ಔರಾದ್: ಕಲುಷಿತ ನೀರು ಪೂರೈಕೆ

ಶನಿವಾರ, ಏಪ್ರಿಲ್ 20, 2019
32 °C
ಕಾರಂಜಾ ಜಲಾಶಯದಿಂದ ನೀರು ಹರಿಸಲು ಜನರ ಆಗ್ರಹ

ಔರಾದ್: ಕಲುಷಿತ ನೀರು ಪೂರೈಕೆ

Published:
Updated:
Prajavani

ಔರಾದ್: ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ತೀವ್ರ ಸಮಸ್ಯೆ ಉಲ್ಬಣಿಸಿದ್ದು, ಜನರು ಹೋರಾಟದ ಹಾದಿ ಹಿಡಿದಿದ್ದಾರೆ.

ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುವ ಹಾಲಹಳ್ಳಿ ಬ್ಯಾರೇಜ್ ಎರಡು ತಿಂಗಳ ಹಿಂದೆಯೇ ಬರಿದಾಗಿದೆ. ಅಲ್ಲಲ್ಲಿ ಇರುವ ಕೊಳವೆ ಬಾವಿ ಮತ್ತು ತೇಗಂಪುರ ಕೆರೆಯಿಂದ ಇಷ್ಟು ದಿನಗಳ ಕಾಲ ನೀರು ಪೂರೈಸಲಾಗಿದೆ. ಆದರೆ, ಅದೂ ಕೂಡ ಖಾಲಿಯಾಗಿದೆ. ಬೋರಾಳ ಬಳಿಯ ಎಲ್ಲ ಐದು ಕೊಳವೆ
ಬಾವಿಗಳು ಬತ್ತಿ ಹೋಗಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ತೇಗಂಪುರದ ಕೆರೆ ನೀರನ್ನು ಶುದ್ಧೀಕರಿಸದೆ ನೇರವಾಗಿ ಪೂರೈಕೆ ಮಾಡುತ್ತಿದ್ದಾರೆ. ಈ ನೀರು ಬಳಸಲೂ ಯೋಗ್ಯವಲ್ಲ. ಸ್ನಾನ ಮಾಡಿದರೆ ಚರ್ಮ ರೋಗ ಬರುತ್ತಿದೆ. ಈ ಕಾರಣ ಜನರು ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಇನ್ನು ಬಡವರಿಗೆ ಇದೇ ನೀರು ಅನಿವಾರ್ಯವಾಗಿದೆ.

ಪಟ್ಟಣದಲ್ಲಿ ನೀರಿನ ಸಮಸ್ಯೆ ವಿಪರಿತವಾಗಿದೆ. ಬಳಕೆಗೆ ಅನುಕೂಲವಾಗಲಿ ಎಂದು ತೇಗಂಪುರ ಕೆರೆ ನೀರು ಬಿಡಲಾಗುತ್ತಿದೆ. ಅದೂ ಈಗ ಮುಗಿದು ಹೋಗಿದೆ. ಪಟ್ಟಣದ ವ್ಯಾಪ್ತಿಯ ಭವಾನಿ ನಗರ ತಾಂಡಾ, ದೇಶಮುಖ ತಾಂಡಾ, ಖೀರಾನಾಯಕ ತಾಂಡಾಗಳ ಜನರಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ.

‘ಪಟ್ಟಣದ ಕೆಲ ಬಡಾವಣೆಗಳಿಗೂ ಟ್ಯಾಂಕರ್ ಮೂಲಕ ನೀರು ಕೊಡಬೇಕಾಗಿದೆ. ಹಾಲಹಳ್ಳಿ ಬ್ಯಾರೇಜ್‌ಗೆ ಮಾಂಜ್ರಾ ಜಲಾಶಯದಿಂದ ನೀರು ಹರಿಸಿದರೆ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಲಿದೆ. ಈ ವಿಷಯ ಜಿಲ್ಲಾಡಳಿತಕ್ಕೂ ಮನವರಿಕೆ ಮಾಡಿಕೊಡಲಾಗಿದೆ' ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿಠಲರಾವ ಹಾದಿಮನಿ ತಿಳಿಸಿದ್ದಾರೆ.

'ಔರಾದ್ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸದೆ ಇರುವುದು ಮಾನವ ಹಕ್ಕು ಉಲ್ಲಂಘನೆ. ಈ ಕುರಿತು ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ಹೂಡಲಾಗಿದೆ‘ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ತಿಳಿಸಿದ್ದಾರೆ.

ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.

'ಪಟ್ಟಣದಲ್ಲಿ ವಾಂತಿಬೇಧಿ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಕಲುಷಿತ ನೀರು ಪೂರೈಸುವುದು ತಕ್ಷಣ ನಿಲ್ಲಿಸಬೇಕು' ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಲ್ಲಪ್ಪ ಮಜಗೆ ಪಟ್ಟಣ ಪಂಚಾಯಿತಿಗೆ ಲಿಖಿತ ದೂರು ನೀಡಿದ್ದಾರೆ.

*
ಪಟ್ಟಣದಲ್ಲಿರುವ ಎಲ್ಲ ನೀರಿನ ಮೂಲಗಳು ಬರಿದಾಗಿವೆ. ಹೀಗಾಗಿ ಜನರಿಗೆ ಅನುಕೂಲವಾಗಲಿ ಎಂದು ತೇಗಂಪುರ ಕೆರೆಯ ನೀರು ಹರಿಸುತ್ತಿದ್ದೇವೆ.
-ವಿಠಲರಾವ ಹಾದಿಮನಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

*
ತೇಗಂಪುರ ಕೆರೆ ನೀರನ್ನು ಶುದ್ಧೀಕರಿಸದೆ ನೇರವಾಗಿ ಪೂರೈಕೆ ಮಾಡುವುದು ಸರಿಯಲ್ಲ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
-ಡಾ. ಕಲ್ಲಪ್ಪ ಮಜಗೆ, ತಾಲ್ಲೂಕು ಆರೋಗ್ಯಾಧಿಕಾರಿ, ಔರಾದ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !