಳಿಸಬಹುದು’ ಎಂದು ರಾಜೇಶ್ವರ ಶಿವಾಚಾರ್ಯರು ತಿಳಿಸಿದರು.

‘ಇಂಗು ಗುಂಡಿಯ ಮೂಲಕ ನೀರು ಭೂಮಿಗೆ ಸೇರುತ್ತದೆ ಅಲ್ಲದೇ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಚರಂಡಿಯಿಲ್ಲದೇ ಗ್ರಾಮವು ಸ್ವಚ್ಛ ಮತ್ತು ಸುಂದರ ಪರಿಸರ ಹೊಂದಲಿದೆ. ಸರ್ಕಾರಿ ಅನುದಾನ ಅಥವಾ ಯೋಜನೆಗೆ ಕಾಯ್ದೇ ಗ್ರಾಮಸ್ಥರು ಸ್ವಂತ ಹಣದಿಂದಲೇ ಇಂಗು ಗುಂಡಿ ನಿರ್ಮಿಸಿಕೊಳ್ಳುತ್ತಿದ್ದಾರೆ’ ಎಂದು ಅವರು ವಿವರಿಸಿದರು.


ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದಲ್ಲಿ ಇಂಗು ಗುಂಡಿಗಳ ನಿರ್ಮಾಣವನ್ನು ವೀಕ್ಷಿಸುತ್ತಿರುವ ರಾಜೇಶ್ವರ ಶಿವಾಚಾರ್ಯರು

‘ಗ್ರಾಮದಲ್ಲಿ 2016ಕ್ಕೂ ಮುಂಚೆ ಜಾತಿ, ಮೂರ್ತಿಗಳ ಹೆಸರಿನಲ್ಲಿ ಆಗಾಗ್ಗೆ ಗಲಾಟೆ ನಡೆಯುತಿತ್ತು. ಗುರುಗಳ ಪ್ರೇರಣೆಯಿಂದ 2016ರಲ್ಲಿ ಗ್ರಾಮದ 22 ಮೂರ್ತಿಗಳನ್ನು ತೆಗೆದು ಮೂರ್ತಿ ಮುಕ್ತ, ಭಾವೈಕ್ಯದ ಗ್ರಾಮವನ್ನಾಗಿ ಮಾಡಿದೆವು. ಎಲ್ಲರೂ ಒಗ್ಗಟ್ಟಿನಿಂದ ಬಾಳುತ್ತಿದ್ದೇವೆ’ ಎಂದು ಗ್ರಾಮಸ್ಥ ಗಜಾನಂದ ಮೊಳಕೀರೆ ತಿಳಿಸಿದರು.

ಶ್ರೀಗಳ ಮಾರ್ಗದರ್ಶನದ ಮೇರೆಗೆ ಗ್ರಾಮದ ಎಲ್ಲರೂ ಇಂಗುಗುಂಡಿ ನಿರ್ಮಿಸಿಕೊಳ್ಳಲು ಮುಂದಾಗಿರುವ ಮೂಲಕ ಆದರ್ಶ ಗ್ರಾಮ ರೂಪಿಸಲು ಸಹಕರಿಸುತ್ತಿದ್ಧಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ ತೋರ್ಣೆ ಹೇಳಿದರು.

ಗ್ರಾಮಸ್ಥರ ಕಾರ್ಯ ಎಲ್ಲರಿಗೂ ಮಾದರಿ ಆಗಿದೆ. ಸರ್ಕಾರದ ಯೋಜನೆಗಳ ಸಂಪೂರ್ಣ ಸದ್ಬಳಕೆಗೆ ಗ್ರಾಮಸ್ಥರನ್ನು ಪ್ರೋತ್ಸಾಹಿಸಲಾಗುವುದು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯ್ಕರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು