ಮಂಗಳವಾರ, ಜೂನ್ 2, 2020
27 °C
ಸಚಿವ ಪ್ರಭು ಚವಾಣ್ ಅವರ ಸೂಚನೆಗೂ ಸಿಗದ ಸ್ಪಂದನೆ

ಕೊರೊನಾ ಆತಂಕದಲ್ಲಿಯೂ ನೀರಿಗೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಕೊರೊನಾ ಸೋಂಕಿನ ಕಾಟದ ನಡುವೆ ಜನ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಜಿಲ್ಲಾಡಳಿತ ಕೊರೊನಾ ಸೋಂಕಿನ ವಿರುದ್ಧ ಕಳೆದ 15 ದಿನಗಳಿಂದ ಹೋರಾಟ ಮಾಡುತ್ತಾಲೇ ಇದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ನಡುವೆಯೇ ಬಹುತೇಕ ಜನರು ಇಂದಿಗೂ ಕುಡಿಯುವ ನೀರು ಸೇರಿದಂತೆ ದಿನಸಿ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ.

ಮನೆಯಿಂದ ಯಾರೂ ಹೊರಗೆ ಬರಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ, ತಾಲ್ಲೂಕಿನ ಕೆಲ ಗ್ರಾಮ ಮತ್ತು ತಾಂಡಾಗಳಲ್ಲಿ ಕುಡಿಯಲು ನೀರು ಸಿಗದೆ ಜನ ಅನಿವಾರ್ಯವಾಗಿ ಹೊರ ಬರಬೇಕಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ನಿತ್ಯ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಸಮಸ್ಯೆ ಗಂಭೀರತೆ ಅರಿತ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಈಚೆಗೆ ಬಾರ್ಡರ್‌ ತಾಂಡಾಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

'ತಾಂಡಾದಲ್ಲಿ 1500 ಜನ ಇದ್ದಾರೆ. ಇರುವ ಒಂದು ಕೊಳವೆ ಬಾವಿ ಬತ್ತಿ ಹೋಗಿದೆ. ಹೀಗಾಗಿ ನಮಗೆ ಈಗ ಕೊರೊನಾ ವೈರಸ್‌ಗಿಂತ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ' ಎಂದು ತಾಂಡಾ ನಿವಾಸಿಗಳು ಸಚಿವರ ಎದುರು ಅಳಲು ತೋಡಿಕೊಂಡರು.

'ಇಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜನ ಹೊರಗೆ ಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ತೀವ್ರ ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು‘ ಎಂದು ಸಚಿವರು ಹೇಳಿ ವಾರ ಕಳೆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ‘ ಎಂದು ತಾಂಡಾದ ಗ್ರಾ.ಪಂ. ಸದಸ್ಯ ಮೋಹನ್ ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.

ಬಾರ್ಡರ್‌ ತಾಂಡಾದಲ್ಲಿ ಸದ್ಯ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ತಿಳಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಾಣಿಕರಾವ ಪಾಟೀಲ ತಿಳಿಸಿದ್ದಾರೆ.

ತಾಲ್ಲೂಕಿನ ಸಂತಪುರ, ಮಸ್ಕಲ್ ತಾಂಡಾ, ಡಿಗ್ಗಿ (ಪರಿಶಿಷ್ಟ ಜಾತಿ) ಗಲ್ಲಿ, ಕೋರ್ಯಾಳ, ಬಸನಾಳ, ಗಾಂಧಿನಗರ, ಕಿಶನ ನಾಯಕ ತಾಂಡಾ, ಚಾಂಡೇಶ್ವರ, ಮೆಡಪಳ್ಳಿ, ಬಲ್ಲೂರ (ಜೆ), ನಾಗೂರ (ಎನ್), ನಾಗೂರ (ಎಂ) ಗ್ರಾಮಗಳ ಜನ ನೀರಿಗಾಗಿ ಪರದಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.