54 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ

ಶುಕ್ರವಾರ, ಏಪ್ರಿಲ್ 19, 2019
27 °C
ಕಮಲನಗರ: 33 ಕೊಳವೆ ಬಾವಿಗಳಿದ್ದರೂ ನೀರಿನ ಸಮಸ್ಯೆ ಉಲ್ಬಣ

54 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ

Published:
Updated:
Prajavani

ಕಮಲನಗರ: ತಾಲ್ಲೂಕಿನ 54 ಗ್ರಾಮಗಳಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜನ–ಜಾನುವಾರುಗಳಿಗೆ ಕುಡಿಯುವ ನೀರು ದೊರಕದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಕೆರೆ, ತೆರೆದ ಬಾವಿ, ಕೈಪಂಪು ಮತ್ತು ಕೊಳವೆ ಬಾವಿಗಳಿಂದ ನೀರಿನ ಮೂಲಗಳು ಬತ್ತಿದ್ದು ಜನರ ಬದುಕು ದುಸ್ತರವಾಗುತ್ತಿದೆ.

ದಾಬಕಾ, ಠಾಣಾಕುಶನೂರು ಹಾಗೂ ವಿವಿಧೆಡೆ ಗ್ರಾಮಗಳಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ.

ಕೋರೆಕಲ್ ಗ್ರಾಮದ ಕೆರೆಯಲ್ಲಿ  ಶೇ 25 ಮಾತ್ರ ನೀರು ಉಳಿದಿದೆ. ಹೀಗಾಗಿ ಠಾಣಾಕುಶನೂರು ವಲಯದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ನೀರು ಕುಡಿದರೆ ಅಪಾಯ ತಪ್ಪಿದ್ದಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಗಿರೀಶ್‌ ವಡಿಯಾರ್ ಆತಂಕ ವ್ಯಕ್ತಪಡಿಸುತ್ತಾರೆ.

ದಾಬಕಾ ವಲಯದಲ್ಲಿನ ಕೆರೆಯಲ್ಲಿಯೂ ಸಹ ನೀರಿನ ಬವಣೆ ಹೆಚ್ಚಾಗಿದೆ. ಹೀಗಾಗಿ ಬಹುತೇಕ ಗ್ರಾಮಗಳಲ್ಲಿ ತೀರಾ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜೊತೆಗೆ ಖಾಸಗಿ ಕೊಳವೆ ಬಾವಿಗಳಿಂದಲೂ ನೀರು ಪಡೆದು ಜನರಿಗೆ ನೀಡಲಾಗುತ್ತಿದೆ. ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಸುರೇಶ ದಾಬಕಾ ಹೇಳಿದರು.

ಕಮಲನಗರದಲ್ಲಿನ 45 ಕೊಳವೆ ಬಾವಿಗಳಲ್ಲಿ 12 ಕೊಳವೆಬಾವಿಗಳು ಬತ್ತಿವೆ. 33 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ವಾರ್ಡ್‌ ಸಂಖ್ಯೆ 1 ಮತ್ತು 8 ರಲ್ಲಿಯೂ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾಶ ಫುಲೆ ತಿಳಿಸಿದ್ದಾರೆ.

ಇಲ್ಲಿನ ಐಬಿ ಬಳಿ ಇರುವ ಬಾವಿಗೆ ಪೈಪ್‌ಲೈನ್‌ ಅಳವಡಿಸಿ ನೀರು ಪಡೆದು ನಲ್ಲಿಗಳ ಮೂಲಕ ಕಮಲನಗರ ವ್ಯಾಪ್ತಿಯ ಹಿಮ್ಮತನಗರ, ವಿಶ್ವಾಸ ನಗರ, ಭೀಮನಗರ ಮತ್ತು ಸಿದ್ಧಾರ್ಥ ನಗರದ ಜನರಿಗೆ ನೀರು ನೀಡಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲಾಗಿದೆ. ತುರ್ತು ವೇಳೆ ಟ್ಯಾಂಕರ್‌ ಮೂಲಕವೂ ನೀರು ನೀಡಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಪ್ರವೀಣ ಕದಂ ತಿಳಿಸಿದ್ದಾರೆ.

ಔರಾದ್ ಮತ್ತು ಕಮಲನಗರ ತಾಲ್ಲೂಕಿನ ಒಟ್ಟು 75 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಸಂತಪುರ, ಮಸ್ಕಲ್ ಮತ್ತು ಚಂದನವಾಡಿ ಈ ಮೂರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಉಳಿದ 15 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದ ಗ್ರಾಮಗಳಲ್ಲಿ ಖಾಸಗಿ ನೀರಿನ ಮೂಲವನ್ನು ಗುರುತಿಸಲಾಗಿದೆ. ಆ ಮಾಲೀಕರ ಜತೆ ಒಪ್ಪಂದ ಮಾಡಿಕೊಂಡು ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಖಾಸಗಿ ಕೊಳವೆ ಬಾವಿ ಮತ್ತು ತೆರೆದ ಬಾವಿಯಲ್ಲಿ ನೀರು ಇದ್ದರೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ನೀರು ಪಡೆದು ಜನರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ನೀರು ಸರಬರಾಜು ವಿಭಾಗದ ಎಂಜಿನಿಯರ್ ರವಿಕಿರಣ ಪೊದ್ದಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

*
4 ದಿನಕ್ಕೆ ಒಂದು ಸಲ ನೀರು ಬಿಡಲಾಗುತ್ತಿದೆ. ಇದು ಸಾಲುತ್ತಿಲ್ಲ. ಸಂಬಂಧಪಟ್ಟವರು ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಬೇಕು.
-ಇಮಾಮ್ ಸಾಬ್, ಬಡಾವಣೆ ನಿವಾಸಿ

*
ಸಾಕಷ್ಟು ಅನುದಾನ ಖರ್ಚು ಮಾಡಿದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಕೆಲ ಕೀಡಿಗೇಡಿಗಳು ಪೈಪ್‍ಲೈನ್‌ ಹಾಳು ಮಾಡಿದ್ದರಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ.
-ವೀಣ ಕದಂ, ಕಮಲನಗರ ಗ್ರಾಮ ಪಂಚಾಯಿತಿ ಸದಸ್ಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !