ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ | ಕೊರೊನಾ ಆತಂಕದ ಜೊತೆಗೆ ನೀರಿಗೂ ಪರದಾಟ

ಗ್ರಾಮಪಂಚಾಯಿತಿ ಆಡಳಿತ ವೈಖರಿ ವಿರುದ್ಧ ಆಕ್ರೋಶ
Last Updated 23 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕಮಲನಗರ: ಇಲ್ಲಿನ ಪಂಚಶೀಲನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಬಡಾವಣೆ ಜನರು ನೀರಿಗಾಗಿ ಪರದಾಡುವಂತಾಗಿದೆ.

500ರಷ್ಟು ಜನಸಂಖ್ಯೆ ಹೊಂದಿರುವ ಈ ವಾರ್ಡ್‍ನಲ್ಲಿ 4 ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ನೀರಿನ ಸಮಸ್ಯೆ ಪರಿಹರಿಸುವ ಕುರಿತು ನಿವಾಸಿಗಳು ಹಲವು ಬಾರಿ ಮನವಿಪತ್ರ ಸಲ್ಲಿಸಿದ್ದಾರೆ. ಆದರೆ, ಈವರೆಗೆ ಅವರಿಗೆ ಸ್ಪಂದನೆ ಸಿಕ್ಕಿಲ್ಲ.

ಈ ಮೊದಲು ವಿಶ್ವ ಬ್ಯಾಂಕ್‌ ಅನುದಾನದಡಿ ನಿರ್ಮಿತ ಸೆಪ್ಟಿಕ್ ಟ್ಯಾಂಕ್ ಮೂಲಕ ಈ ಬಡಾವಣೆ ಜನರಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಗೊಂಡ ಕಾರಣ ಬಡಾವಣೆಗೆ ನೀರು ಪೂರೈಕೆಗೆ ಅಳವಡಿಸಲಾಗಿದ್ದ ಪೈಪ್‍ಲೈನ್ ತುಂಡಾಯಿತು. ಆಗಿನಿಂದ ನೀರಿನ ಸಮಸ್ಯೆ ಉದ್ಭವಿಸಿತು.

ಕೊರೊನಾದಿಂದ ಇಡೀ ಕಮಲಾಪುರ ಲಾಕ್‍ಡೌನ್ ಆಗಿದ್ದು, ಜನರು ಮನೆಯಿಂದ ಹೊರಬರಲು ಆಗದಂತಹ ಪರಿಸ್ಥಿತಿ ಇದೆ. ಇದರ ಮಧ್ಯೆ ನೀರಿನ ಸಮಸ್ಯೆ ತಲೆದೋರಿದ್ದು, ಏನೂ ಮಾಡಬೇಕು ಎಂಬ ದಿಕ್ಕು ತೋಚದ ಸ್ಥಿತಿಯಲ್ಲಿ ಜನರಿದ್ದಾರೆ.

‘ಪಕ್ಕದ ಜೋಶಿ ಗಲ್ಲಿಯಲ್ಲಿರುವ ಕೊಳವೆಬಾವಿಯಿಂದ ನೀರು ತರುತ್ತೇವೆ. ಅದಕ್ಕಾಗಿ ದೀರ್ಘ ಕಾಲದವರೆಗೆ ಸರದಿಯಲ್ಲಿ ನಿಲ್ಲಬೇಕು. ಆದರೆ, ಕೊಳವೆಬಾವಿಯಲ್ಲಿನ ನೀರು ಸಹ ಕಡಿಮೆ ಆಗಬಹುದು ಎಂಬ ಆತಂಕದಿಂದ ಆ ಗಲ್ಲಿಯ ಜನರು ನಮಗೆ ನೀರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ನಿವಾಸಿಗಳಾದ ಕೇವಳಾಬಾಯಿ ಡೊಂಗರೆ ಮತ್ತು ಅನಿತಾಬಾಯಿ ಶಿಂಧೆ ಅಳಲು ತೋಡಿಕೊಂಡರು.

‘ಪಂಚಶೀಲನಗರದಿಂದಎರಡು ಸಲ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಮತ್ತು ಸದ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿರುವ ಮಥುರಾಬಾಯಿ ಕದಮ್ ಅವರು ಚುನಾವಣೆ ಬಳಿಕ ಒಮ್ಮೆಯೂ ನಮ್ಮ ಬಡಾವಣೆಗೆ ಭೇಟಿ ನೀಡಿಲ್ಲ. ಇಲ್ಲಿನ ನೀರಿನ ಸಮಸ್ಯೆ ಕುರಿತು ಅವರಿಗೂ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಸುಭಾಷ ಡೊಂಗರೆ ತಿಳಿಸಿದರು.

‘ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಪಂಚಾಯಿತಿ ಜನರ ಸಮಸ್ಯೆ ಬಗೆಹರಿಸಲು ಆಸಕ್ತಿ ತೋರುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಜನರು ಎಷ್ಟೇ ಹೋರಾಡಿದರೂ ಸಮರ್ಪಕವಾಗಿ ಸ್ಪಂದನೆ ಸಿಗದಿರುವುದು ಬೇಸರದ ಸಂಗತಿ. ಪಂಚಾಯಿತಿಯಲ್ಲಿ ಪಕ್ಷಪಾತಿ ದೋರಣೆ ಅನುಸರಿಸುತ್ತಿರುವ ಕಾರಣ ಈ ಸಮಸ್ಯೆ ಉದ್ಭವಿಸಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಲಾಜಿ ತೇಲಂಗ ಆರೋಪಿಸಿದರು.

‘ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಒಂದು ಕೊಳವೆ ಬಾವಿ, ಪೈಪ್‍ಲೈನ್ ಮಂಜೂರಾಗಿತ್ತು. ಇದರಿಂದ ನಮ್ಮ ಬಡಾವಣೆ ಜನರು ಖುಷಿ ಆಗಿದ್ದರು. ಕಾಮಗಾರಿಯ ಭಾಗವಾಗಿ ಪೈಪ್‍ಲೈನ್‍ಗಾಗಿ ರಸ್ತೆ ಅಗೆಯಲಾಗಿತ್ತು. ಆದರೆ ಏಕಾಏಕಿ ಕಾಮಗಾರಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಗೊತ್ತಾಗಿದೆ. ಇದರಿಂದ ತುಂಬಾ ಬೇಸರವಾಗಿದೆ‘ ಎಂದು ಕರುಣಾ ಡೊಂಗರೆ, ಶಿವಕುಮಾರ ತಾಂದಳೆ ದೂರಿದರು.

*
ಕರೊನಾ ಲಾಕ್‍ಡೌನ್‍ದಿಂದ ಮನೆ ಹೊರ ಬರುವಂತಿಲ್ಲ. ನೀರಿಲ್ಲದೇ ಮನೆಯಲ್ಲಿ ಕೂಡುವಂತಿಲ್ಲ. ಜನಪ್ರತಿನಿಧಿಗಳು ಚುನಾವಣೆ ವೇಳೆ ನಿಮಗೆ ನೀರು, ಸೌಕರ್ಯ ಒದಗಿಸುವ ಭರವಸೆ ನೀಡುತ್ತಾರೆ. ಆದರೆ, ನಾವು ಹನಿ ನೀರಿಗೂ ಪರದಾಡುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ.
-ಭಾನುಬಿ ಶೇಕ್, ಬಡಾವಣೆ ನಿವಾಸಿ

*
ಪಂಚಶೀಲನಗರದಲ್ಲಿ ಉಲ್ಬಣಗೊಂಡಿರುವ ನೀರಿನ ಸಮಸ್ಯೆ ಕುರಿತು ಪಂಚಾಯಿತಿ ಸಭೆಯಲ್ಲಿ ಅನೇಕ ಸಲ ಮಾತನಾಡಿರುವೆ. ಒಂದೂವರೆ ವರ್ಷದಿಂದ ಇಲ್ಲಿ ನೀರಿನ ಸಮಸ್ಯೆ ಇದೆ. ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯಿತಿ ಕೂಡಲೇ ಸ್ಪಂದಿಸಬೇಕು.
-ನಾಗೇಶ ಪತ್ರೆ, ಬಡಾವಣೆ ಗ್ರಾಪಂ ಸದಸ್ಯ

*
ಪಂಚಶೀಲನಗರದಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಕ್ರಿಯಾ ಯೋಜನೆ ರೂಪಿಸುವ ಮೂಲಕ 15 ದಿನಗಳ ಒಳಗೆ ಅಲ್ಲಿ ಕೊಳವೆಬಾವಿ ಕೊರೆಸಲು ಕ್ರಮ ಕೈಗೊಂಡು, ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು.
- ವಿನೋದಕುಮಾರ ಕುಲಕರ್ಣಿ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT